
ಮೊಸಳೆ ಸೆರೆ ವೆಚ್ಚ: ಬಿಡುಗಡೆಯಾಗದ ಹಣದಿಂದ ಅರಣ್ಯ ಇಲಾಖೆಗೆ ಆರ್ಥಿಕ ಹಿನ್ನಡೆ
ವಡಗೇರಾ: ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಮೊಸಳೆಗಳನ್ನು ಸೆರೆ ಹಿಡಿದ ಕಾರ್ಯಾಚರಣೆಗಳಿಗೆ ಅರಣ್ಯ ಇಲಾಖೆ ಮಾಡಿದ ವೆಚ್ಚವನ್ನು ಸರ್ಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ. ಪರಿಣಾಮ, ಮೊಸಳೆ ಹಿಡಿತ ಕಾರ್ಯಾಚರಣೆಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆರ್ಥಿಕ ಹಿನ್ನೆಡೆಯಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಭೀಮಾ ಮತ್ತು ಕೃಷ್ಣಾ ನದಿಗಳು ಹರಿಯುವುದರಿಂದ ಮೊಸಳೆಗಳು ಆಗಾಗ ಜಮೀನನಲ್ಲಿ ಪ್ರತ್ಯಕ್ಷವಾಗುತ್ತಿರುತ್ತವೆ. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಅವುಗಳನ್ನು ಸೇರೆ ಹಿಡಿದು ರೈತರ ಆತಂಕ ದೂರ ಮಾಡುವ ಕಾರ್ಯ ಮಾಡುತ್ತದೆ.
‘ಮೊಸಳೆ ಸೆರೆ ಹಿಡಿಯುವ ಕಾರ್ಯಚರಣೆ ಸಂದರ್ಭದಲ್ಲಿ ಬಲೆ, ಮೀನುಗಾರರು ಹಾಗೂ ಕಾರ್ಮಿಕರ ಕೂಲಿ, ಖಾಸಗಿ ವಾಹನಕ್ಕೆ ಬಾಡಿಗೆ ಸೇರಿದಂತೆ ಹಲವಾರು ಖರ್ಚುಗಳು ಇರುತ್ತವೆ. ಸಾಮಾನ್ಯವಾಗಿ ಪ್ರಕರಣವೊಂದಕ್ಕೆ ಸುಮಾರು ₹15,000 ಖರ್ಚು ತಗುಲುತ್ತದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.
ಹೀಗೆ ಮೊಸಳೆ ಸೆರೆ ಹಿಡಿದ ಬಳಿಕ ಅದಕ್ಕೆ ತಗುಲಿದ ವೆಚ್ಚಗಳ ರಸೀದಿಗಳನ್ನು ಸರ್ಕಾರಕ್ಕೆ ಅರಣ್ಯ ಇಲಾಖೆ ಸಲ್ಲಿಸಬೇಕು. ತದನಂತರ ಆ ಬಿಲ್‌ನ್ನು ಬಿಡುಗಡೆಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 35 ಪ್ರಕರಣಗಳು ಜರುಗಿವೆ. ಆದರೆ, ಸರ್ಕಾರ ಇವರೆಗೂ ಈ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಮಾಡಿರುವ ವೆಚ್ಚದ ಬಿಲ್‌ಗಳನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಮೊಸಳೆ ಪ್ರತ್ಯಕ್ಷವಾದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವೆಚ್ಚದ ಚಿಂತೆ ಕಾಡುತ್ತಿದೆ
‘ಸಕಾಲದಲ್ಲಿ ಸರ್ಕಾರದ ಅನುದಾನ ಬಿಡುಗಡೆಯಾಗದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಂತ ದುಡ್ಡಿನಲ್ಲಿ ಮೊಸಳೆ ಹಿಡಿದು ಬೇರೆಡೆ ಸಾಗಿಸುವ ಕಾರ್ಯ ಮಾಡುವಂತಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಬಾಕಿ ಉಳಿಸಿಕೊಂಡಿರುವ ಬಿಲ್‌ನ್ನು ಅರಣ್ಯ ಇಲಾಖೆಗೆ ಬಿಡುಗಡೆಗೊಳಿಸಬೇಕು’ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
‘ಕೃಷ್ಣಾ ನದಿಯಲ್ಲಿ ಹೆಚ್ಚಿನ ಸಂಖ್ಯೆ ಮೊಸಳೆಗಳಿವೆ. ಇದರಿಂದ ನದಿಯ ಹಿನ್ನೀರಿನ ಪ್ರದೇಶಗಳಾದ ವಡಗೇರಾ, ಹುಣಸಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮೊಸಳೆ ಜಮೀನುಗಳಿಗೆ ನಗ್ಗುವ ಪ್ರಕರಣಗಳು ಕಂಡುಬರುತ್ತವೆ. ಅಲ್ಲದೇ ಕೃಷ್ಣಾ ನದಿಯ ತಟದಲ್ಲಿ ಇರುವ ಗ್ರಾಮಗಳ ಜಾನುವಾರುಗಳಿಗೆ ಹಾಗೂ ಜನರಿಗೆ ಈ ಮೊಸಳೆಗಳು ಜೀವ ಹಾನಿಯನ್ನು ಮಾಡಿದ ಉದಾಹರಣೆಗಳು ಇವೆ’ ಎನ್ನುತ್ತಾರೆ ವಡಗೇರಾ ನಿವಾಸಿ ಶಿವಕುಮಾರ್ ಕೊಂಕಲ್.
‘ಈಗಾಗಲೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮೊಸಳೆಗಳನ್ನು ಹಿಡಿಯಲು ಮಾಡಿರುವ ವೆಚ್ಚವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. 2025-2026 ಸಾಲಿನ ಮೊಸಳೆಗಳನ್ನು ಹಿಡಿಯಲು ವೆಚ್ಚವಾದ ₹2,50,000 ಶೀಘ್ರದಲ್ಲಿಯೇ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಅಧಿಕಾರಿಗಳು ಕೆಲಸದಲ್ಲಿ ಉತ್ಸಾಹ ತೋರಬೇಕಾದರೆ ಕೂಡಲೇ ಮೊಸಳೆಗಳನ್ನು ಹಿಡಿಯಲು ಅರಣ್ಯ ಇಲಾಖೆಯವರು ಮಾಡಿರುವ ವೆಚ್ಚವನ್ನು ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಶರಣು ಇಟಗಿ, ಕರವೇ ಉತ್ತರ ಕರ್ನಾಟ ಸಂಚಾಲಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-30-1022483277