
ಬತ್ತಿದ ವೇದಾವತಿ ನದಿ, ನೀರಿಲ್ಲದೆ ಕಂಗಾಲಾದ ರೈತರು, ಬೆಳೆಗಳು ನಾಶ
ತೆಕ್ಕಲಕೋಟೆ: ಸಮೀಪದ ಬಲಕುಂದಿ-ಮುದೇನೂರು ಗ್ರಾಮಗಳ ಬಳಿ ವೇದಾವತಿ (ಹಗರಿ) ನದಿಯ ಒಡಲು ಸಂಪೂರ್ಣ ಬರಿದಾಗಿದ್ದು, ನದಿಯನ್ನೇ ನಂಬಿರುವ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನದಿ ಪಾತ್ರದಲ್ಲಿ ತೀವ್ರ ಅಭಾವ ಎದುರಾಗಿದ್ದು, ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಸಿರುಗುಪ್ಪ ತಾಲೂಕಿನ ಕರೂರು, ದರೂರು, ತಾಳೂರು, ಊಳೂರು, ಉತ್ತನೂರು, ಮಾಟಸೂಗುರು, ಕೂರಿಗನೂರು, ಬೂದುಗುಪ್ಪ, ಮೈಲಾಪುರ ಹಾಗೂ ಬಲಕುಂದಿ ಸೇರಿದಂತೆ ಹಲವು ಹಳ್ಳಿಗಳಿಗೆ ಈ ನದಿಯೇ ಜೀವನಾಡಿ. ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿತ್ತಿದ್ದ ಬೆಳೆಗಳು ಹಾಗೂ ನಾಟಿಗೆ ಸಿದ್ಧವಾಗಿದ್ದ ಭತ್ತದಸಸಿಮಡಿಗಳು ನೀರಿಲ್ಲದೆ ಒಣಗುವಹಂತ ತಲುಪಿವೆ. ಜನ–ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ತಲೆದೋರಿದೆ.
ಮಳೆಗಾಲದಲ್ಲಿ ಸುಮಾರು 2 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದ ಈ ಬ್ಯಾರೇಜ್ ಈಗ ನೀರಿಲ್ಲದೆ ಸಂಪೂರ್ಣಖಾಲಿಯಾಗಿದೆ. ಕೆಲ ರೈತರು ಭತ್ತದ ಸಸಿಮಡಿಗಳಿಗೆ ಕುರಿ–ದನಕರುಗಳನ್ನು ಬಿಟ್ಟು ಮೇಯಿಸುತ್ತಿರುವ ಕರುಣಾಜನಕ ದೃಶ್ಯಗಳು ಕಂಡುಬರುತ್ತಿವೆ.
ವಾಡಿಕೆಗಿಂತ ತೀವ್ರ ಕಡಿಮೆ ಮಳೆ: ಸಿರುಗುಪ್ಪ ತಾಲೂಕಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಶೇ 83ರಷ್ಟು ಮಳೆ ಕೊರತೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 28 ಮಿ.ಮೀ. ಮಳೆಯಾಗಬೇಕಿತ್ತು, ಆದರೆ ಬಿದ್ದದ್ದು ಕೇವಲ 4.8 ಮಿ.ಮೀ. ಹಾಗಾಗಿ ರೈತರ ಆತಂಕವನ್ನು ಹೆಚ್ಚಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-25-1808446751