ಮೊದಲ ಟೆಸ್ಟ್: ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ

ಮೊದಲ ಟೆಸ್ಟ್: ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ

ಮೊದಲ ಟೆಸ್ಟ್: ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ

ಗಾಲ್: ಒಮ್ಮೆ ಪ್ರಖರ ಸೂರ್ಯನ ಶಾಖ, ಮತ್ತೊಮ್ಮೆ ಮೋಡ ಮುಸುಕಿದ ಆಗಸ ಹಾಗೂ ಎರಡು ಬಾರಿ ಸುರಿದ ಮಳೆಯ ವಾತಾವರಣದ ನಡುವೆ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ದೇವದತ್ತ ಪಡಿಕ್ಕಲ್ ಮತ್ತು ಕೆ.ಎಲ್. ರಾಹುಲ್ ಗಟ್ಟಿ ಅಡಿಪಾಯ ಹಾಕಿದರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಶುಭಮನ್ ಗಿಲ್. ಆರಂಭಿಕ ಜೋಡಿ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರು  ರನ್ ಗಳಿಸುವ ಹೊಯ್ದಾಟದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡರು. ಆತಿಥೇಯ ಶ್ರೀಲಂಕಾದ ಫೀಲ್ಡರ್‌ಗಳು ಇದರ ಪ್ರಯೋಜನ ಪಡೆದು ಜೈಸ್ವಾಲ್ ಅವರನ್ನು ರನ್‌ಔಟ್ ಮಾಡುವಲ್ಲಿ ಯಶಸ್ವಿಯಾದರು. ಜೈಸ್ವಾಲ್ (32; 37ಎ) ಉತ್ತಮ ಲಯದಲ್ಲಿದ್ದರು. ಆದರೆ ಈ ಹಂತದಲ್ಲಿ ಕ್ರೀಸ್‌ಗೆ ಬಂದ ದೇವದತ್ತ (ಬ್ಯಾಟಿಂಗ್ 131, 178ಎ, 4X12, 6X1) ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಟೆಸ್ಟ್‌ನಲ್ಲಿ ಶತಕ ಗಳಿಸಿದ ಕರ್ನಾಟಕದ 9ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದ್ದು. 

ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಆಡುತ್ತಿರುವ ದೇವದತ್ತ ಅವರು  ಕೆ.ಎಲ್. ರಾಹುಲ್ (ಗಾಯಗೊಂಡು ನಿವೃತ್ತಿ 77; 162ಎ, 4X9, 6X1) ಜೊತೆಯಾಟದಲ್ಲಿ 150 ರನ್ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಮುಕ್ತಾಯಕ್ಕೆ 73 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 288 ರನ್ ಗಳಿಸಿತು. 

ಮೊದಲ ದಿನದಾಟ ನೋಡಲು ಬಹಳಷ್ಟು ಪ್ರೇಕ್ಷಕರು ಸೇರಿದ್ದರು. ಅವರ ಮುಂದೆ ಕರ್ನಾಟಕದ ಜೋಡಿಯು ಚೆಂದದ ಆಟವಾಡಿತು. ಹಾಫ್ ವಾಲಿ ಡ್ರೈವ್‌ಗಳು, ಪಂಚ್ ಮತ್ತು ಆಗಾಗ ಕೆಲವು ಎತ್ತರದ ಹೊಡೆತಗಳು ಮನ ಸೆಳೆದವು. ಅವಸರವಿರದ ಕಲಾತ್ಮಕ ಶೈಲಿಯ ಆಟ ಇಬ್ಬರಿಂದಲೂ ಮೂಡಿಬಂದಿತ್ತು. ಅವರ ಸ್ವೀಪ್‌ಗಳು ಕೂಡ ನಿಖರವಾಗಿದ್ದವು. 

ಲಂಕಾ ತಂಡವು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಆದರೆ ಅವರು ದೇವದತ್ತ ಅಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಪಿಚ್‌ನಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಲಭಿಸಿದ ನೆರವು ಪಡೆಯಲು ಯತ್ನಿಸಿದರು. ವೇಗಿಗಳಾದ ಅಸಿತಾ ಫರ್ನಾಂಡೊ ಮತ್ತು ಲಹಿರು ಕುಮಾರಾ ಅವರು ಪರಿಣಾಮಕಾರಿಯಾಗಿರಲಿಲ್ಲ. 

ಊಟದ ವಿರಾಮದ ಹೊತ್ತಿಗೆ ಪ್ರವಾಸಿ ತಂಡವು 1 ವಿಕೆಟ್‌ಗೆ 101 ರನ್ ಗಳಿಸಿತು. ಆದರೆ ಈ ಸಮಯದಲ್ಲಿ ಮಳೆ ಬಂದ ಕಾರಣ 40 ನಿಮಿಷಗಳವರೆಗೆ ಆಟ ನಡೆಯಲಿಲ್ಲ.  ತದನಂತರದ ಅವಧಿಯಲ್ಲಿಯೂ ರಾಹುಲ್, ದೇವದತ್ತ ಅವರ ಲಯ ಯಥಾಪ್ರಕಾರ ಮುಂದುವರಿಯಿತು. ಆದರೆ ರನ್ ಗಳಿಕೆಗೆ ಹೆಚ್ಚು ಎಸೆತಗಳನ್ನು ತೆಗೆದುಕೊಂಡರು. 32(77ಎ) ರನ್ ಗಳಿಸಿದ್ದ ರಾಹುಲ್ ಅವರು ಅರ್ಧಶತಕ ಮುಟ್ಟಲು 50 ಎಸೆತಗಳನ್ನು ಆಡಿದರು.  ಅದರೊಂದಿಗೆ ಟೆಸ್ಟ್‌ನಲ್ಲಿ ತಮ್ಮ 21ನೇ ಅರ್ಧಶತಕ ದಾಖಲಿಸಿದರು. 

ಆದರೆ ಪಡಿಕ್ಕಲ್ 81 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದೇವದತ್ತ ತಮ್ಮ ಆಟದ ವೇಗ ಹೆಚ್ಚಿಸಿದರು. ಇನಿಂಗ್ಸ್‌ ಮೇಲೆ ನಿಯಂತ್ರಣ ಸಾಧಿಸಿದರು. ಚೆಂದದ ಬೌಂಡರಿಗಳನ್ನು ಹೊಡೆಯುವುದರ ಜೊತೆಗೆ ಒಂಟಿ, ಎರಡು ರನ್‌ ಕೂಡ ತೆಗೆದುಕೊಂಡರು. ಯಾವುದೇ ಅವಕಾಶವನ್ನೂ ಬಿಡಲಿಲ್ಲ. 

ಆದರೆ ಅಂತಿಮ ಅವಧಿಯಲ್ಲಿ ರಾಹುಲ್ ಅವರು ಸ್ನಾಯುಸೆಳೆತದಿಂದಾಗಿ ಪೆವಿಲಿಯನ್‌ಗೆ ಮರಳಿದರು. ಇನ್ನೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ದೇವದತ್ತ ಅವರು ನಾಯಕ ಗಿಲ್ ಜೊತೆಗೂಡಿ ರನ್‌ ಗಳಿಸಿದರು. ಆದರೆ 16 ರನ್ ಗಳಿಸಿದ ಗಿಲ್ ಅವರು ಪ್ರಭಾತ್ ಜಯಸೂರ್ಯ ಎಸೆತದಲ್ಲಿ ಲಹೀರು ಉದಾರಗೆ ಕ್ಯಾಚಿತ್ತರು.  ಪಡಿಕ್ಕಲ್ ಜೊತೆಗೂಡಿದ ರಿಷಭ್ ಪಂತ್ (ಬ್ಯಾಟಿಂಗ್ 27) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 52 ರನ್ ಸೇರಿಸಿದರು. ವಿಕೆಟ್ ಪತನವಾಗದಂತೆ ನೋಡಿಕೊಂಡರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ