
ಸಂದರ್ಶನ: ಭಿನ್ನ ಪಾತ್ರಗಳ ಹುಡುಕಾಟದಲ್ಲಿದ್ದೇನೆ–ಶಾನ್ವಿ
ನೀವು ಮೂರು ವರ್ಷಗಳ ನಂತರ ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ ಅಲ್ವಾ?
ಹೌದು. ‘ಬ್ಯಾಂಗ್’ ಸಿನಿಮಾ ತೆರೆಕಂಡು ಮೂರು ವರ್ಷಗಳೇ ಉರುಳಿವೆ. ನಾನು ಪೂರ್ತಿ ಕಥೆಯನ್ನು ಓದಿ ಸಿನಿಮಾ ಒಪ್ಪಿಕೊಳ್ಳುತ್ತೇನೆ. ನನಗೆ ಬಂದ ಬಹುತೇಕ ಕಥೆಗಳ ಸಾರಾಂಶ ಚೆನ್ನಾಗಿತ್ತು. ಆದರೆ ಕಥೆ ಪೂರ್ಣವಾಗಿ ತರಿಸಿಕೊಂಡಾಗ ಅದು ನನ್ನನ್ನು ಸೆಳೆಯಲಿಲ್ಲ. ಬರಹಗಾರರು ಮತ್ತು ನಿರ್ದೇಶಕರು ಸ್ತ್ರೀಪಾತ್ರಕ್ಕೆ ಬೇಕಾದಂತೆ ಕಥೆಗಳನ್ನು ಬದಲಾಯಿಸಿಕೊಳ್ಳುವುದಿಲ್ಲ. ನಟಿಯಾಗಿ ನಾನು ಈ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲವಲ್ಲ. ಹೀಗಿರುವಾಗ ನನ್ನೆದುರಿಗಿರುವ ಒಂದೇ ಆಯ್ಕೆ ಸಿನಿಮಾ ಒಪ್ಪಿಕೊಳ್ಳದೇ ಇರುವುದು. ತೆರೆಯಲ್ಲಿ ಕಾಣಿಸಿಕೊಳ್ಳಲೇಬೇಕು ಎನ್ನುವ ಹಟದಿಂದ ಸಿನಿಮಾ ಮಾಡುವವಳು ನಾನಲ್ಲ.
‘ಅಮೆರಿಕಾ ಅಮೆರಿಕಾ–2’ ರೀತಿಯ ಕಥೆಯುಳ್ಳ ಸಿನಿಮಾ ಮಾಡಿ ಬಹಳ ವರ್ಷಗಳೇ ಆಗಿವೆ. ಇಷ್ಟು ಸಮಯದ ಬಳಿಕ ತೆರೆ ಮೇಲೆ ಬರುತ್ತಿದ್ದೇನೆ. ಜನ ಕಾಯುತ್ತಿದ್ದಾರೋ ತಿಳಿದಿಲ್ಲ. ಆದರೆ ನಾನು ಖಂಡಿತವಾಗಿಯೂ ಕಾಯುತ್ತಿದ್ದೇನೆ. ನನ್ನ ಸಿನಿಮಾ ತೆರೆ ಕಾಣದೆ ವರ್ಷಗಳೇ ಆಗಿವೆ ಎನ್ನುವ ಬೇಜಾರು ನನಗಿಲ್ಲ. ಈ ಒತ್ತಡವೇ ಸಿನಿಮಾ ಒಪ್ಪಿಕೊಳ್ಳಲು ಕಾರಣವಲ್ಲ. ಏಕೆಂದರೆ ಒಂದು ಸಿನಿಮಾ ಮಾಡಿದರೆ ಅದು ಭಿನ್ನವಾಗಿರಬೇಕು, ಪಾತ್ರವು ನನ್ನ ಸಿನಿಪಯಣದಲ್ಲೇ ಹೊಸದಾಗಿರಬೇಕು ಎಂಬ ಬಯಕೆ ನನ್ನದು.
ನನ್ನ ಸಿನಿಪಯಣದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಒಂದು ನಿರಂತರ ಹರಿವು ಇತ್ತು. ಆದರೆ ಆಗ ನಾನು ಒಂದೇ ರೀತಿಯ ಸಿನಿಮಾಗಳನ್ನು ಮಾಡಿದ್ದೇನೆ. ಯಾವುದರಲ್ಲೂ ಪಾತ್ರಕ್ಕೊಂದು ತೀವ್ರತೆ, ಬರವಣಿಗೆಗೊಂದು ಆಳವಿರಲಿಲ್ಲ. ‘ಕ್ಯೂಟ್’ ಇದೆ, ‘ಬಬ್ಲಿ’ ಇದೆ... ಇದೆಲ್ಲವನ್ನೂ ಮಾಡಲೇಬೇಕು. ಹೀಗೆಯೇ ಒಬ್ಬ ನಾಯಕಿಯ ಸಿನಿಮಾ ಪಯಣ ಆರಂಭವಾಗುತ್ತದೆ. ಆದರೆ ಒಂದು ಹಂತದಲ್ಲಿ ಸಿನಿಮಾ ಆಯ್ಕೆಯಲ್ಲಿ, ಪಾತ್ರಗಳಲ್ಲಿ ಬದಲಾವಣೆ ಬೇಕೆನಿಸುತ್ತದೆ. ಆಯ್ಕೆ ಮಾಡಿದ ಪಾತ್ರ ನನಗೂ ತೃಪ್ತಿ ನೀಡಬೇಕು, ಜನರ ಮನಸ್ಸಿನಲ್ಲೂ ಉಳಿಯಬೇಕು ಎಂದೆನಿಸತೊಡಗಿತು.
ಪ್ರಸ್ತುತದಲ್ಲಿ ಜನರ ಮನಸ್ಸಿನಲ್ಲಿ ಸಿನಿಮಾ ದೀರ್ಘಕಾಲ ಉಳಿಯುವುದು ಕಷ್ಟ. ಆದರೆ ಪಾತ್ರಗಳು ಉಳಿಯುತ್ತವೆ. ನಾನು ಈ ರೀತಿಯ ಪಾತ್ರಗಳ ಹುಡುಕಾಟದ ಕಾಲಘಟ್ಟದಲ್ಲಿದ್ದೇನೆ.
ಸ್ತ್ರೀಕೇಂದ್ರಿತ ಸಿನಿಮಾ ಒಂದಿಡೀ ಕುಟುಂಬವನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ. ಕಥೆ ಗಟ್ಟಿಯಾಗಿದ್ದಾಗ ಮತ್ತು ಅದರೊಳಗಿನ ಸ್ತ್ರೀಪಾತ್ರದ ಬರವಣಿಗೆಯೂ ಸೆಳೆಯುವಂತಿದ್ದಾಗ ಜನರು ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿ ಸ್ತ್ರೀಪಾತ್ರದ ತೆರೆ ಅವಧಿ ಮುಖ್ಯವಾಗುವುದಿಲ್ಲ. ಬರವಣಿಗೆ ಗಟ್ಟಿಯಾಗಿದ್ದರೆ ಐದು–ಹತ್ತು ನಿಮಿಷದ ಹಾಜರಿಯೂ ಪರಿಣಾಮಕಾರಿಯಾಗಿರುತ್ತದೆ. ಉದಾಹರಣೆಗೆ ‘ಅವನೇ ಶ್ರೀಮನ್ನಾರಾಯಣ’ದ ‘ಲಕ್ಷ್ಮೀ’ ಪಾತ್ರವು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇದುವೇ ನನ್ನ ಸಿನಿಪಯಣಕ್ಕೆ ತಿರುವು ನೀಡಿತ್ತು. ಆಗಲೇ ನಾನು ಇಂತಹ ಮತ್ತಷ್ಟು ಪಾತ್ರಗಳನ್ನು, ಸಿನಿಮಾಗಳನ್ನು ಮಾಡಬೇಕು ಎಂದು ನಿರ್ಧರಿಸಿದೆ. ದುರದೃಷ್ಟವಶಾತ್, ಈ ಸಿನಿಮಾ ತೆರೆಕಂಡ ಬೆನ್ನಲ್ಲೇ ಕೋವಿಡ್ ಚಿತ್ರರಂಗಕ್ಕೇ ಬ್ರೇಕ್ ಹಾಕಿತು. ನಂತರದಲ್ಲಿ ಅಂತಹ ಸಿನಿಮಾಗಳನ್ನು ಮಾಡುವವರು ಕಾಣಿಸಲೇ ಇಲ್ಲ.
‘ಅಮೆರಿಕಾ ಅಮೆರಿಕಾ–2’ ಸಿನಿಮಾ ಹಾಗೂ ನಿಮ್ಮ ಪಾತ್ರದ ಬಗ್ಗೆ...
ನಾನು ಸಿನಿಮಾ ಒಪ್ಪಿಕೊಳ್ಳುವಾಗ ಚಿತ್ರದ ಶೀರ್ಷಿಕೆ ಇನ್ನೂ ನಿಗದಿಯಾಗಿರಲಿಲ್ಲ. ಬೇರೊಂದು ಶೀರ್ಷಿಕೆ ಚರ್ಚೆಯಲ್ಲಿತ್ತು. ಹಾಗಾಗಿ ‘ಅಮೆರಿಕಾ! ಅಮೆರಿಕಾ!!’ದ ಭಾರ–ಜವಾಬ್ದಾರಿ ನಮ್ಮ ಮೇಲೆ ಇರಲಿಲ್ಲ. ಕಥೆ ಬಹಳ ಭಾವನಾತ್ಮಕವಾಗಿದ್ದು, ಎಲ್ಲರ ಮನೆಯಲ್ಲೂ ನಡೆಯುವ ಕಥೆ ಇದು. ಒಂದು ರೀತಿಯಲ್ಲಿ ಟ್ರಾವೆಲ್ ಸ್ಟೋರಿ. 45 ದಿನ ಅಮೆರಿಕದಲ್ಲಿ ಚಿತ್ರೀಕರಣ ಮಾಡಿದ್ದೇವೆ.
ನಾನು ‘ನುಡಿ’ ಎನ್ನುವ ಪಾತ್ರ ಮಾಡಿದ್ದೇನೆ. ಸ್ವತಂತ್ರ ಮಹಿಳೆ ಈಕೆ. ಇವಳು ಈಗಿನ ಸಮಾಜದಲ್ಲಿರುವ ಮಹಿಳೆಯನ್ನು ಪ್ರತಿನಿಧಿಸುತ್ತಾಳೆ. ವೃತ್ತಿ, ಕುಟುಂಬ, ಪ್ರೀತಿಯ ಸುತ್ತ ಚಿತ್ರದ ಕಥೆ ಇದೆ. ಇದು ಈಗಿನ ಮಿಲೇನಿಯಲ್ಸ್ ಮತ್ತು ಜೆನ್–ಝೀ ಪೀಳಿಗೆಗೆ ಹೆಚ್ಚು ಕನೆಕ್ಟ್ ಆಗಲಿದೆ. ಜೆನ್–ಝೀ ಪೀಳಿಗೆ ನೋಡಲು ಬಹಳ ಆಧುನಿಕವಾಗಿ ಕಂಡರೂ, ಅವರಲ್ಲಿರುವ ಭಾವನೆಗಳು ತೀವ್ರವಾಗಿವೆ ಮತ್ತು ಸೂಕ್ಷ್ಮವಾಗಿವೆ. ತಮ್ಮ ಆಲೋಚನೆಗಳನ್ನು ಬಹಳ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರು ಖಂಡಿತವಾಗಿಯೂ ‘ನುಡಿ’ಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ನಾಗತಿಹಳ್ಳಿ ಅವರನ್ನು ಮೇಷ್ಟ್ರಾಗಿ ಕಂಡ ಬಗೆ...
ಅವರ ನಿರ್ದೇಶನದ ದಿನಗಳು ಒಂದು ರೀತಿಯಲ್ಲಿ ಪಾಠಶಾಲೆಯಂತಿದ್ದವು. ಅವರು ಸೃಷ್ಟಿಸುವ ವಾತಾವರಣ, ಅವರ ಬರವಣಿಗೆಯಲ್ಲಿ ಭಾವನೆಗಳಿಗಿರುವ ಆಳ ಇವೆಲ್ಲವೂ ಇಂದಿನ ನಿರ್ದೇಶಕರ ಬರವಣಿಗೆಯಲ್ಲಿ ಕಾಣಿಸುವುದು ಅಪರೂಪ. ನನಗೆ ಈ ರೀತಿಯ ಸಿನಿಮಾ ಸಿಗುತ್ತದೆ ಎಂದುಕೊಂಡೇ ಇರಲಿಲ್ಲ.
ನಾಗತಿಹಳ್ಳಿ ಅವರಂತಹ ಖ್ಯಾತ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ಅದುವೇ ಒಂದು ಜವಾಬ್ದಾರಿ. ನಟಿಯಾಗಿ ಏನನ್ನೋ ಸಾಧಿಸಿದ್ದೇನೆ ಎನ್ನುವ ಭಾವನೆ ಮೂಡಿತು. ಅವರ ಜೊತೆ ಕೆಲಸ ಮಾಡಿರುವುದು ಒಂದು ರೀತಿಯಲ್ಲಿ ಪ್ರಶಸ್ತಿ ದೊರೆತಂತೆ.v
ಕಥೆ ಕೇಳುವುದು ಮುಂದುವರಿದಿದೆ. ಶೀಘ್ರದಲ್ಲೇ ಒಂದು ಕನ್ನಡ ಸಿನಿಮಾ ಘೋಷಣೆಯಾಗಲಿದೆ. ಇದರಲ್ಲಿ ಒಂದು ಭಿನ್ನ ಪಾತ್ರ ದೊರೆತಿದೆ. ಇತ್ತೀಚೆಗೆ ನಿರ್ದೇಶಕರು ಸ್ತ್ರೀಪಾತ್ರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ ಎನ್ನುವುದಕ್ಕೆ ನಾನು ಕೇಳುತ್ತಿರುವ ಕನ್ನಡದ ಕಥೆಗಳೇ ಸಾಕ್ಷಿಯಾಗಿವೆ.
ವಿಶೇಷವೆಂದರೆ, ಇತರೆ ಚಿತ್ರರಂಗಗಳಿಂದ ಇಂತಹ ಕಥೆಗಳು ಬಂದಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಬದಲಾವಣೆಯನ್ನು ಕಾಣುತ್ತಿದ್ದೇನೆ. ಕನ್ನಡದ ಜೊತೆಗೆ ಹಿಂದಿ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-51-874533351