
ಬರಪೀಡಿತ ಪಟ್ಟಿಯಿಂದ ಜಗಳೂರು-ಹರಿಹರ ಕೈಬಿಟ್ಟಿದ್ದಕ್ಕೆ ರೈತರ ಆಕ್ರೋಶ
ಜಗಳೂರು: ರಾಜ್ಯದ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಹರಿಹರ ತಾಲ್ಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಎರಡೂ ತಾಲ್ಲೂಕಿನ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದಲ್ಲಿ 89 ತಾಲ್ಲೂಕುಗಳನ್ನು ತೀವ್ರ ಬರ ಹಾಗೂ 12 ಸಾಧಾರಣ ಸೇರಿ 121 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಘೋಷಿಸಿದೆ. ಜಗಳೂರು ಭಾಗದಲ್ಲಿ ಶೇ 80ರಷ್ಟು ಬಿತ್ತನೆಯಾಗದೇ ತೀವ್ರ ಬರ ಆವರಿಸಿದ್ದು, ಕಸಬಾ, ಸೊಕ್ಕೆ ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ ಅಲ್ಪಸ್ವಲ್ಪ ಪ್ರದೇಶದಲ್ಲೂ ಮಳೆ ಕೊರತೆಯಿಂದ ಬೆಳೆಗಳು ಒಣಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಾಶ್ವತ ಬರಪೀಡಿತ ಎಂದೇ ಹೆಸರಾಗಿರುವ ತಾಲ್ಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಮಳೆಯಾಗಿದೆ. ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ಕೇವಲ ಮಳೆ ಆಧಾರಿತ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಬಡ ಕೂಲಿ ಕಾರ್ಮಿಕರು ಹೆಚ್ಚಿದ್ದು, ಸಾಮೂಹಿಕ ಗುಳೆ ಹೋಗುತ್ತಿದ್ದಾರೆ.
ನೀರಾವರಿಯಿಂದ ಸಮೃದ್ಧವಾಗಿರುವ ದಾವಣಗೆರೆ, ಚನ್ನಗಿರಿ, ನ್ಯಾಮತಿ ಹಾಗೂ ಹೊನ್ನಾಳಿ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಜಗಳೂರು ತಾಲ್ಲೂಕನ್ನು ಕೈಬಿಟ್ಟಿರುವುದು ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
‘ಎರಡು ದಶಕದಲ್ಲಿ ಪ್ರತಿ ಬಾರಿ ಬರಗಾಲ ಎದುರಾದಾಗ ಮೊದಲನೇ ಪಟ್ಟಿಯಲ್ಲಿ ಜಗಳೂರು ತಾಲ್ಲೂಕು ಸೇರ್ಪಡೆಯಾಗಿರುವುದು ಕಡಿಮೆ. ಸತತ ಒತ್ತಡ ಹಾಗೂ ಪ್ರತಿಭಟನೆಯ ನಂತರ ಎರಡನೇ ಹಂತದಲ್ಲಿ ಜಗಳೂರು ತಾಲ್ಲೂಕನ್ನು ಸೇರ್ಪಡೆಗೊಳಿಸಲಾಗಿದೆ. ಈಗಲೂ ಅದೇ ಆಗಿದೆ. ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ’ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಮುಖಂಡ ಯಾದವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳು ಹೋರಾಟದಿಂದಲೇ ತಾಲ್ಲೂಕಿಗೆ ಮಂಜೂರಾಗಿವೆ. ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯ ಭಾಗ ಎಂದು ಪರಿಗಣಿಸಿಲ್ಲ. ಅಡಿಕೆ ನಾಡು ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲ್ಲೂಕು ಪಟ್ಟಿಯಲ್ಲಿ ಸೇರಿವೆ. ಜಗಳೂರು ಸೇರಿಲ್ಲ ಎಂದರೆ ದೊಡ್ಡ ಅನ್ಯಾಯ. ಕೂಡಲೇ ಬರ ಪಟ್ಟಿಗೆ ತಾಲ್ಲೂಕು ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಜೊತೆ ಚರ್ಚೆ: ಶಾಸಕ ದೇವೇಂದ್ರಪ್ಪ
‘ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಜಗಳೂರು ಕೈಬಿಟ್ಟಿರುವುದು ಆಘಾತ ತಂದಿದೆ. ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ, ಬಯಲುಸೀಮೆ ಎಂದೇ ಹೆಸರಾಗಿರುವ ತಾಲ್ಲೂಕಿನ ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಇಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ. ಯಾವ ಮಾನದಂಡದಲ್ಲಿ ತಾಲ್ಲೂಕು ಕೈಬಿಟ್ಟಿದೆ ಎನ್ನುವುದು ತಿಳಿಯುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರೊಂದಿಗೆ ಚರ್ಚಿಸಿ ತಾಲ್ಲೂಕಿಗೆ ನ್ಯಾಯ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ನೀರಾವರಿ ಸೌಲಭ್ಯವಿದ್ದರೂ ಬರ ತಪ್ಪಿಲ್ಲ
ಹರಿಹರ: ತಕ್ಕಮಟ್ಟಿಗೆ ನೀರಾವರಿ ಸೌಲಭ್ಯ ಹೊಂದಿದ್ದರೂ ಬರದ ಬಿಸಿ ತಟ್ಟಿರುವ ತಾಲ್ಲೂಕನ್ನು ಬರದ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ನದಿ, ದೇವರಬೆಳೆಕೆರೆ ಪಿಕ್‌ಅಪ್, ಭದ್ರಾ ಅಚ್ಚುಕಟ್ಟಿನ ಕಾಲುವೆಗಳ ಜಾಲ ಹೊಂದಿದ್ದರೂ ಮಳೆಯ ಕೊರತೆ ತಾಲ್ಲೂಕಿನ ರೈತರನ್ನು ಹೈರಾಣು ಮಾಡಿದೆ. ಈವರೆಗೆ ಭದ್ರಾ ಕಾಲುವೆಗಳಿಗೆ ನೀರು ಹರಿಸಿಲ್ಲ, ದೇವರೆಬೆಳೆಕೆರೆ ಪಿಕ್‌ಅಪ್ ಕೂಡ ಮಳೆ ಕೊರತೆಯಿಂದಾಗಿ ನೀರಿನ ಸಮಸ್ಯೆ ಅನುಭವಿಸುತ್ತಿದೆ.
ನೀರಾವರಿಯ ಜೊತೆಗೆ ಮಳೆಯಾಶ್ರಿತ ಜಮೀನಿನ ಪ್ರದೇಶವೂ ಹೆಚ್ಚಿದೆ. ಪರಿಸ್ಥಿತಿ ಹೀಗಿರುವಾಗ ತಾಲ್ಲೂಕನ್ನು ಬರದ ಪಟ್ಟಿಯಿಂದ ಹೊರಗಿಟ್ಟಿರುವುದು ಆಶ್ಚರ್ಯ ಮೂಡಿಸಿದೆ ಎನ್ನುತ್ತಾರೆ ರೈತರು.
‘ಭದ್ರಾ ಜಲಾಶಯದಿಂದ ಈ ಭಾಗದ ಕಾಲುವೆಗಳಿಗೆ ನೀರು ಹರಿಸಿಲ್ಲ, ಇದರ ಜೊತೆಗೆ ಜಲಾಶಯದ 3 ಟಿಎಂಸಿ ಅಡಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಹರಿಸಲು ಸರ್ಕಾರ ಆದೇಶ ಮಾಡಿದೆ. ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇದೆ. ಪರಿಸ್ಥಿತಿ ಹೀಗಿರುವಾಗ ಬರದ ಪಟ್ಟಿಯಲ್ಲಿಯೂ ಹರಿಹರ ಹೆಸರು ಇಲ್ಲದಿರುವುದು ತಾಲ್ಲೂಕಿನ ರೈತರ ನಿದ್ದೆಗೆಡಿಸಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಸಾಮೂಹಿಕ ನಾಯಕತ್ವ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಬಿ.ನಂದೀಶ್ ನಂದಿತಾವರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-43-1091351523