
ಕೆಜಿಎಫ್: ಸುರಕ್ಷತಾ ಕೇಂದ್ರದಿಂದ ಇಬ್ಬರು ಮಕ್ಕಳು ಪರಾರಿ
ಕೆಜಿಎಫ್: ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಸುರಕ್ಷತೆ, ಆರೈಕೆ, ಶಿಕ್ಷಣ ಹಾಗೂ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಿರುವ ನಗರದ ಪ್ಲೇಸ್ ಆಫ್ ಸೇಫ್ಟಿ (ಸುರಕ್ಷತಾ ಕೇಂದ್ರ) ದಿಂದ ಇಬ್ಬರು ಪರಾರಿಯಾಗಿರುವ ಘಟನೆ ಸಂಸ್ಥೆಯ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.
ನಗರದ ಮಸ್ಕಂನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯದ ಏಕೈಕ ಪ್ಲೇಸ್ ಆಫ್ ಸೇಫ್ಟಿ ಇದೆ. ಇದರಲ್ಲಿದ್ದ ಇಬ್ಬರು ಆರೋಪಿಗಳಾದ ಆಫನ್ ಮತ್ತು ಆಕಾಶ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ಮತ್ತೊಬ್ಬ ಆರೋಪಿ ಕಾರ್ತಿಕ್ ಸಹ ಪರಾರಿಯಾಗುವ ಯತ್ನದಲ್ಲಿದ್ದ. ಆದರೆ, ಆತ ಪ್ಲೇಸ್ ಆಫ್ ಸೇಫ್ಟಿಯಲ್ಲೇ ಉಳಿದುಕೊಂಡಿದ್ದಾನೆ. ಈ ವಿಚಾರವು ಸಿಬ್ಬಂದಿ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲಮಂದಿರದಲ್ಲಿಟ್ಟು, ನಂತರ ಹದಿನೆಂಟು ದಾಟಿದ ನಂತರ ವಿಚಾರಣೆ ಮುಗಿಯುವ ತನಕ ಪ್ಲೇಸ್ ಆಫ್ ಸೇಫ್ಟಿಯಲ್ಲಿಡಲಾಗುತ್ತಿದೆ. ಹೀಗಾಗಿ, ಪ್ಲೇಸ್ ಆಫ್ ಸೇಫ್ಟಿಯನ್ನು ಸುಧಾರಣೆಯ ನಿವಾಸ ಎಂದೂ ಕರೆಯಲಾಗುತ್ತದೆ. ಮಕ್ಕಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಬೇಕಾದ ವ್ಯವಸ್ಥೆಯಲ್ಲಿ ನಡೆದ ಈ ಘಟನೆ ಕರ್ತವ್ಯ ನಿರ್ವಹಣೆಯಲ್ಲಿನ ಲೋಪದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಪ್ಲೇಸ್ ಆಫ್ ಸೇಫ್ಟಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪರಾರಿಯಾದ ಇಬ್ಬರು ಆರೋಪಿಗಳ ಪೈಕಿ ಚಿಕ್ಕಬಾಣಾವರದ ಅಫನ್ ವಿರುದ್ಧ ಪೋಕ್ಸೊ ಹಾಗೂ ಹಾಸನದ ಆಕಾಶ್ ವಿರುದ್ಧ ಹೊಡೆದಾಟದ ಪ್ರಕರಣ ದಾಖಲಾಗಿತ್ತು. ಪರಾರಿಯಾಗಲು ವಿಫಲ ಯತ್ನ ಮಾಡಿದ್ದ ಕಾರ್ತಿಕ್ ಅತ್ಯಂತ ಕುಖ್ಯಾತನಾಗಿದ್ದು, ಬಾಲ್ಯದಿಂದಲೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ ನಿದರ್ಶನಗಳು ಇವೆ.
ಸುರಕ್ಷತಾ ಕೇಂದ್ರದ ಪ್ರತಿಯೊಂದು ಕೊಠಡಿಗೆ ಶೌಚಾಲಯದ ಸೌಲಭ್ಯವಿದೆ. ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವ ಸಂಸ್ಥೆಯಲ್ಲಿ ಭದ್ರತೆಗೂ ಆದ್ಯತೆ ನೀಡಬೇಕಿರುವುದು ಸಹಜ. ಆದರೆ, ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ನಿವಾಸಿಗಳನ್ನು ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಘಟನೆ ಸಂಬಂಧ ರಾತ್ರಿ ಪಾಳಿಯ ಗೃಹಪಾಲಕರು ಕರ್ತವ್ಯಕ್ಕೆ ಹಾಜರಿರಲಿಲ್ಲ ಎನ್ನುವ ಆರೋಪವೂ ಇದೆ. ರಾತ್ರಿ ವೇಳೆ ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆಗೆ ವಿಶೇಷ ಜವಾಬ್ದಾರಿ ಹೊಂದಿರುವ ಸಿಬ್ಬಂದಿ ಗೈರಾಗಿದ್ದರೆ, ಅದು ಗಂಭೀರ ಲೋಪವಾಗುತ್ತದೆ. ಬೇಧಿ ಆಗುತ್ತಿದೆ ಎಂದು ಹೇಳಿ ಹೊರಬಂದ ಆರೋಪಿಗಳು ಭದ್ರತಾ ಸಿಬ್ಬಂದಿ ಸೋಮಶೇಖರ್ ಮತ್ತು ಮಂಜು ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಿವಾಸದಲ್ಲಿರುವ ನಿವಾಸಿಗಳಿಗೆ ಹುಷಾರಿಲ್ಲದಿದ್ದರೆ, ಆಸ್ಪತ್ರೆ ಸಿಬ್ಬಂದಿಯನ್ನು ನಿವಾಸಕ್ಕೆ ಕರೆಸಬೇಕು. ಮೇಲ್ವಿಚಾರಕರು ಖುದ್ದು ನಿಂತು ವಿಚಾರಣೆ ನಡೆಸಬೇಕಿತ್ತು. ಆದರೆ, ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮಾತ್ರ ಇದ್ದರು.
ಸಂಸ್ಥೆಯ ಆಡಳಿತ ಮತ್ತು ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಅಧೀಕ್ಷಕರ ವಾಸ್ತವ್ಯವೂ ಚರ್ಚೆಗೆ ಬಂದಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೋಲಾರ ಹಾಗೂ ಸಂಸ್ಥೆ ಅಧೀಕ್ಷಕರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದ್ದು, ಕೆಜಿಎಫ್‌ನಲ್ಲಿರುವ ಸುರಕ್ಷತಾ ಕೇಂದ್ರದ ದೈನಂದಿನ ಚಟುವಟಿಕೆಗಳ ಮೇಲೆ ನಿರಂತರ ಮೇಲ್ವಿಚಾರಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಸ್ಥಳೀಯರನ್ನು ಕಾಡುತ್ತಿದೆ.
ಇಂತಹ ಸೂಕ್ಷ್ಮ ಸಂಸ್ಥೆಯಲ್ಲಿ ಅಧಿಕಾರಿಗಳು ನಿಯಮಿತ ಸ್ಥಳ ಪರಿಶೀಲನೆ, ಸಿಬ್ಬಂದಿಯ ಹಾಜರಾತಿ ಪರಿಶೀಲನೆ, ಮಕ್ಕಳ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ಹಾಗೂ ರಾತ್ರಿ ವ್ಯವಸ್ಥೆಯ ಪರಿಶೀಲನೆ ನಡೆಸುವುದು ಅತ್ಯಂತ ತುರ್ತು. ಅಧಿಕಾರಿಗಳು ಸ್ಥಳದಲ್ಲಿ ಲಭ್ಯವಿಲ್ಲದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನೂ ಪರಿಶೀಲಿಸಬೇಕಿದೆ.
ಸಿಬ್ಬಂದಿಗೆ ತರಬೇತಿ ಕೊರತೆ?
ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಶೇಷ ಕೌಶಲ, ಅನುಭವ ಮತ್ತು ತರಬೇತಿ ಅಗತ್ಯ. ಆದರೆ, ಸಂಸ್ಥೆಯಲ್ಲಿ ಅಗತ್ಯ ಅರ್ಹತೆ, ಅನುಭವ ಹಾಗೂ ತರಬೇತಿ ಇಲ್ಲದ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ನಿವಾಸಕ್ಕೆ ಈ ಹಿಂದೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಭದ್ರತಾ ವಿಷಯಗಳ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದರು. ಅವುಗಳನ್ನು ಕೂಡ ಪಾಲಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ನಿರ್ವಹಣೆ ಸಾಮಾನ್ಯ ಜವಾಬ್ದಾರಿಯಲ್ಲ. ಮಕ್ಕಳ ಮನೋವಿಜ್ಞಾನ, ಬಾಲ ನ್ಯಾಯ ವ್ಯವಸ್ಥೆ, ಮಕ್ಕಳ ಹಕ್ಕುಗಳು, ವರ್ತನಾ ನಿರ್ವಹಣೆ, ಭದ್ರತಾ ಕ್ರಮಗಳು ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಸಿಬ್ಬಂದಿಗೆ ಸಮರ್ಪಕ ತರಬೇತಿ ಅಗತ್ಯ. ತರಬೇತಿಯ ಕೊರತೆಯಿಂದ ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಲಾಗುತ್ತಿದೆ.
ನಿವಾಸಿಗಳಿಗೆ ಭದ್ರತಾ ಸಿಬ್ಬಂದಿ ಸೇರಿದಂತೆ ಇಲಾಖೆಯ ಸಿಬ್ಬಂದಿಯೇ ನಿಷೇಧಿತ ಪಟ್ಟಿಯಲ್ಲಿರುವ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಇದರಿಂದಾಗಿ ನಿವಾಸಿಗಳು ಸಿಬ್ಬಂದಿಯೊಡನೆ ಸಲುಗೆ ಬೆಳೆಸಿಕೊಂಡು ಪರಾರಿಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-18-280144762