
ಸುರಂಗ ರಸ್ತೆ ಯೋಜನೆಗೆ ನಾಗರಿಕರ ವಿರೋಧ: ಲಾಲ್ಬಾಗ್ ಬಂಡೆ ತಬ್ಬಿ ಜಾಗೃತಿ
ಬೆಂಗಳೂರು: ಲಾಲ್ಬಾಗ್ ಬಂಡೆ ತಬ್ಬಿದ ನಾಗರಿಕರು 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ' ಯೋಜನೆ ವಿರೋಧಿಸಿದರು. 'ಉದ್ಯಾನದ ಜೊತೆಗೆ ಬೆಂಗಳೂರಿನ ಪರಂಪರೆಯ ನಾಶ ಮಾಡಲು ಬಿಡುವುದಿಲ್ಲ' ಒಕ್ಕೊರಲಿನಿಂದ ಹೇಳಿದರು.
'ಲಾಲ್ಬಾಗ್ ವಾಕರ್ಸ್ ಅಸೋಸಿಯೇಷನ್' ನೇತೃತ್ವದಲ್ಲಿ ಭಾನುವಾರ ನಡೆದ ಪ್ರತಿರೋಧದಲ್ಲಿ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದವರೂ ಜೊತೆಯಾದರು.
ಕಳೆದೆರಡು ಭಾನುವಾರದಂದು ಮಾನವ ಸರಪಳಿ ರಚಿಸಿ, ಭಿತ್ತಿಪತ್ರ ಪ್ರದರ್ಶಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈ ಬಾರಿಯ ಪ್ರತಿರೋಧಕ್ಕೆ ಪೊಲೀಸರು ಅವಕಾಶ ಕೊಡದ್ದರಿಂದ ಮೌನವಾಗಿ ಬಂಡೆ ಮೇಲೆ ಕುಳಿತರು. ನಂತರ ಬಂಡೆಯನ್ನು ತಬ್ಬಿಕೊಂಡರು. ಮಕ್ಕಳೊಂದಿಗೆ ಬಂದಿದ್ದ ಪೋಷಕರು, ವಿದ್ಯಾರ್ಥಿಗಳು ಜೊತೆಯಾದರು.
'ಲಾಲ್ ಬಾಗ್ ಉದ್ಯಾನ ನಗರಿಯ ಪ್ರತೀಕ. ಉಸಿರು ನೀಡುವ ಶ್ವಾಸಕೋಶವಿದು. ಸುರಂಗ ರಸ್ತೆ ಯೋಜನೆ ಲಾಲ್ಬಾಗ್ನ ಸೌಂದರ್ಯ ಹಾಳುಮಾಡಲಿದೆ. ಹೀಗಾಗಿ ನಾಗರಿಕರು ಯೋಜನೆ ವಿರುದ್ಧದ ಅಭಿಯಾನಕ್ಕೆ ನಿರಂತರ ಬರುತ್ತಿದ್ದಾರೆ' ಎಂದು 'ಲಾಲ್ಬಾಗ್ ವಾಕರ್ಸ್ ಅಸೋಸಿಯೇಷನ್' ಅಧ್ಯಕ್ಷ ಎಸ್.ಉಮೇಶ್ ಹೇಳಿದರು.
'ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಹೈಕೋರ್ಟ್ ನಲ್ಲಿ ಇದೇ 20ರಂದು ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಸರ್ಕಾರ ಯೋಜನೆಯನ್ನು ಮರುಪರಿಶೀಲಿಸಬೇಕು. ಪರಿಸರ ವಿರೋಧಿ ಅಭಿವೃದ್ಧಿ ಯೋಜನೆಗಳು ಬೇಡ' ಎಂದರು.
ಪರಿಸರವಾದಿ ದತ್ತಾತ್ರೇಯ ದೇವರ್ ಮಾತನಾಡಿ, 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ, ಹೆಬ್ಬಾಳ- ಪಶುವೈದ್ಯ ಕಾಲೇಜು ಸಂಪರ್ಕಿಸುವ 2 ಕಿ.ಮೀ ಸುರಂಗ ರಸ್ತೆ, ಒಂಬತ್ತು ಎತ್ತರಿತ ರಸ್ತೆ ಕಾರಿಡಾರ್, ಮೆಟ್ರೊ ಡಬಲ್ ಡೆಕ್ಕರ್ ಯೋಜನೆಗಳು ನಗರಕ್ಕೆ ಶಾಶ್ವತ ಹಾನಿ ಮಾಡಲಿವೆ. ಇವುಗಳ ಬಗ್ಗೆ ತಜ್ಞರಿಂದ ವಿಸ್ಕೃತ ಅಧ್ಯಯನಗಳು ನಡೆದಿಲ್ಲ. ವಿನಾಶಕಾರಿ ಯೋಜನೆಗಳ ಪರಿಣಾಮಗಳನ್ನು ಊಹಿಸಲಾಗದು' ಎಂದು ಹೇಳಿದರು.
'ಸಂಚಾರ ದಟ್ಟಣೆ ಸಮಸ್ಯೆ ತಗ್ಗಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಪರಿಸರ ಕೇಂದ್ರಿತ ಅಭಿವೃದ್ಧಿ ಬೇಕೇ ಹೊರತು ಈ ದೂರದೃಷ್ಟಿ ಇಲ್ಲದ ಯೋಜನೆಗಳನ್ನು ನೋಡಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು' ಎಂದರು.
ಪರಿಸರವಾದಿಗಳಾದ ಸುಮಾ, ರಾಹುಲ್, ಭಾರತಿ ರಾವ್, ರಾಜ್, ವಸಂತಿ, ವಿನೋದ್, ಅರುಣ್, ಇಂದ್ರಾಣಿ, ಸಂಜಯ್, ಸುರೇಂದ್ರ, ದೀಪಾ ಪಾಲ್ಗೊಂಡಿದ್ದರು.