
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
ಡಾರ್ವಿನ್: ಇಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 9 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಆ ಮೂಲಕ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾದಲ್ಲಿ 23 ವರ್ಷದ ಬಳಿಕ ಮೊದಲ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಹಸನ್ ಮಹಮೂದ್ ದಾಳಿಗೆ ತತ್ತರಿಸಿ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟೀವ್ ಸ್ಮಿತ್ 71 ರನ್ ಸಿಡಿಸಿದರು. ಬಾಂಗ್ಲಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಹಸನ್ ಮಹಮೂದ್ 55 ರನ್‌ಗಳಿಗೆ 6 ವಿಕೆಟ್ ಪಡೆದು ಮಿಂಚಿದರು.
ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡವು ತನ್ಜಿದ್ ಹಸನ್ (101) ಶತಕ, ನಜ್ಮುಲ್ ಹುಸೇನ್ ಶಾಂಟೊ ಹಾಗೂ ಮೆಹಿದಿ ಹಸನ್ ಮಿರಾಜ್ ಅವರ ಅರ್ಧಶತಕಗಳ ನೆರವಿನಿಂದ 426 ರನ್ ಕಲೆಹಾಕಿತು.
228 ರನ್‌ಗಳ ಬೃಹತ್ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕೆಮರೂನ್ ಗ್ರೀನ್ ಅವರ (104) ಶತಕದ ಹೊರತಾಗಿಯೂ 284 ರನ್‌ಗಳಿ ಆಲೌಟ್ ಆಯಿತು. ಬಾಂಗ್ಲಾದೇಶದ ಪರ ಮೆಹಿದಿ ಹಸನ್ 66 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಬಾಂಗ್ಲಾ ಗೆಲುವಿಗೆ 57 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು 1 ವಿಕೆಟ್ ಕಳೆದುಕೊಂಡು ತಲುಪಿದ ಬಾಂಗ್ಲಾ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸುಲಭ ಗೆಲುವು ದಾಖಲಿಸಿತು.
ಎರಡೂ ಇನಿಂಗ್ಸ್‌ಗಳಲ್ಲಿ ಅಮೋಘ ಬೌಲಿಂಗ್ ದಾಳಿ ಪ್ರದರ್ಶಿಸಿದ ಹಸನ್, ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು ಮಿಂಚಿದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದ ಅವರು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾ ತಂಡದ ಆರಂಭಿಕ ಬ್ಯಾಟರ್ ತನ್ಜಿದ್ ಹಸನ್ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಬಾಂಗ್ಲಾದೇಶದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದು ಜಗತ್ತಿನ ಯಾವುದೇ ಪ್ರವಾಸಿ ತಂಡಕ್ಕೂ ಅತ್ಯಂತ ಕಠಿಣ ಸವಾಲು. ಆದರೆ ನಜ್ಮುಲ್ ಹುಸೇನ್ ಶಾಂಟೊ ನಾಯಕತ್ವದ ಬಾಂಗ್ಲಾದೇಶ ತಂಡ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿ ಈ ಐತಿಹಾಸಿಕ ಜಯ ದಾಖಲಿಸಿದೆ.
ಇದಕ್ಕೂ ಮೊದಲು ಬಾಂಗ್ಲಾದೇಶ ತಂಡವು 2017ರಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್ ಗೆಲುವು ದಾಖಲಿಸಿತ್ತು. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಎರಡನೇ ಗೆಲುವು ಇದಾಗಿದೆ.