
ಸೈಕಲ್ ಸವಾರರು ಸಾಹಸ: ಕಠಿಣ ಹಾದಿಯಲ್ಲಿ ಗೆಲುವಿಗೆ ಸೆಣಸಾಟ
ಮುಳಗುಂದ: ಗುಡ್ಡಗಾಡಿನ ಕಠಿಣ ಹಾದಿ, ಏರಿಳಿತದ ಸವಾಲು, ವೇಗದ ಪೈಪೋಟಿ ಹಾಗೂ ಗೆಲುವಿನ ಛಲ... ಇವೆಲ್ಲದರ ನಡುವೆ ಸೈಕಲ್ ಸವಾರರು ಸಾಹಸ ಪ್ರದರ್ಶಿಸುತ್ತಿದ್ದ ದೃಶ್ಯ ಶನಿವಾರ ಮತ್ತು ಭಾನುವಾರ ಮುಳಗುಂದದ ಶಿರುಂದ ರಸ್ತೆ ಬಳಿಯ ಗುಡ್ಡಗಾಡಿನಲ್ಲಿ ಕಂಡುಬಂದಿತು.
ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ಗದಗ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ 21ನೇ ರಾಜ್ಯಮಟ್ಟದ ಎಂಟಿಬಿ (ಮೌಂಟೇನ್ ಬೈಕ್) ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಸ್ಫೂರ್ತಿಗೆ ವೇದಿಕೆಯಾಯಿತು.
ಎಂಟಿಬಿ (ಮೌಂಟೇನ್ ಬೈಕ್) ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಶನಿವಾರ ಚಾಲನೆ ನೀಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಿರಿಯ ಸೈಕ್ಲಿಂಗ್ ಪ್ರತಿಭೆಗಳು ಗುಡ್ಡಗಾಡಿನ ಟ್ರ್ಯಾಕ್‌ನಲ್ಲಿ ತಮ್ಮ ವೇಗ, ಸಾಮರ್ಥ್ಯ ಹಾಗೂ ಸಾಹಸವನ್ನು ಅನಾವರಣಗೊಳಿಸಿದರು. ಗೆಲುವಿನ ಗುರಿಯೊಂದಿಗೆ ಪೈಪೋಟಿಗಿಳಿದ ಸೈಕ್ಲಿಸ್ಟ್‌ಗಳು ರಾಷ್ಟ್ರಮಟ್ಟದ ವೇದಿಕೆಯತ್ತ ಹೆಜ್ಜೆ ಇಡಲು ಮುಳಗುಂದದ ಗುಡ್ಡಗಾಡನ್ನು ವೇದಿಕೆಯಾಗಿಸಿಕೊಂಡರು.
ರಾಜ್ಯದ ಸುಮಾರು 16 ಜಿಲ್ಲೆಗಳಿಂದ 14ರಿಂದ 18 ವರ್ಷದೊಳಗಿನ 180 ಬಾಲಕ–ಬಾಲಕಿಯರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, ಗುಡ್ಡಗಾಡಿನ ಸವಾಲಿನ ಟ್ರ್ಯಾಕ್‌ನಲ್ಲಿ ಸ್ಪರ್ಧಿಸಿದರು. ಏರು–ಇಳಿಜಾರು, ಕಲ್ಲು–ಮಣ್ಣು ಹಾಗೂ ತಿರುವುಗಳಿಂದ ಕೂಡಿದ ಹಾದಿಯಲ್ಲಿ ಕ್ರೀಡಾಪಟುಗಳು ಅತ್ಯಂತ ಎಚ್ಚರಿಕೆಯಿಂದ ಸೈಕಲ್ ಚಲಾಯಿಸುತ್ತಾ ಗೆಲುವಿಗಾಗಿ ಸೆಣಸುವ ದೃಶ್ಯ ನೋಡುಗರನ್ನ ರೋಂಮಾಚನಗೊಳಿಸಿತು.
ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಯುವ ಸೈಕ್ಲಿಸ್ಟ್‌ಗಳಿಗೆ ಈ ಚಾಂಪಿಯನ್‌ಶಿಪ್ ಮಹತ್ವದ ವೇದಿಕೆಯಾಗಿದೆ. ರಾಜ್ಯಮಟ್ಟದ ಕ್ರೀಡಾಕೂಟವನ್ನು ಮುಳಗುಂದದ ಗುಡ್ಡಗಾಡಿನಲ್ಲಿ ಆಯೋಜಿಸಿರುವುದು ಸ್ಥಳೀಯ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ರಾಜ್ಯಮಟ್ಟದ ಎಂಟಿಬಿ (ಮೌಂಟೇನ್ ಬೈಕ್) ಸೈಕ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ ನೂರಾರು ಕ್ರೀಡಾಪಟುಗಳು ಪಟ್ಟಣಕ್ಕೆ ಬಂದಿದ್ದು, ಅವರಿಗೆ ಸ್ಥಳೀಯ ಹಿರಿಯರ ಸಹಾಯ ಸಹಕಾರದಿಂದ ಅಚ್ಚುಕಟ್ಟಾದ ಊಟ, ವಸತಿ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ.
‘ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ’
ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ‘ಜಿಲ್ಲೆಯ ಕ್ರೀಡಾಪಟುಗಳಿಗೆ ಕ್ರೀಡಾ ಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.
‘ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆ ಕ್ರೀಡಾ ವ್ಯವಸ್ಥೆ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದೆ. ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಿರುವುದು ಸ್ಥಳೀಯ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪ್ರತಿಭಾವಂತ ಸೈಕ್ಲಿಸ್ಟ್‌ಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು.
ಅಥ್ಲೆಟಿ ವಿಲಾಸ್ ನೀಲಗುಂದ, ಕುಸ್ತಿಪಟು ಐಶ್ವರ್ಯ ಕರಿಗಾರ, ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ವಿ. ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಪ್ಪ ಕಣವಿ, ಮುಖಂಡರಾದ ಎಂ.ಡಿ. ಬಟ್ಟೂರ, ಎನ್.ಆರ್. ದೇಶಪಾಂಡೆ, ವಿಜಯ ನೀಲಗುಂದ, ಡಾ. ಎಸ್.ಸಿ. ಚವಡಿ, ಬಿ.ವಿ. ಸುಂಕಾಪೂರ, ಎಸ್.ಸಿ. ಬಡ್ನಿ, ಕೆ.ಎಲ್. ಕರೇಗೌಡ್ರ, ಮಹ್ಮದ್ ನಯೀಮ್ ಡಾಲಯತ್, ಸಿಪಿಐ ಬಿ.ಜಿ. ಸುಬ್ಬಾಪೂರಮಠ ಇದ್ದರು.