
ಹನೂರು | ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ
ಹನೂರು (ಚಾಮರಾಜನಗರ): ಕಾವೇರಿ ವನ್ಯಧಾಮದ ಹನೂರು ವನ್ಯಜೀವಿ ವಲಯದ ಹೊಳೆಮುರದಟ್ಟಿ ಅರಣ್ಯದೊಳಗೆ ಶನಿವಾರ ಬೆಳಗಿನ ಜಾವ ಅರಣ್ಯ ಇಲಾಖೆ ಅಧಿಕಾರಿಗಳು ಹಾರಿಸಿದ ಗುಂಡಿನಿಂದ ಮೂವರು ಬೇಟೆಗಾರರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಮರಿಯಮಂಗಲ ಗ್ರಾಮದ ಆಂಥೋಣಿ ಸ್ವಾಮಿ, ಲಾಜಾರ್ ದೊಡ್ಡಿಯ ಕುಮಾರ್ ಹಾಗೂ ಜಗನಾಥನ್ ದೊಡ್ಡಿಯ ಪೀಟರ್ ಗುಂಡಿಗೆ ಬಲಿಯಾದವರು.
‘ಬೇಟೆಗಾರರ ತಂಡವೊಂದು ಅರಣ್ಯದೊಳಗೆ ಬೆಳಿಗ್ಗೆ ಜಿಂಕೆ ಬೇಟೆಯಾಡಿರುವ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಬೇಟೆಗಾರರು ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಆಗ ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿದಾಗ ಗುಂಡು ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ’ ಎಂದು ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ತಿಳಿಸಿದ್ದಾರೆ.
ಕೃತ್ಯ ನಡೆದ ಸ್ಥಳದಲ್ಲಿ ಎರಡು ನಾಡ ಬಂದೂಕು, ಪ್ರಾಣಿಯ 20 ಕೆ.ಜಿ ಮಾಂಸ ತುಂಬಿದ್ದ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಶವಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಶಾಗ್ಯ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಕಚೇರಿ, ಸಿಬ್ಬಂದಿಯ ವಸತಿಗೃಹಕ್ಕೆ ನುಗ್ಗಿ ದಾಂದಲೆ ನಡೆಸಿದರು.
ನಾಮಫಲಕ ಕಿತ್ತೆಸೆದು ಕಚೇರಿಯ ಪೀಠೋಪಕರಣ, ಬೈಕ್ ಹಾಗೂ ಪರಿಕರಗಳನ್ನು ಹೊರಗೆಸೆದು ಆಕ್ರೋಶ ವ್ಯಕ್ತಪಡಿಸಿದರು. ಕಳ್ಳಿದೊಡ್ಡಿಯಲ್ಲಿರುವ ಕಳ್ಳಬೇಟೆ ತಡೆ ಶಿಬಿರಕ್ಕೂ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು.
ಹನೂರು ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರೈತರು ಕೂಡ ಪ್ರತಿಭಟನೆಗೆ ಕೈಜೋಡಿಸಿದ್ದರಿಂದ ಇಲಾಖೆ ಕಚೇರಿಯ ಮುಂಭಾಗ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇತ್ತು. ಮುಂಜಾಗ್ರತಾ ಕ್ರಮವಾಗಿ ಭದ್ರತೆಗೆ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಯ ನೆಪದಲ್ಲಿ ಎನ್ಕೌಂಟರ್ ನಡೆಸಿ ಮೂವರನ್ನು ಕೊಂದಿರುವುದು ಅಮಾನವೀಯ. ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ, ಸರ್ಕಾರಿ ಉದ್ಯೋಗ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
‘ಶುಕ್ರವಾರ ರಾತ್ರಿ ಜೋಳದ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದ ಪತಿಯ ಮೇಲೆ ವೈಯಕ್ತಿಕ ದ್ವೇಷದಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ. ಶವವನ್ನು ಕಾಡಿನೊಳಗೆ ಕೊಂಡೊಯ್ದು ಬೇಟೆಗಾರರೆಂದು ಬಿಂಬಿಸಲಾಗಿದೆ. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಪೀಟರ್ ಅವರ ಪತ್ನಿ ಒತ್ತಾಯಿಸಿದ್ದಾರೆ.
‘ನನ್ನ ಪತಿ ಪ್ರಾಣಿಯನ್ನು ಬೇಟೆಯಾಡಿದ್ದರೆ ಬಂಧಿಸಿ ಶಿಕ್ಷೆ ಕೊಡಬಹುದಿತ್ತು. ಗುಂಡಿಟ್ಟು ಕೊಲ್ಲಲು ಅಧಿಕಾರ ಕೊಟ್ಟವರು ಯಾರು? ಇಬ್ಬರು ಹೆಣ್ಣುಮಕ್ಕಳಿದ್ದು, ಅವರ ಭವಿಷ್ಯದ ಜವಾಬ್ದಾರಿ ನೋಡಿಕೊಳ್ಳುವವರು ಯಾರು?’ ಎಂದು ಮೃತ ಕುಮಾರ್ ಪತ್ನಿ ಡೋಮಿನಾ ಕಣ್ಣೀರಿಟ್ಟರು.
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡ ದುಃಖ ತಾಳಲಾರದೆ ರಸ್ತೆಯಲ್ಲಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಘಟನಾ ಸ್ಥಳಕ್ಕೆ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಪುಟ್ಟರಂಗಶೆಟ್ಟಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
‘ಮೃತಪಟ್ಟವರು ಬೇಟೆಗಾರರು ಎಂದು ಅನ್ನಿಸುತ್ತಿಲ್ಲ. ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ಸುಳ್ಳು ಹೇಳುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಗೊತ್ತಾಗುತ್ತಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೂ ಮುಜುಗರ ಆಗಿದೆ. ಸಮಗ್ರ ತನಿಖೆ ನಡೆಸುತ್ತೇವೆ’ ಎಂದು ಸಚಿವ ಪುಟ್ಟರಂಗ ಶೆಟ್ಟಿ ಹೇಳಿದರು.
ಮ್ಯಾಜಿಸ್ಟ್ರೇಟ್ ತನಿಖೆ: ಸಿ.ಎಂ
ಬೆಂಗಳೂರು: ‘ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಮೂವರು ಬೇಟೆಗಾರರು ಮೃತಪಟ್ಟ ಪ್ರಕರಣ ಕುರಿತು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಘಟನೆ ಬಗ್ಗೆ ಬೆಳಿಗ್ಗೆ 5 ಗಂಟೆಗೆ ಮಾಹಿತಿ ಬಂತು. ಅಧಿಕಾರಿಗಳು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಬೇಟೆಗಾರರಿಂದ ಕೆಲ ವಸ್ತುಗಳು ಹಾಗೂ ಬಂದೂಕು ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಕೆಲವರನ್ನು ಬಂಧಿಸಲಾಗಿದೆ. ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ’ ಎಂದು ಹೇಳಿದರು.
ತನಿಖೆಯ ಕುರಿತು ಇದೇ ಮಾತನ್ನು ಆಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ‘ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿರುವವರು ಬಳಸಿದ ಬಂದೂಕಿಗೆ ಪರವಾನಗಿ ಇರಲಿಲ್ಲ. ಅವರ ಬಳಿ ಇದ್ದ ನಾಲ್ಕು ಬ್ಯಾಗ್ಗಳಷ್ಟು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ.
‘ಅಧಿಕಾರಿಗಳ ವಿರುದ್ಧ ಸ್ಥಳೀಯರು ಆರೋಪ ಮಾಡಿದ್ದಾರೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಗುಂಡು ಹೊಡೆದಿದ್ದರೆ ತನಿಖೆ ಬಳಿಕ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.
‘ಗುಂಡು ಹಾರಿಸಲು ಅನುಮತಿ ಇತ್ತೇ?’
ಬೇಟೆಯಾಡಿದ ಮಾತ್ರಕ್ಕೆ ಗುಂಡಿಟ್ಟು ಕೊಲ್ಲಲು ಆದೇಶ ನೀಡಿದ ಅಧಿಕಾರಿ ಯಾರೆಂದು ಸ್ಪಷ್ಟಪಡಿಸಬೇಕು ಮೇಲಧಿಕಾರಿಗಳ ಆದೇಶ ಇಲ್ಲದೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂಬ ಅನುಮಾನವಿದೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ಶವಾಗಾರದಲ್ಲಿ ಶವಗಳು
ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಮೃತಪಟ್ಟ ಮೂವರ ಶವಗಳನ್ನು ಶನಿವಾರ ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. ಪೊಲೀಸರು ಮನವಿ ಪತ್ರ ನೀಡದ ಕಾರಣ ಮರಣೋತ್ತರ ಪರೀಕ್ಷೆ ನಡೆದಿಲ್ಲ.
‘ದನ ಮೇಯಿಸಲು ಹೋದವರ ಎನ್ಕೌಂಟರ್’
‘ದನ ಮೇಯಿಸಲು ಅರಣ್ಯಕ್ಕೆ ಹೋದವರ ಮೇಲೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಒಂದು ವೇಳೆ ನಮ್ಮವರ ಬಳಿ ಆಯುಧ ಇದ್ದರೂ ಎನ್ಕೌಂಟರ್ ಮಾಡುವ ಅಗತ್ಯ ಏನಿತ್ತು? ನಮ್ಮವರು ಯಾವ ಅರಣ್ಯ ಅಧಿಕಾರಿ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದನ್ನು ತೋರಿಸಬೇಕು’ ಎಂದು ಮೃತರ ಸಂಬಂಧಿ ಪುಷ್ಪಾ ಆಕ್ರೋಶ ಹೊರಹಾಕಿದರು.
‘ಶೂಟೌಟ್ ಘಟನೆಯಲ್ಲಿ ಮೃತರಾದ ಕುಮಾರ್ ಪೀಟರ್ ಆಂಥೋಣಿ ಸ್ವಾಮಿ ಕಾಡಿನೊಳಗೆ ವಿಶ್ರಾಂತಿ ಪಡೆಯುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಮೃತರ ಕುಟುಂಬಸ್ಥರಾದ ಮೇರಿ ಎಂಬುವವರು ನೀಡಿರುವ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಆರಂಭಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕಳ್ಳಬೇಟೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎರಡೂ ಪ್ರಕರಣಗಳಲ್ಲಿ ಕೂಲಂಕಷ ತನಿಖೆ ನಡೆಸಲಾಗುವುದು. ಸತ್ಯಾಸತ್ಯತೆ ಹೊರಬರಲಿದೆ’ ಎಂದು ಮೈಸೂರು ದಕ್ಷಿಣ ವಲಯ ಐಜಿಪಿ ಡಾ. ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.