ಕೂಡ್ಲಿಗಿ: ಮೊರಬದಲ್ಲಿ ಸಚಿವ ಜಮೀರ್ ಅವರಿಂದ ಬರಪೀಡಿತ ಪ್ರದೇಶ ವೀಕ್ಷಣೆ

ಕೂಡ್ಲಿಗಿ: ಮೊರಬದಲ್ಲಿ ಸಚಿವ ಜಮೀರ್ ಅವರಿಂದ ಬರಪೀಡಿತ ಪ್ರದೇಶ ವೀಕ್ಷಣೆ

ಕೂಡ್ಲಿಗಿ: ಮೊರಬದಲ್ಲಿ ಸಚಿವ ಜಮೀರ್ ಅವರಿಂದ ಬರಪೀಡಿತ ಪ್ರದೇಶ ವೀಕ್ಷಣೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಬರ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌, ರೈತರಿಂದ ಅಹವಾಲು ಆಲಿಸಿದರು. ಮೆಕ್ಕೆಜೋಳ, ಜೋಳ, ಸಜ್ಜೆ ಹೊಲಗಳಲ್ಲಿ ಗಿಡಗಳು ಬರದಿಂದಾಗಿ ತೆನೆಕಟ್ಟಲು ಸಾಧ್ಯವಿಲ್ಲದ ಸ್ಥಿತಿ ಕಂಡು ಬೇಸರಗೊಂಡರು.

ಮೊದಲಿಗೆ ಶಾಂತಲಿಂಗಮ್ಮ ಎಂಬ ರೈತ ಮಹಿಳೆಯ ಹೊಲಕ್ಕೆ ತೆರಳಿದ ಸಚಿವರು, ಮಳೆ ಇಲ್ಲದೆ ತೆನೆ ಕಟ್ಟಲು ವಿಫಲವಾದ ಮೆಕ್ಕೆಜೋಳ ಗಿಡಗಳನ್ನು ಗಮನಿಸಿದರು. ‘ಎಕರೆಗೆ ₹15 ಸಾವಿರದಷ್ಟು ಖರ್ಚು ಮಾಡಿದ್ದು, ಮಳೆ ಇಲ್ಲದ ಕಾರಣ ಇಲ್ಲಿ ಹುಟ್ಟಿದ ಗಿಡಗಳು ವ್ಯರ್ಥವಾಗಿವೆ, ಸರ್ಕಾರ ತಕ್ಷಣ ನಷ್ಟ ಪರಿಹಾರ ನೀಡಬೇಕು’ ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.

ಇದೇ ಗ್ರಾಮದ ಬಿಂಜಿ ವೀರಪ್ಪ ಎಂಬ ರೈತರ ಹೊಲಕ್ಕೆ ಭೇಟಿ ನೀಡಿದ ಸಚಿವ ಜಮೀರ್, ಬರಗಾಲದಿಂದ ಫಲ ನೀಡಲು ಸಾಧ್ಯವೇ  ಇಲ್ಲದ ಸ್ಥಿತಿಯಲ್ಲಿರುವ ಮೆಕ್ಕೆಜೋಳ ಹೊಲವನ್ನು ಗಮನಿಸಿದರು. ‘ಸರ್ಕಾರ ತಕ್ಷಣ ಎಕರೆಗೆ ₹20 ಸಾವಿರದಂತೆ ಪರಿಹಾರ ನೀಡಬೇಕು’ ಎಂದು ರೈತ ವೀರಪ್ಪ ಮನವಿ ಮಾಡಿದರು.

ವಿದ್ಯುತ್ ಇಲ್ಲದೆ ಕೊಳವೆ ಬಾವಿ ಇರುವ ರೈತರಿಗೆ ಸಹ ನೀರು ಹರಿಸಲು ಸಾಧ್ಯವಾಗುತಿಲ್ಲ ಎಂದು ಸ್ಥಳೀಯ ಕೆಲವು ರೈತರು ಅಳಲು ತೋಡಿಕೊಂಡರು.

ಎಲ್ಲವನ್ನೂ ಪರಿಶೀಲಿಸಿದ ಸಚಿವರು, ಜಿಲ್ಲೆಯ ಇನ್ನೂ ಹಲವು ಕಡೆಗಳಿಗೆ ತೆರಳಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ರೈತರ ಜತಗೆ ಸರ್ಕಾರ ಇದೆ ಎಂದು ಭರವಸೆ ನೀಡಿದರು.

ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ್‌, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ಕೃಷಿ ಇಲಾಖೆ ಉಪನಿರ್ದೇಶಕ ವಾಮದೇವ ಕೊಳ್ಳಿ, ಸಹಾಯಕ ನಿರ್ದೇಶಕ ತೇಜಾವರ್ಧನ ಇತರರು ಇದ್ದರು.

ಸಂಜೆಯವರೆಗೂ ಪ್ರವಾಸ: ಸಚಿವ ಜಮೀರ್ ಅವರು ಕೊಟ್ಟೂರು ತಾಲ್ಲೂಕಿನ ಗಜಾಪುರ, ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮಕ್ಕೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರ ಗ್ರಾಮಕ್ಕೆ ಹಾಗೂ ಹೊಸಪೇಟೆ ತಾಲ್ಲೂಕಿನ ನಂದಿಬಂಡಿ ಗ್ರಾಮಕ್ಕೆ ಹಾಗೂ ಇನ್ನೂ ಕೆಲವು ಗ್ರಾಮಗಳಿಗೆ ತೆರಳಿ  ಬರ ಪರಿಸ್ಥಿತಿಯ ಖುದ್ದು ಅವಲೋಕನ ನಡೆಸಲಿದ್ದು, ಸಂಜೆ ಹೊಸಪೇಟೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

Post a Comment

If u have any queries, Please let us know

Previous Post Next Post