
ಪತ್ತಿನ ಸಂಘಗಳಲ್ಲಿ ಸೌಲಭ್ಯದ ಕೊರತೆ
ಗುಳೇದಗುಡ್ಡ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪಿಕೆಪಿಎಸ್) ಸಂಘಗಳಿವೆ. ಬಹುತೇಕ ಪಿಕೆಪಿಎಸ್‌ಗಳು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಸರ್ಕಾರ ಅಗತ್ಯ ನೆರವು ನೀಡುವ ಮೂಲಕ ಸೌಲಭ್ಯ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬಹುತೇಕ ಪಿಕೆಪಿಎಸ್‌ಗಳಿಗೆ ವ್ಯವಸ್ಥಿತ ಕಚೇರಿಗಳಿಲ್ಲ. ಉತ್ತಮವಾದ ಕಟ್ಟಡ ಇಲ್ಲ. ಕಚೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್ ಮತ್ತು ಸಿಬ್ಬಂದಿ ಕೊರತೆ ಇದೆ. ಶೌಚಾಲಯ, ಕುಡಿಯುವ ನೀರು ಮುಂತಾದವುಗಳೂ ಮರಿಚಿಕೆಯಾಗಿವೆ.
ತಾಲ್ಲೂಕಿನ ಲಾಯದಗುಂದಿ ಗ್ರಾಮದಲ್ಲಿರುವ ಪಿಕೆಪಿಎಸ್‌ಗೆ 50ಕ್ಕೂ ಹೆಚ್ಚು ವರ್ಷಗಳ ಹಿಂದೆ ಕಟ್ಟಿದ ಗೋಡೌನ್ ರೀತಿಯ ಕಟ್ಟಡವಿದೆ. ಇದರಲ್ಲೇ ಕಚೇರಿಯನ್ನು ನಡೆಸಿಕೊಂಡು ಹೋಗಲಾಗುತ್ತಿದೆ. ಇಲ್ಲೇ ಅನ್ನಭಾಗ್ಯ ಯೋಜನೆ ಅಡಿ ನೀಡಲಾಗುವ ಪಡಿತರ ಹಂಚಲಾಗುತ್ತಿದೆ. ರೈತರಿಗೆ ಗೊಬ್ಬರ ಬೀಜಗಳ ಮಾರಾಟ ಇದೇ ಕಟ್ಟಡದಲ್ಲಿ ನಡೆಯುತ್ತದೆ. ಶೌಚಾಲಯ ಇಲ್ಲ. ಸುವ್ಯವಸ್ಥಿತ ಕಚೇರಿ ಆಗಬೇಕಿದೆ. ಗೊಬ್ಬರ, ಬೀಜ ಮತ್ತು ಪಡಿತರ ವಿತರಿಸಲು ಪರ್ಯಾಯ ಆಲೋಚನೆ ಮಾಡಬೇಕಿದೆ.
ಪರ್ವತಿ ಗ್ರಾಮ ಪಟ್ಟಣಕ್ಕೆ ಹೊಂದಿಕೊಂಡಿದೆ. ಗ್ರಾಮದಲ್ಲಿ ಇರಬೇಕಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಡೆಸಲು ಅಲ್ಲಿ ಕಟ್ಟಡವಿಲ್ಲದೇ ಪಟ್ಟಣದ ಹೆಸ್ಕಾಂ ಕಚೇರಿಯ ಎದುರಿಗೆ ಮಳಿಗೆಯನ್ನು ಬಾಡಿಗೆ ಪಡೆದು ನಡೆಸಲಾಗುತ್ತದೆ. ಆದರೆ ಗ್ರಾಮದಲ್ಲಿ ಪಿಕೆಪಿಎಸ್ ಹೆಸರಿನ ಮೇಲೆ ಒಂದು ನಿವೇಶನ ಇದೆ ಎಂದು ಹೇಳಲಾಗುತ್ತಿದೆ. ಸ್ವಂತ ಕಟ್ಟಡ ಇತರ ಸೌಲಭ್ಯ ಹೊಂದಬೇಕಿದೆ.
ತೂಗೂಣಸಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿದೆ. ಸ್ವಂತ ಕಟ್ಟಡ ಹಾಗೂ ಇತರ ಸೌಲಭ್ಯ ಇಲ್ಲ.
ತಾಲ್ಲೂಕು ವ್ಯಾಪ್ತಿಯ ಹಲಕುರ್ಕಿ ಗ್ರಾಮದಲ್ಲಿರುವ ಪಿಕೆಪಿಎಸ್ ಸ್ವಂತ ಕಟ್ಟಡವಿಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದೆ. ಸಿಬ್ಬಂದಿ ಕೊರತೆ ಶೌಚಾಲಯ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ.
ಹಳದೂರು ಪಿಕೆಪಿಎಸ್ ಅಡಿಯಲ್ಲಿ ಹಳದೂರು ಮತ್ತು ಇಂಜಿನವಾರಿ ಗ್ರಾಮಕ್ಕೆ ಒಂದೇ ಪಡಿತರ ವಿತರಣಾ ಕೇಂದ್ರವಿದ್ದು ಒಂದು ವರ್ಷ ಹಳದೂರಲ್ಲಿ ಪಡಿತರ ವಿತರಿಸಿದರೆ ಇಂಜಿನವಾರಿ ಗ್ರಾಮದವರು ಹಳದೂರ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಮರು ವರ್ಷ ಇಂಜಿನವಾರಿ ಗ್ರಾಮದಲ್ಲಿ ಪಡಿತರ ವಿತರಿಸಿದರೆ ಹಳದೂರು ಗ್ರಾಮಸ್ಥರು ಇಂಜಿನವಾರಿ ಗ್ರಾಮಕ್ಕೆ ಹೋಗಿ ಪಡಿತರ ಪಡೆಯುತ್ತಾರೆ. ಇದು ತೊಂದರೆಯಾಗಿದ್ದು ಎರಡು ಪಡಿತರ ಕೇಂದ್ರ ಆಗಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹಂಸನೂರು ಮತ್ತು ಹಂಗರಗಿ, ಕಟಗೇರಿ ಪಿಕೆಪಿಎಸ್‌ಗಳಿಗೆ ಸ್ವಂತ ಕಟ್ಟಡವಿದ್ದರೂ ಮೂಲ ಸೌಲಭ್ಯಗಳ ಕೊರತೆ ಇದೆ.
ತಾಲ್ಲೂಕಿನ ಕೋಟೆಕಲ್ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸರ್ಕಾರದ ಯೋಜನೆ ಅಡಿಯಲ್ಲಿ ಮತ್ತು ನಬಾರ್ಡ್ ವಿಶೇಷ ಅನುದಾನ ಬಳಸಿಕೊಂಡು ಗೋಡೌನ್, ಪ್ರಧಾನಮಂತ್ರಿ ಜನೌಷಧ ಕೇಂದ್ರ, ನೇಕಾರ ಉತ್ಪನ್ನ ಉತ್ತೇಜನ ಕೇಂದ್ರ ಸ್ಥಾಪಿಸುವ ಮೂಲಕ ಭಿನ್ನ ಮಾದರಿ ನಡೆ ಅನುಸರಿಸಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರ ಅನುದಾನ ನೀಡಿದರೆ ರೈತರಿಗೆ ಎಲ್ಲ ಯೋಜನೆ, ಸೌಲಭ್ಯಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ಇಂಜಿನವಾರಿ ಪ್ರಗತಿಪರ ರೈತ ತಿಪ್ಪಣ್ಣ ಗೌಡರ ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-19-547193226