ಸಿಟಿ ಪಲ್ಸ್‌: ಸಿಲಿಕಾನ್‌ ಸಿಟಿಯಲ್ಲಿ ಫುಟ್‌ಪಾತ್‌ ರಾಜಕೀಯ, ಪುಂಡರ ಅಟ್ಟಹಾಸ

ಸಿಟಿ ಪಲ್ಸ್‌: ಸಿಲಿಕಾನ್‌ ಸಿಟಿಯಲ್ಲಿ ಫುಟ್‌ಪಾತ್‌ ರಾಜಕೀಯ, ಪುಂಡರ ಅಟ್ಟಹಾಸ

ಸಿಟಿ ಪಲ್ಸ್‌: ಸಿಲಿಕಾನ್‌ ಸಿಟಿಯಲ್ಲಿ ಫುಟ್‌ಪಾತ್‌ ರಾಜಕೀಯ, ಪುಂಡರ ಅಟ್ಟಹಾಸ

‘ಸುಧಾರಣೆ ಆಗಬೇಕಾದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಬಗ್ಗೆ ಕೆಲವರು ಅಸಹ್ಯವಾಗಿ ಮಾತನಾಡಿದ್ದಾರೆ, ಅಗೌರವವಾಗಿ ಮಾತನಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ನಮ್ಮನ್ನು ತೆಗಳಲಿ, ಟೀಕೆ ಮಾಡಲಿ. ಆದರೆ, ಮಾತನಾಡುವಾಗ ಸಭ್ಯತೆಯ ಎಲ್ಲೆಯನ್ನೂ ಮೀರಿದ್ದಾರೆ. ಇದರಿಂದ ಬೆಂಗಳೂರಿಗೆ ಒಳೆಯದಾಗುತ್ತದೆ ಎಂದರೆ ನಾನು ನಿಷ್ಠುರವಾದರೂ ಪರವಾಗಿಲ್ಲ...’

ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಮಾತನ್ನಾಡಲು ಬಹಳ ದಿನಗಳ ಹಿಂದೆಯೇ ಸಿದ್ಧವಾಗಿದ್ದರು. ಏನಾದರೂ ಮಾಡಲು ಹೊರಟರೆ ಅದಕ್ಕೊಂದು ಪ್ರತಿರೋಧ ಇದ್ದೇ ಇರುತ್ತದೆ ಎಂಬುದು ದಶಕಗಳ ಕಾಲ ಸಚಿವರಾಗಿರುವ ಅನುಭವದಲ್ಲಿ ಅವರಿಗೆ ಅದು ಅರಿವಿನಲ್ಲಿ ಇದ್ದೇ ಇದೆ. ಅಂತಹದ್ದೇ ತೆಗಳಿಕೆ ಬೆಂಗಳೂರು ಪಾದಚಾರಿ ಮಾರ್ಗದ ಒತ್ತುವರಿ ತೆರವಿನಲ್ಲೂ ಅವರ ಮೇಲೆ ಬಂದಿದೆ.

ಪಾದಚಾರಿ ಮಾರ್ಗಗಳನ್ನು ‘ವಾಕಬಲ್‌’ ಆಗಿ ಮಾಡಲು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾದಚಾರಿಗಳ ದಶಕಗಳ ಆಸೆಗೆ ಅವರು ನೀರೆರೆದಿದ್ದಾರೆ. ಅದನ್ನು ಸಾಕಾರ ಮಾಡುವ ಪ್ರಯತ್ನವನ್ನೂ ಆರಂಭಿಸಿದ್ದಾರೆ. ನಗರದ 15 ಸಾವಿರ ಕಿಲೋಮೀಟರ್‌ ರಸ್ತೆಯಲ್ಲವನ್ನೂ ಪಾದಚಾರಿ ಸ್ನೇಹಿಯನ್ನಾಗಿ ಮಾಡುವುದು ಅಸಾಧ್ಯ ಎಂಬುದು ಅವರಿಗೆ ಗೊತ್ತಿಲ್ಲದ ವಿಷಯನಲ್ಲ. ಅದಕ್ಕೇ ಅವರು 1500 ಕಿಲೋಮೀಟರ್‌ ರಸ್ತೆಯನ್ನು ಮಾತ್ರ ‘ವಾಕಬಲ್‌’ ಮಾಡಲು ಹೊರಟಿದ್ದರೆ. ಅದನ್ನು ‘ಮಾನಿಟರ್’ ಕೂಡ ಮಾಡುತ್ತಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ನಡೆಯುವ ಸಂಕಷ್ಟ ಪಾದಚಾರಿಗಳಿಗೆ ಮಾತ್ರ ಗೊತ್ತು. ಫುಟ್‌ಪಾತ್‌ನಲ್ಲಾಗಿರುವ ಅತಿಕ್ರಮಣ ಬೀದಿ ಬದಿ ವ್ಯಾಪಾರಿಗಳಿಂದ ಮಾತ್ರ ಆಗಿಲ್ಲ. ದೊಡ್ಡ ದೊಡ್ಡ ಅಂಗಡಿ, ಐಟಿ ಕಂಪನಿ, ಪ್ರತಿಷ್ಠಿತ ಹೋಟೆಲ್‌ಗಳೂ ಫುಟ್‌ಪಾತ್‌ನಲ್ಲಿ ತಮ್ಮ ವ್ಯಾಪಾರ ಪ್ರದೇಶವನ್ನು ವಿಸ್ತರಿಸಿಕೊಂಡಿವೆ. ಈ ಬಗ್ಗೆ ನಾಗರಿಕರು ಯಾರಿಗೆ ದೂರು ನೀಡಬೇಕು ಎಂಬ ಪ್ರಶ್ನೆ ದಶಕಗಳಿಂದಲೂ ಯಾರಿಗೂ ಸಿಕ್ಕಿಲ್ಲ, ಈಗೂ ಸಿಗುತ್ತಿಲ್ಲ. ಏಕೆಂದರೆ, ಪಾದಚಾರಿ ಒತ್ತುವರಿಯಾಗಿರುವುದು ನಗರ ಪಾಲಿಕೆಯ ಸಿಬ್ಬಂದಿ, ಪೊಲೀಸರು,  ಸ್ದಳೀಯ ರಾಜಕಾರಣಿಗಳ ಆಪ್ತೇಷ್ಠರು ಎಲ್ಲರಿಗೂ ಗೊತ್ತೇ ಇದೆ. ಅದನ್ನು ಅವರ ಲಾಭಕ್ಕೆ ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕಲೆಯೂ ಅವರಲ್ಲಿ ಕರಗತವಾಗಿದೆ. ಆದರೆ, ಕೃಷ್ಣ ಬೈರೇಗೌಡರ ಒತ್ತಾಸೆಯಿಂದ ಒಂದಷ್ಟು ಒತ್ತುವರಿ ತೆರವಾಗುತ್ತಿದೆ. ಪಾದಚಾರಿಗಳು ಇದನ್ನು ಸ್ವಾಗತಿಸಿ, ’ಐತಿಹಾಸಿಕ ಕಾರ್ಯ’ ಎಂದು ಹೊಗಳುತ್ತಿದ್ದಾರೆ. ಆದರೆ, ಅವರನ್ನು ಬಿಟ್ಟರೆ ಉಳಿದೆ ಎಲ್ಲ ಕ್ಷೇತ್ರದ ಜನರೂ ಅವರನ್ನು ತೆಗಳುತ್ತಲೇ ಇದ್ದಾರೆ. ಅದಕ್ಕೆ ಮಣೆ ಹಾಕುವುದಿಲ್ಲ ಎಂಬಂತೆ 2026ರ ಜುಲೈ ತಿಂಗಳಲ್ಲಿ ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸುಮಾರು 1000 ಕಿಲೋಮೀಟರ್‌ ಪಾದಚಾರಿ ಮಾರ್ಗದ ಒತ್ತುವರಿ ತೆರವಾಗಿವೆ.

ರಾಜಕೀಯವಿಲ್ಲದ ಕ್ಷೇತ್ರ ಯಾವುದೂ ಇಲ್ಲ ಎಂಬುದು ನಿಜ. ಅದಕ್ಕೇ ಪಾದಚಾರಿ ಮಾರ್ಗ ಒತ್ತುವರಿಯನ್ನು ಆರಂಭಿಕ ಸ್ಟೆಂಟ್‌ ಎಂದೇ ಬಿಜೆಪಿಯವರು ಬಣ್ಣಿಸಿದರು. ಒತ್ತುವರಿ ತೆರವಾಗುತ್ತಿದ್ದಾಗ ಅದನ್ನೇ ಬಳಸಿಕೊಂಡು, ‘ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್‌ ಅವರು ಮಾಡದ ಕಾರ್ಯವನ್ನು ಇವರು ಮಾಡುತ್ತಿದ್ದಾರೆ’ ಎಂದರು. ‘ಸ್ಕ್ಯಾಮ್‌ ಮಾಡಲ್‌’ ಎಂದೂ ಕರೆದರು. ವಿರೋಧ ಪಕ್ಷದವರು ಒತ್ತಟ್ಟಿಗಿರಲಿ, ಸ್ವಪಕ್ಷದವರಿಂದಲೂ ಕೃಷ್ಣ ಬೈರೇಗೌಡ ಅವರಿಗೆ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ಇನ್ನೂ ಲಭ್ಯವಾಗಿಲ್ಲ. ಅದನ್ನು ನೇರವಾಗಿ ಹೇಳಲಾಗದೆ, ‘ಬೀದಿ ಬದಿ ವ್ಯಾಪಾರಿಗಳು ಅತಿ ಬಡವರನ್ನು ಅವರನ್ನು ಏಕಾಏಕಿ ತೆರವು ಮಾಡಬಾರದು. ಅವರಿಗೆ ಬೇರೆ ನೆಲೆ ನೀಡಬೇಕು’ ಎಂದು ಸರ್ಕಾರದಲ್ಲಿರುವವರೇ ವಾದಿಸಿದರು. ದಶಕಗಳಿಂದ ಬೀದಿ ಬದಿ ವ್ಯಾಪಾರಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಚ್ಛಾಶಕ್ತಿ ಇದ್ದಿದ್ದರೆ ಹಲವು ವರ್ಷಗಳ ಹಿಂದೆಯೇ ಅವರಿಗೆಲ್ಲ ಕಾನೂನಾತ್ಮಕ ವ್ಯಾಪಾರದ ಸೂರನ್ನು ಒದಗಿಸಬಹುದಿತ್ತು. ಸಾಲ ನೀಡುವುದಷ್ಟೇ ತಮ್ಮ ಕಾರ್ಯವೆಂದು ನಗರ ಪಾಲಿಕೆ ಅಧಿಕಾರಿಗಳಿಂದ ಹಿಡಿದು ರಾಜಕೀಯ ಮುಖಂಡರು ಭಾವಿಸಿದ್ದರಿಂದ, ಬೀದಿ ಬದಿ ವ್ಯಾಪಾರಿಗಳಿಗೆ ಕನಿಷ್ಠ ಪಕ್ಷ ಗುರುತಿನ ಚೀಟಿಯನ್ನು ನೀಡುವ ಕಾರ್ಯವನ್ನೂ ಮಾಡಿಲ್ಲ. ಅವರ ನೋಂದಣಿ ಕಾರ್ಯವನ್ನು ಐದಾರು ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಇದು ರಾಜಕೀಯ ಮುಖಂಡರು– ಅಧಿಕಾರಿಗಳ ಓಲೈಕೆಯ ಕಾರ್ಯಕ್ಕೆ ಹಿಡಿದ ಕೈಗನ್ನಡಿ.

ರಾಜಧಾನಿ ಬೆಂಗಳೂರಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಒತ್ತಾಸೆಯಿಂದ ‘ಪಾದಚಾರಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ’ 2026ರ ಜುಲೈ 1ರಿಂದ ಆರಂಭವಾದಂದಿನಿಂದಲೂ ಒಂದು ಕಡೆಯಿಂದ ಅವರನ್ನು ಕೆಲವರು ಕುಟುಕುತ್ತಲೇ ಇದ್ದರು. ಬೀದಿ ಬದಿ ವ್ಯಾಪಾರಿಗಳನ್ನು ಮಾತ್ರವಲ್ಲ ಸಣ್ಣ–ಬೃಹತ್‌ ಅಂಗಡಿಗಳ ಪಾದಚಾರಿ ಮಾರ್ಗದ ಒತ್ತುವರಿಯನ್ನೂ ತೆರವುಗೊಳಿಸುವ ಕಾರ್ಯಾಚರಣೆ ವೇಗ ಪಡೆಯುತ್ತಿದ್ದಾಗ, ‘ಇಲ್ಲೆಲ್ಲ ಆಗುತ್ತೆ ಬಿಡಿ, ಶಿವಾಜಿನಗರ, ಚಾಮರಾಜಪೇಟೆಯಲ್ಲಿ ಮಾಡಿ ನೋಡೋಣ’ ಎಂಬ ಕುಹಕದ ಮಾತುಗಳೂ ತೇಲಿಬಂದವು. ಇದಕ್ಕೆ ಕೃಷ್ಣ ಬೈರೇಗೌಡ ಹೆಚ್ಚೇನೂ ಆದ್ಯತೆ ನೀಡಲಿಲ್ಲ, ‘ಕೆಲಸ ಮಾತ್ರ ಮಾತಾಡಬೇಕು’ ಎಂದು ಸುಮ್ಮನಿದ್ದರು. 

ಫುಟ್‌ಪಾತ್‌ ತೆರವು ಕಾರ್ಯಾಚರಣೆ ತನ್ನ 21ನೇ ದಿನ ಬೆಳಿಗ್ಗೆ ಶಿವಾಜಿನಗರದ ಬಸ್‌ ನಿಲ್ದಾಣಕ್ಕೆ ಕಾಲಿಟ್ಟಿತು. ಆಗ ನಡೆದೇ ಹೋಯಿತು ಪುಂಡರ ಅಟ್ಟಹಾಸ. ಕೇಂದ್ರ ನಗರ ಪಾಲಿಕೆಯ ಮಹಿಳಾ ಎಂಜಿನಿಯರ್‌ಗಳನ್ನೂ ಬಿಡದೆ ಹಲ್ಲೆ ಮಾಡಿತು ಪುಂಡರ ಗುಂಪು. ‘ಕನ್ನಡಪರ ಸಂಘಟನೆ’ ಎಂಬ ಹೆಗಲಮೇಲಿನ ಶಾಲಿನ ಮುಖಂಡನಿಂದ ಹಲ್ಲೆಯಾಯಿತು. ಆತನೊಂದಿಗೆ ಸೇರಿಕೊಂಡ ವ್ಯಾಪಾರಿಗಳು ಅಧಿಕಾರಿಗಳನ್ನು ಒತ್ತುವರಿ ತೆರವಿಗೆ ಬಿಡದೆ ಓಡಿಸಿದರು. ಆದರೆ, ಕೃಷ್ಣ ಬೈರೇಗೌಡ, ಜಿಬಿಎ, ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಗಟ್ಟಿಯಾಗಿ ನಿಂತರು. ಮೂವರು ಎಂಜಿನಿಯರ್‌ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಪುಂಡರಗೆ ಮಣಿಯದೆ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಧ್ಯಾಹ್ನವೇ ಮುಂದುವರಿಸಿದರು. ಸಂಜೆ ವೇಳೆಗೆ ಶಿವಾಜಿನಗರ ಬಸ್‌ ಸ್ಟ್ಯಾಂಡ್‌ ಮುಂದಿನ ಪಾದಚಾರಿ ಮಾರ್ಗ ಹಿಂದೆಂದೂ ಕಾಣದ ನೋಟ ಪಡೆಯಿತು. ಖಾಲಿಖಾಲಿಯಾಗಿದ್ದ ಮಾರ್ಗದಲ್ಲಿ ಪಾದಚಾರಿಗಳಷ್ಟೇ ಅಲ್ಲಿದ್ದರು. ಸಂಜೆ– ಮಧ್ಯರಾತ್ರಿಯ ವೇಳೆಗೆ ಹಲ್ಲೆ ನಡೆಸಿದವರೆಲ್ಲರೂ ಪೊಲೀಸರ ಬಂಧನದಲ್ಲಿದ್ದರು.

ಶಿವಾಜಿನಗರಲ್ಲಿ ಜುಲೈ 21ರಂದು ನಡೆದ ಪುಂಡರ ಅಟ್ಟಹಾಸದ ಘಟನೆ ಫುಟ್‌ಪಾತ್‌ ವ್ಯಾಪಾರದಲ್ಲಿರುವ ದಂಧೆಯನ್ನು ಅನಾವರಣಗೊಳಿಸಿತು. ‘ಇಲ್ಲಿ ನಾವು ಸುಮ್ಮನೆ ವ್ಯಾಪಾರ ಮಾಡುವುದಿಲ್ಲ. ತಿಂಗಳಿಗೆ, ವಾರಕ್ಕೆ, ದಿನಕ್ಕೆ ಬಾಡಿಗೆ ಕೊಡುತ್ತೇವೆ. ಅಧಿಕಾರದಲ್ಲಿರುವವರು ಆಗಾಗ್ಗೆ ಬಂದು ವಸೂಲಿ ಮಾಡಿಕೊಂಡು ಹೋಗುತ್ತಲೇ ಇರುತ್ತಾರೆ. ಈಗೇಕೆ ನಮ್ಮನ್ನು ತೆರವು ಮಾಡುತ್ತಿದ್ದೀರಿ, ಕೊಟ್ಟಿದ್ದು ಸಾಕಾಗಲಿಲ್ಲವಾ’ ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ತೆರವಾಗುವ ಸಂದರ್ಭದಲ್ಲೆಲ್ಲ ಹೇಳುತ್ತಲೇ ಇರುತ್ತಾರೆ.  ಆದರೆ ಅವರೂ ಯಾರಿಗೆ ಎಷ್ಟು ಕೊಟ್ಟಿದ್ದೇನೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ. ಅವರು ಹೇಳಿಲ್ಲ ಎಂಬ ಮಾತ್ರಕ್ಕೆ ಅದು ಅಸತ್ಯವೂ ಅಲ್ಲ. ಇಷ್ಟಾದರೂ ಶಿವಾಜಿನಗರ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಡೆದ ಪುಂಡರು ಪ್ರಕರಣ, ಮುಂದಿನ ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡಿತು. ಸಚಿವರು, ಅಧಿಕಾರಿಗಳು ಸಿಬ್ಬಂದಿ ಪರವಾಗಿ ನಿಂತಿದ್ದರಿಂದ ಎಂಜಿನಿಯರ್‌ಗಳು ಮತ್ತೆ ಕಾರ್ಯಾಚರಣೆಗೆ ಮುಂದಾಗಲು ಉತ್ತೇಜನ ನೀಡಿತು. ಅದಕ್ಕೇ ನೋಡಿ, ಜುಲೈ 21ರ ನಂತರದ ಹತ್ತು ದಿನ ಶಿವಾಜಿನಗರದ ಪ್ರಮುಖ ಸ್ಥಳಗಳಾದ ರಸೆಲ್‌ ಮಾರುಕಟ್ಟೆ, ನೊರೊನ್ಹಾ ರಸ್ತೆ, ಮೀಟ್ ಮಾರುಕಟ್ಟೆ ರಸ್ತೆ ಹಾಗೂ ವಿಠಲ್ ಮಲ್ಯ ರಸ್ತೆಯಲ್ಲೂ ಪಾದಚಾರಿ ಮಾರ್ಗದ ಒತ್ತುವರಿ ತೆರವಾಯಿತು. ಅಂಗಡಿಗಳ ಮೆಟ್ಟಿಲು, ಫಲಕಗಳನ್ನೂ ತೆರವುಗೊಳಿಸಿದರು. ಯಾರೂ ತುಟಿಕ್‌ ಪಿಟಿಕ್‌ ಅನ್ನಲಿಲ್ಲ.

ನಿಜ, ಒಂದು ಒಳ್ಳೆಯ ಕೆಲಸವಾಗಬೇಕಾದರೆ ನೂರೆಂಟು ವಿಘ್ನಗಳು ಬರುತ್ತವೆ. ಅದನ್ನು ದಾಟಿ ನಿಂತರಷ್ಟೇ ಉತ್ತಮ ಕೆಲಸವೊಂದು ದಾಖಲಾಗುತ್ತದೆ. ಹಿಂದೆ ವರ್ಷಗಳಲ್ಲಿ ಇಂತಹ ದಿಟ್ಟ ಮಾತುಗಳಾಗುತ್ತಿದ್ದವಾದರೂ, ವಾಸ್ತವದಲ್ಲಿ ಅವು ಕಾರ್ಯಗತವಾಗುವ ವೇಳೆಗೆ ‘ಸೆಟ್ಲ್‌ಲ್‌’ ಆಗಿಬಿಡುತ್ತಿದ್ದವು. ಅದಕ್ಕೇ ನೋಡಿ, ಬೆಂಗಳೂರಿನಲ್ಲಿ ಈ ಹಿಂದೆ ಹಲವು ಜನಪ್ರಿಯ ಕಾರ್ಯಗಳು ಘೋಷಣೆಯಾದರೂ ಇಂದಿಗೂ ಅವುಗಳು ಜಾರಿಯಾಗಿಲ್ಲ. ಅವೆಲ್ಲ ಏನಾದವು ಎಂಬ ಮಾಹಿತಿಯೂ ಇಲ್ಲ. ಒಬ್ಬ ಸಚಿವ ಒಂದು ಘೋಷಣೆ ಮಾಡಿದ ಮೇಲೆ ಅದನ್ನು ಫಾಲೋಅಪ್‌ ಮಾಡಿದರೆ, ಅದರ ಹಿಂದೆಯೇ ಬಿದ್ದರೆ ಘೋಷಣೆ ಕಡತದಲ್ಲಿರದೆ ಅನುಷ್ಠಾನವಾಗುತ್ತದೆ. ಅದಕ್ಕೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಒಂದು ನಿದರ್ಶನ. ಆದರೆ, ಈಗ ಇನ್ನಷ್ಟು ಜವಾಬ್ದಾರಿ ಹೆಗಲೇರಿದೆ. ತೆರವಾಗಿರುವ ಪಾದಚಾರಿ ಮಾರ್ಗ ಅಲ್ಲಲ್ಲಿ ಮತ್ತೆ ಒತ್ತುವರಿ ಆಗುತ್ತಲೂ ಇದೆ. ಇದನ್ನು ನಿರ್ವಹಿಸುವ ಚಾಕಚಕ್ಯತೆ ಹೇಗೆ ಕಾರ್ಯಗತವಾಗುತ್ತದೆ ಎಂಬ ನಿರೀಕ್ಷೆ–ಕಾತುರ ನಗರದ್ದಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ