
ಮಡಿಕೇರಿ: ವೈಜ್ಞಾನಿಕ ಕಸ ವಿಲೇವಾರಿಗೆ ನಗರಸಭೆ ಚಿಂತನೆ
ಮಡಿಕೇರಿ: ಉಪ ಲೋಕಾಯುಕ್ತರ ಟೀಕೆ ಹಾಗೂ ತ್ಯಾಜ್ಯ ಸುರಿಯಲು ವಿಶಾಲವಾದ ಜಾಗ ದೊರೆಯದ ಕಾರಣ ಕೊನೆಗೂ ಮಡಿಕೇರಿ ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಕುರಿತು ಇಲ್ಲಿನ ನಗರಸಭೆ ಗಂಭೀರವಾಗಿ ಚಿಂತನೆ ನಡೆಸಿದೆ. ಕಸ ವಿಲೇವಾರಿ ಎಂದರೆ ಕೇವಲ ಒಂದು ಕಡೆ ಸುರಿಯುವುದಲ್ಲ ಎಂಬುದನ್ನು ಅರಿತಂತಿದೆ. ವೈಜ್ಞಾನಿಕವಾದ ವಿಲೇವಾರಿ ಕಡೆಗೆ, ಬದಲಾವಣೆ ಎಡೆಗೆ ಹೆಜ್ಜೆ ಇರಿಸಿದೆ.
ಕಸ ವಿಲೇವಾರಿ ಎಂದರೆ ಕೇವಲ ಒಂದು ಕಡೆ ಕಸ ಸುರಿಯುವುದು, ನೈಸರ್ಗಿಕ ಬೆಟ್ಟದದ ಮೇಲೊಂದು ಕೃತಕ ಕಸದ ಗುಡ್ಡ ನಿರ್ಮಿಸುವುದು ಎಂದೇ ಇದುವರೆಗೂ ಮಡಿಕೇರಿ ನಗರಸಭೆ ಭಾವಿಸಿತ್ತು. ಮಾತ್ರವಲ್ಲ, ಅದನ್ನಷ್ಟೇ ಮಾಡುತ್ತಿತ್ತು. ಈಗ ಹೈಕೋರ್ಟ್‌ನ ಸೂಚನೆ, ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಕಿಡಿನುಡಿಗಳು, ನಿರ್ದೇಶನಗಳ ನಂತರ ಎಚ್ಚೆತ್ತುಕೊಂಡಿರುವ ನಗರಸಭೆ ಇದೀಗ ಬದಲಾವಣೆ ಕಡೆಗೆ ಮನಸ್ಸು ಮಾಡಿದೆ. ಕಸ ವಿಲೇವಾರಿಗೆ ದೊಡ್ಡದಾದ ಖಾಲಿ ಜಾಗ ದೊರೆಯದೇ ಇರುವುದೂ ಸಹ ಕಾರಣ ಎನಿಸಿದೆ.
ಮಡಿಕೇರಿ ನಗರದಲ್ಲಿ 23 ವಾರ್ಡ್‌ಗಳಿದ್ದು, 35,869 ಜನರು ವಾಸವಿದ್ದಾರೆ. 1,320 ವಾಣಿಜ್ಯ ಕಟ್ಟಡಗಳು, 282 ಹೋಂಸ್ಟೇಗಳು, 11 ಶಿಕ್ಷಣ ಸಂಸ್ಥೆಗಳು ಇವೆ. ಇವುಗಳಿಂದ ನಿತ್ಯ 13 ಟನ್ ಹಸಿ ಕಸ ಹಾಗೂ 5 ಟನ್ ಒಣ ಕಸ ಉತ್ಪತ್ತಿಯಾಗುತ್ತದೆ. ಇಷ್ಟೆಲ್ಲ ಕಸವನ್ನು ಸುರಿಯಲು ಸದ್ಯ ಜಾಗದ ಸಮಸ್ಯೆ ಕಾಡುತ್ತಿದೆ.
ಇದುವರೆಗೂ ಸುರಿಯುತ್ತಿದ್ದ ಸ್ಟೋನ್‌ಹಿಲ್‌ನಲ್ಲಿದ್ದ ಕಸವನ್ನು ತೆರವುಗೊಳಿಸಿ ಮತ್ತೆ ಅಲ್ಲಿ ಕಸ ಸುರಿಯಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಈಗ ಅಲ್ಲಿರುವ ಕಸವನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಕಸ ವಿಲೇವಾರಿಗೆಂದೇ 2ನೇ ಮೊಣ್ಣಂಗೇರಿಯಲ್ಲಿ ವಿಸ್ತಾರವಾದ ಜಾಗವನ್ನು ಜಿಲ್ಲಾಡಳಿತ ನೀಡಿತ್ತು. ಆದರೆ, ಅದು ಅರಣ್ಯಕ್ಕೆ ಸಮೀಪ ಇರುವುದರಿಂದ ಇದುವರೆಗೂ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಮಾತ್ರವಲ್ಲ, ಆ ಜಾಗ ಇದೀಗ ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿತವಾಗಿದೆ. ತುರ್ತು ಬಳಕೆಗೆ ಎಂದು ಈಚೆಗಷ್ಟೇ ಜಿಲ್ಲಾಡಳಿತ ಕಾಟಕೇರಿ ಬಳಿ 5 ಎಕರೆ ಜಾಗ ನೀಡಿದರೂ ಅದು ತೀರಾ ಇಳಿಜಾರಿನಿಂದ ಕೂಡಿದೆ. ಹೀಗಾಗಿ, ಸದ್ಯ, ಕಸ ಸುರಿಯಲು ನಗರಸಭೆಗೆ ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಈಗ ದಿ ಕ್ಲೀನ್ ಕೂರ್ಗ್ ಇನ್‌ಶಿಯೇಟಿವ್ ಎಂಬ ಸರ್ಕಾರೇತರ ಸಂಸ್ಥೆಯೊಂದು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಮುಂದೆ ಬಂದಿದೆ. ಈ ಸಂಸ್ಥೆಯಿಂದ ಮಾಹಿತಿ ಪಡೆದಿರುವ ನಗರಸಭೆಯ ಸದಸ್ಯರು ಹಾಗೂ ಶಾಸಕ ಡಾ.ಮಂತರ್‌ಗೌಡ ಅವರು ವಿಸ್ತೃತ ಯೋಜನಾ ವರದಿ ನೀಡಲು ಕೇಳಿದ್ದಾರೆ.
ವಿಸ್ತಾರವಾದ ಜಾಗ ದೊರೆಯದೇ ಇರುವುದರಿಂದ ಪ್ರತಿ ವಾರ್ಡ್‌ನಲ್ಲಿಯೇ ಕಸ ವಿಲೇವಾರಿಗೆ ಜಾಗ ಗುರುತಿಸಿ ಅಲ್ಲಿಯೇ ವಿಲೇವಾರಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಪ್ರತಿ ವಾರ್ಡ್‌ನಲ್ಲಿ ಜಾಗ ದೊರೆಯದೇ ಹೋದರೆ ಒಂದೆರಡು ವಾರ್ಡ್‌ಗಳನ್ನು ಸೇರಿಸಿ ಚಿಕ್ಕ ಜಾಗದಲ್ಲಾದರೂ ಕಸ ಹಾಕಿ ಅದನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಚಿಂತನೆ ನಡೆದಿದೆ.
ಈಗಾಗಲೇ ಇಂತಹ ವೈಜ್ಞಾನಿಕ ಕ್ರಮಗಳನ್ನು ರಾಜ್ಯದ ಅನೇಕ ಜಿಲ್ಲೆಗಳು ಅಳವಡಿಸಿಕೊಂಡಿವೆ. ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಅಲ್ಲಲ್ಲಿ ವೈಜ್ಞಾನಿಕವಾದ ಕಸ ವಿಲೇವಾರಿ ನಡೆದಿದೆ. ಅಂತಹ ಕ್ರಮಗಳನ್ನು ಪರಿಶೀಲಿಸಿ ಅವುಗಳಲ್ಲಿ ಸೂಕ್ತವಾದುದನ್ನು ನಗರಸಭೆ ಅಳವಡಿಸಿಕೊಳ್ಳಬೇಕಿದೆ.
ಜಪಾನ್-ತ್ಯಾಜ್ಯ ವಿಲೇವಾರಿವಿಧಾನ
ಕೊಡಗು ಜಿಲ್ಲೆಯವರೇ ಆದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ಎಚ್.ಎಂ.ಕಾವೇರಿ ಕಳೆದ 5 ತಿಂಗಳುಗಳಿಂದ ಜಪಾನ್ ದೇಶದಲ್ಲಿದ್ದಾರೆ. ಅನಿಕೇತನ ಪ್ರಜ್ಞೆ ಮತ್ತು ಪರಿಸರ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ 9 ತಿಂಗಳ ಕಾಲದ ಜಪಾನಿನ ಸುಸ್ಥಿರ ಬದುಕು, ನಾಯಕತ್ವ, ಸಮುದಾಯ ಬೆಳವಣಿಗೆ, ಪಾರಂಪರಿಕ ಜ್ಞಾನ ಕುರಿತ ಅಧ್ಯಯನ ಪ್ರವಾಸದಲ್ಲಿದ್ದಾರೆ.
ಮಡಿಕೇರಿ ನಗರದಲ್ಲಿ ಬಿಗಡಾಯಿಸಿರುವ ಕಸದ ಸಮಸ್ಯೆ ಕುರಿತು ಜಪಾನ್‌ನಿಂದಲೇ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಮಡಿಕೇರಿ ನಗರದಲ್ಲಿ ಸುಸ್ಥಿರವಾದ ಹಾಗೂ ವೈಜ್ಞಾನಿಕವಾದ ಕಸ ವಿಲೇವಾರಿ ನಿಜಕ್ಕೂ ಸಾಧ್ಯವಿದೆ’ ಎಂದು ಹೇಳಿದರು.
ಜಪಾನಿನ ನಗರವೊಂದರಲ್ಲಿ ಸರ್ಕಾರೇತರ ಸಂಸ್ಥೆಯೊಂದು ಶಾಲೆಗಳು, ರೆಸ್ಟೋರೆಂಟ್‌ಗಳು, ಕಾರ್ಖಾನೆಗಳು, ಮಾಲ್‌ಗಳಿಂದ ಹಸಿ ಕಸವನ್ನು ಅವರಿದ್ದಲ್ಲಿಗೆ ಹೋಗಿ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಕಾಂಪೋಸ್ಟ್ ಗೊಬ್ಬರವನ್ನಾಗಿ ತಯಾರಿಸುತ್ತದೆ. ಈ ಗೊಬ್ಬರವನ್ನು ಅಲ್ಲಿನ ಸ್ಥಳೀಯ ಆಡಳಿತ ಖರೀದಿಸಿ ಶೇ 50ರಷ್ಟು ರಿಯಾಯಿತಿ ದರದಲ್ಲಿ ಅಲ್ಲಿನ ರೈತರಿಗೆ ಮಾರಾಟ ಮಾಡುತ್ತದೆ ಎಂದು ಅವರು ಹೇಳಿದರು.
ಮತ್ತೊಂದು ನಗರದಲ್ಲಿರುವ ರೇಂಬೊ ಪ್ರಾಜೆಕ್ಟ್ ತುಸು ಭಿನ್ನವಾಗಿದೆ. ಕಸವನ್ನು ಜನರೇ ತಮ್ಮ ವಾರ್ಡಿನಲ್ಲಿರುವ ಕಸ ಸಂಗ್ರಹಾಗಾರದಲ್ಲಿ ವಿಂಗಡಿಸಿ ಹಾಕುತ್ತಾರೆ. ಅದನ್ನು ಸಂಸ್ಥೆಯೊಂದು ಕಾಂಪೋಸ್ಟ್ ಗೊಬ್ಬರ ಮಾಡಿ ಅದೇ ವಾರ್ಡಿನ ಜನರಿಗೆ ನೀಡುತ್ತದೆ. ಈ ಬಗೆಯಲ್ಲಿ ಅನೇಕ ವಿನೂತನ ಕ್ರಮಗಳಿದ್ದು, ಅವುಗಳನ್ನು ಮಡಿಕೇರಿ ನಗರಸಭೆ ಅಳವಡಿಸಿಕೊಂಡರೆ ಆದಾಯವೂ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಯತ್ನಿಸಿದರೆ ಕಸ ಹೊರೆ ಆಗದು
ಮಡಿಕೇರಿ ಪುರಸಭೆ ಯಾಗಿದ್ದಾಗ 1984 –2002ರ ವರೆಗೆ ಇಲ್ಲಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಹಿರಿ ಯರಾದ ಎಂ.ಪಿ.ಕೃಷ್ಣರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬದಲಾವಣೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮುಂಚೆ ಮಡಿಕೇರಿಯಲ್ಲಿ ಜನಸಂಖ್ಯೆ ಕಡಿಮೆ ಇದ್ದು, ಜಾಗ ಸುಲಭವಾಗಿ ಸಿಗುತ್ತಿತ್ತು. ಆದರೆ, ಈಗ ಜನಸಂಖ್ಯೆ ವಿಪರೀತ ಹೆಚ್ಚಾಗಿ, ಒಂದು ಅಡಿ ಜಾಗವೂ ಸಿಗದಂತಹ ಸ್ಥಿತಿ ಇದೆ. ಹಾಗಾಗಿ, ಇಲ್ಲಿ ಸಂಗ್ರಹವಾಗುವ ಕಸವನ್ನು ವಿಂಗಡಿಸಿ ಅವುಗಳನ್ನು ಖರೀದಿಸುವವರನ್ನು ಹುಡುಕಿ ಅವರಿಗೆ ಮಾರಾಟ ಮಾಡಬೇಕು. ಹಸಿಕಸವನ್ನು ಕಾಂಪೋಸ್ಟ್ ಗೊಬ್ಬರನ್ನಾಗಿಸಬಹುದು, ಇನ್ನಿತರ ಕಸವನ್ನೂ ಮಾರಾಟ ಮಾಡಿ ಆದಾಯ ಸಂಗ್ರಹಿಸಬಹುದು. ಸಂಗ್ರಹವಾಗುವ ಕಸ ನಗರದಲ್ಲೆ ಉಳಿಯದಂತೆ ನೋಡಿಕೊಂಡಲ್ಲಿ ಮಡಿಕೇರಿ ಕಸ ಹೊರೆಯಾಗದು ಎಂದು ಅವರು ಹೇಳುತ್ತಾರೆ.
ಜನ ಜಾಗೃತಿ ಇಂದಿನ ಅಗತ್ಯ
ಮಡಿಕೇರಿಯಲ್ಲಿ ಆರ್ಥಿಕ ಸಲಹೆಗಾರರಾಗಿರುವ ಗೀತಾ ಗಿರೀಶ್ ಪ್ರತಿಕ್ರಿಯಿಸಿ, ‘ಜನರಲ್ಲಿ ಅರಿವು ಇಲ್ಲದೇ ಇರುವುದೇ ಕಸದ ಸಮಸ್ಯೆ ಪೆಡಂಭೂತವಾಗಿ ಕಾಡುವುದಕ್ಕೆ ಪ್ರಮುಖ ಕಾರಣ ಎನಿಸಿದೆ’ ಎಂದರು.
ಬಳಸಿ ಬೀಸಾಡುವ ಸಂಸ್ಕೃತಿ ಕಡೆಗೆ ಜನರು ಹೆಚ್ಚು ಹೆಚ್ಚು ವಾಲುತ್ತಿರುವುದು, ಕಸವನ್ನು ವಿಂಗಡಿಸುವ ಕನಿಷ್ಠ ವ್ಯವಧಾನವೂ ಕಾಣೆಯಾಗುತ್ತಿರುವುದು ಕಸ ಹೆಚ್ಚಲು ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.
ಯಾವುದು ಕಸ ಎನ್ನುವುದೂ ಗೊತ್ತಿಲ್ಲದಂತಹ ಸ್ಥಿತಿಯಲ್ಲಿ ಬಹಳಷ್ಟು ಮಂದಿಗೆ ಇದ್ದಾರೆ. ಕಸದ ಗಾಡಿ ಬರುತ್ತಿದ್ದಂತೆ ಗುಜರಿ ಅಂಗಡಿಯಲ್ಲಿ ಖರೀದಿಸುವಂತಹ ಕಸವನ್ನೂ ಎಸೆಯುವುದನ್ನು ಕಾಣಬಹುದು. ಹಣ್ಣಿನ ಸಿಪ್ಪೆಗಳನ್ನು ಗಿಡದ ಬುಡಕ್ಕೆ ಹಾಕಿದರೆ ಗೊಬ್ಬರವಾಗುತ್ತದೆ ಎಂಬ ಅರಿವೂ ಇಲ್ಲ. ಹಾಗಾಗಿ, ಜನರಲ್ಲಿ ಹಾಗೂ ಪ್ರವಾಸಿಗರಲ್ಲಿ ನಗರಸಭೆಯವರು ಕಸದ ಕುರಿತು ಅರಿವು ಮೂಡಿಸಬೇಕಿದೆ ಎಂದು ಅವರು ತಿಳಿಸುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-51-645537185