
ಭಟ್ಕಳ | ಪಾದಚಾರಿ ಪಾಲಿಗೆ ಅಪಘಾತ ವಲಯ
ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಂಗಿನಕಟ್ಟೆ ವೃತ್ತ ಬೀದಿ ವ್ಯಾಪಾರಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಪಾದಚಾರಿಗಳು ಈ ಪ್ರದೇಶದಲ್ಲಿ ಅಪಘಾತದ ಭಯದಲ್ಲಿ ಸಂಚರಿಸುವಂತಾಗಿದೆ ಎನ್ನುವುದು ಸಾರ್ವಜನಿಕರ ದೂರು.
ರಂಗಿನಕಟ್ಟೆ ವೃತ್ತದ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ನಿರ್ಮಿಸಿದೆ. ರಸ್ತೆ ಮಧ್ಯೆ ಡಿವೈಡರ್ ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿವೆ.
ಆದರೆ, ಇನ್ನೊಂದು ಕಡೆ ಇದೇ ರಸ್ತೆಯ ಇಕ್ಕೆಲಗಳಲ್ಲಿ ಬೀದಿ ವ್ಯಾಪಾರಿಗಳು ವ್ಯಾಪಾರ ಚಟುವಟಿಕೆ ನಡೆಸುತ್ತಿದ್ದಾರೆ. ಮೀನು ಮಾರಾಟ, ಹಣ್ಣು ಮಾರಾಟ ಸೇರಿದಂತೆ ಚಿಕ್ಕಪುಟ್ಟ ವ್ಯಾಪಾರಿಗಳು ರಸ್ತೆಯ ಅಂಚಿನ ಕುಳಿತು ವ್ಯಾಪಾರ ನಡೆಸುತ್ತಿದ್ದು, ಪಾದಚಾರಿಗಳು ಸಂಚರಿಸದಂತಹ ಸ್ಥಿತಿ ಇದೆ.
‘ರಂಗಿನಕಟ್ಟೆ ವೃತ್ತದಲ್ಲಿ ನ್ಯಾಯಾಲಯ, ವಸತಿ ನಿಲಯ, ಬ್ಯಾಂಕ್‌ಗಳು ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರವಿರುವ ಕಾರಣ ಜನಸಂದಣಿ ಪ್ರದೇಶ ಇದಾಗಿದೆ. ದಿನನಿತ್ಯ ಈ ಪ್ರದೇಶದಲ್ಲಿ ತಮ್ಮ ದಿನನಿತ್ಯದ ಕೆಲಸಕ್ಕಾಗಿ ಪಾದಚಾರಿಗಳು ಸಂಚಾರ ಮಾಡುತ್ತಿರುತ್ತಾರೆ. ಈ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳೇ ತುಂಬಿರುವ ಕಾರಣ ಪಾದಚಾರಿಗಳು ಫುಟ್‌ಪಾತ್ ಬಿಟ್ಟು ಹೆದ್ದಾರಿಯಲ್ಲಿ ನಡೆದು ಸಾಗುತ್ತಿದ್ದಾರೆ. ಇದು ಅಪಘಾತ ಭಯ ಹೆಚ್ಚಿಸಿದೆ’ ಎಂದು ಸ್ಥಳೀಯ ಹನುಮಂತ ನಾಯ್ಕ ದೂರಿದರು.
‘ಶಂಶುದ್ದಿನ್ ವೃತ್ತದಿಂದ ನವಾಯತ್ ಕಾಲೊನಿಯವರಿಗೆ ಚತುಷ್ಪಥ ಹೆದ್ದಾರಿಯನ್ನು 30 ಮೀಟರ್‌ಗೆ ಸೀಮಿತಗೊಳಿಸಲಾಗಿದೆ. ಕಿರಿದಾದ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳ ನಡುವೆ ಪಾದಚಾರಿಗಳು ರಸ್ತೆ ದಾಟುವುದೇ ಸವಾಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ರಂಗಿನಕಟ್ಟಿಯಲ್ಲಿರುವ ಬಸ್ ತಂಗುದಾಣವನ್ನೂ ಮೀನು ವ್ಯಾಪರಿಗಳು ಒತ್ತುವರಿ ಮಾಡಿ ಕುಳಿತುಕೊಂಡಿದ್ದಾರೆ. ಬಸ್ ಹತ್ತ ಬೇಕಾದರೂ ಹೆದ್ದಾರಿಗೆ ಬಂದು ಹತ್ತಬೇಕಾದ ಸ್ಥಿತಿ ಇದೆ. ಒಮ್ಮೊಮ್ಮೆ ಇಲ್ಲಿನ ವಾಹನ ದಟ್ಟಣೆಯನ್ನು ಗಮನಿಸಿ ಬಸ್ ಚಾಲಕರು ತಮ್ಮ ಬಸ್ ನಿಲ್ಲಿಸಲು ಸ್ಥಳವಿಲ್ಲದೆ ಮುಂದೆ ಸಾಗುತ್ತಾರೆ’ ಎಂಬುದು ಅವರ ದೂರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-20-769387937