
ವಿಬಿ ಜಿ ರಾಮ್ ಜಿ: ಫೋಟೋ ವಂಚನೆ ತನಿಖೆಗೆ ಸಚಿವ ಖಂಡ್ರೆ ಆದೇಶ
ಬೀದರ್: ಯಂತ್ರದಿಂದ ಉಳುಮೆ ಮಾಡಿರುವ ಜಮೀನಿನಲ್ಲಿ ವಿಬಿ ಜಿ ರಾಮ್ ಜಿ ಫಲಾನುಭವಿಗಳನ್ನು ಕೂರಿಸಿ ಫೋಟೊ ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿ ಕುರಿತು ತನಿಖೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಆದೇಶಿಸಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಚಿವರು, ‘ಚಾಮರಾಜನಗರ ತಾಲ್ಲೂಕು ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು, ಉಳುಮೆ ಮಾಡಿರುವ ಜಮೀನಿನಲ್ಲಿ ಗ್ರಾಮದ ಮಹಿಳೆಯರು ಮತ್ತು ಪುರುಷರನ್ನು ಕೂರಿಸಿ ಫೋಟೊ ತೆಗೆದು, ಮಾನವ ದಿನ (ಪಿಡಿ) ಸೃಜನೆ ಆಗಿರುವಂತೆ ದಾಖಲಿಸಿ, ₹382 ಕೂಲಿ ಬದಲಾಗಿ ₹100 ಕೊಡಲಾಗುತ್ತಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುವುದಲ್ಲದೆ, ಯೋಜನೆಯ ಮೂಲ ಉದ್ದೇಶ ನಾಶವಾಗುತ್ತದೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ, ಯೋಜನೆಯ ಉದ್ದೇಶವನ್ನೇ ಹಾಳು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಶಿಸ್ತುಕ್ರಮದ ಶಿಫಾರಸಿನೊಂದಿಗೆ, ವಾಸ್ತವ ವರದಿಯನ್ನು 48 ಗಂಟೆಗಳ ಒಳಗಾಗಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
‘ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹಲವು ಭಾಗಗಳಲ್ಲಿ ಗ್ರಾಮೀಣ ಜನರು ಗುಳೆ ಹೋಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಾಗುತ್ತಿದ್ದು, ವಲಸೆ ತಡೆಯಲು ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಶಾಶ್ವತ ಆಸ್ತಿಗಳನ್ನು ಸೃಜಿಸಲು ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸ್ಥಳದಲ್ಲಿಯೇ ವಿಬಿ ಜಿ ರಾಮ್ ಜಿ ಯೋಜನೆ ಅಡಿ ಗರಿಷ್ಠ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ, ಕೆಲವು ಅಧಿಕಾರಿಗಳು ಯೋಜನೆಯ ಉದ್ದೇಶವನ್ನೇ ಹಾಳು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.