
ಅಂಕಪಟ್ಟಿಯಲ್ಲಿ ‘ಅನುತ್ತೀರ್ಣ’ ಬೇಡ: ಬಿಹಾರ
ಪಟ್ನಾ (ಪಿಟಿಐ): ಪ್ರಸ್ತುತ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿ ಅಂಕಪಟ್ಟಿಯಲ್ಲಿ ‘ಅನುತ್ತೀರ್ಣ’ ಎಂಬ ಬದಲಿಗೆ ‘ಕೌಶಲ ತರಬೇತಿಗೆ ಅರ್ಹರು’ ಎಂದು ನಮೂದಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ.
‘ಬಿಹಾರದ ಮುಕ್ತ ಶಾಲಾ ಮತ್ತು ಪರೀಕ್ಷಾ ಮಂಡಳಿ (ಬಿಬಿಒಎಸ್‌ಇ) ನೀಡುವ ವೃತ್ತಿಪರ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಲು ಉತ್ತೇಜಿಸುವುದು ಈ ಕ್ರಮದ ಗುರಿಯಾಗಿದೆ. ಈ ಬದಲಾವಣೆಯನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ನಿಯಮಗಳನ್ನು ತಿದ್ದುಪಡಿ ಮಾಡಲಿದೆ. ಇಲಾಖೆ ಶೀಘ್ರದಲ್ಲೇ ಬಿಎಸ್‌ಇಬಿಗೆ ಅಗತ್ಯ ಸೂಚನೆ ನೀಡಲಿದೆ’ ಎಂದು ಬಿಹಾರ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ತಿಳಿಸಿದ್ದಾರೆ.
‘ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲವಾದ ಮಾತ್ರಕ್ಕೆ ವಿದ್ಯಾರ್ಥಿಗಳ ಪ್ರತಿಭೆ ಮಾಯವಾಗುವುದಿಲ್ಲ. 10ನೇ ತರಗತಿ ಬೋರ್ಡ್ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಒಂದು ತಿಂಗಳ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದು ಅವರ ಪೂರ್ವ ತಯಾರಿಗೆ ನೆರವಾಗುತ್ತದೆ’ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-51-1124893231