
ಲಕ್ಷ್ಮೇಶ್ವರ | ಕೃಷಿ ಕಾರ್ಮಿಕರ ಕೂಲಿ ಹೆಚ್ಚಳ: ರೈತರಿಗೆ ಹೊರೆ
ಲಕ್ಷ್ಮೇಶ್ವರ: ಈ ಬಾರಿ ತಾಲ್ಲೂಕಿನಾದ್ಯಂತ ಮುಂಗಾರು ಮಳೆ ಕೊಟ್ಟ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಸಕಾಲಕ್ಕೆ ಮಳೆ ಸುರಿಯದ ಕಾರಣ ಕೃಷಿಗೆ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆರಂಭದಲ್ಲಿ ಸುರಿದ ಅಲ್ಪ ಮಳೆ ನಂಬಿ, ಬಿತ್ತನೆ ಮಾಡಿದ್ದ ರೈತರು ಇದೀಗ ಬೆಳೆ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.
ಹೆಸರು ಬೆಳೆ ಹೂ ಬಿಟ್ಟು ಕಾಯಿ ಕಟ್ಟುವ ಸಮಯಕ್ಕೆ ಮಳೆ ಆಗಲಿಲ್ಲ. ಗೋವಿನಜೋಳ ಹೊಡೆ ಹಾಯುವ ವೇಳೆಗೆ ಮಳೆರಾಯ ಸಂಪೂರ್ಣ ಮಾಯವಾದ. ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಸಿಗದೆ ರೈತರ ಪರಿಸ್ಥಿತಿ ಶೋಚನೀಯವಾಗಿದೆ.
ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿಯಂತಹ ಪ್ರಮುಖ ತೋಟಗಾರಿಕೆ ಬೆಳೆಗಳು, ತೇವಾಂಶದ ಕೊರತೆಯಿಂದ ಭೂಮಿ ಬಿಟ್ಟು ಮೇಲೆದ್ದಿಲ್ಲ. ಎರೆಹೊಲ ಇರುವ ತಾಲ್ಲೂಕಿನ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ರಾಮಗೇರಿ, ಲಕ್ಷ್ಮೇಶ್ವರ, ಗೊಜನೂರು, ಅಡರಕಟ್ಟಿ, ಬಟ್ಟೂರು, ಹುಲ್ಲೂರು ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಈ ಬಾರಿ ರೈತರಿಗೆ ನಿಲುಕದ ನಕ್ಷತ್ರಗಳಾಗಿವೆ.
ತೋಟಗಾರಿಕಾ ಇಲಾಖೆ ಮಾಹಿತಿ ಪ್ರಕಾರ ಮಾಡಳ್ಳಿ ಮತ್ತು ಯಳವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಿತ್ತನೆ ಆಗಿರುವ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗುವ ಪರಿಸ್ಥಿತಿ ಎದುರಾಗಿದೆ.
ಮಳೆ ಪ್ರಮಾಣ: ಪ್ರಸ್ತುತ ವರ್ಷ ಜೂನ್ 1ರಿಂದ ಜುಲೈ 2ರವರೆಗೆ 94 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ, 72 ಮಿ.ಮೀ ಮಾತ್ರ ಆಗಿದೆ. ಶೇ 24ರಷ್ಟು ಮಳೆ ಕೊರತೆ ಉಂಟಾಗಿದೆ.
ಬೆಳೆ ಉಳಿಸಿಕೊಳ್ಳಲು ಹರಸಾಹಸ: ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ರೈತರು ವಿವಿಧ ಮಾರ್ಗ ಅನುಸರಿಸುತ್ತಿದ್ದಾರೆ. ನೀರಿನ ಸೌಲಭ್ಯ ಇಲ್ಲದ ರೈತರು ಬೆಳೆಯನ್ನೇ ಹರಗಿದ್ದಾರೆ. ತಾಲ್ಲೂಕಿನ ಬಾಲೆಹೊಸೂರು ಗ್ರಾಮದ ಗಂಗಾಧರ ಗಾಣಿಗೇರ ಅವರು ಒಣಗುತ್ತಿದ್ದ ಗೋವಿನಜೋಳದ ಬೆಳೆಯನ್ನು ಹರಗಿ ನಾಶಪಡಿಸಿದ್ದಾರೆ. ಕೊಳವೆ ಬಾವಿಗಳ ಸೌಲಭ್ಯ ಇರುವ ರೈತರು ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಈ ಬಾರಿ ಮಳೆ ಬಾರದ ಕಾರಣ ಅಂತರ್ಜಲಮಟ್ಟವೂ ಕುಸಿದಿದೆ. ಹೀಗಾಗಿ, ಕೊಳವೆ ಬಾವಿಗಳಲ್ಲೂ ನೀರು ಬಾರದ ಆತಂಕವಿದೆ.
ಚೆಕ್ ಡ್ಯಾಂ ಆಧಾರ: ಗೊಜನೂರು ಗ್ರಾಮದ ಬಾಪೂಗೌಡ ಪಾಟೀಲ ಸೇರಿದಂತೆ ಹತ್ತಾರು ರೈತರು ತಮ್ಮ ಹೊಲದ ಪಕ್ಕದಲ್ಲೇ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿನ ನೀರನ್ನು ಪೈಪ್‍ನಿಂದ ಹಾಯಿಸಿಕೊಳ್ಳುತ್ತಿದ್ದಾರೆ.
ವರದಾನವಾದ ಕೃಷಿಹೊಂಡಗಳು: ಮೇ ಕೊನೆ ವಾರದಲ್ಲಿ ಸುರಿದ ಒಂದೆರಡು ಮಳೆಗೆ ಬಹುತೇಕ ಕೃಷಿಹೊಂಡಗಳು ಭರ್ತಿ ಆಗಿವೆ. ತಾಲ್ಲೂಕಿನ ಯಳವತ್ತಿ ಗ್ರಾಮದ ಉಮೇಶ ಜೋಶಿ ಅವರು ಆರು ಎಕರೆಯಲ್ಲಿ ಬಿತ್ತನೆ ಮಾಡಿರುವ ಶೇಂಗಾ ಮತ್ತು ಮೆಣಸಿನಕಾಯಿ ಬೆಳೆಗೆ ಕೃಷಿಹೊಂಡದ ನೀರನ್ನೇ ಬಳಕೆ ಮಾಡಿಕೊಂಡಿದ್ದಾರೆ.
ಉತ್ತಮ ದರ: ತಾಲ್ಲೂಕಿನಲ್ಲಿ ಹೆಸರು ಬೆಳೆ ಒಕ್ಕಣಿ ನಡೆದಿದ್ದು, ಸಿಕ್ಕಷ್ಟು ಇಳುವರಿಗೆ ಉತ್ತಮ ಬೆಲೆ ಸಿಗುತ್ತಿದೆ. ಸದ್ಯ ಕ್ವಿಂಟಲ್ ಹೆಸರುಕಾಳು ₹7,000ದಿಂದ ₹10,000ದವರೆಗೆ ಮಾರಾಟ ಆಗುತ್ತಿದೆ. ಹೆಚ್ಚು ಇಳುವರಿ ಬಾರದ ಕಾರಣ ಒಳ್ಳೆಯ ದರ ಸಿಕ್ಕರೂ ಅದರಿಂದ ಲಾಭ ಆಗುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.
ಹೆಚ್ಚಿದ ಕೂಲಿ: ಕೃಷಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರು ದರ ಹೆಚ್ಚಿಸಿದ್ದಾರೆ. ಮಹಿಳಾ ಕಾರ್ಮಿಕರಿಗೆ ದಿನಕ್ಕೆ ₹300 ಕೂಲಿ ಇದ್ದರೆ, ಪುರುಷ ಕಾರ್ಮಿಕರಿಗೆ ಇದಕ್ಕಿಂತ ಹೆಚ್ಚು ಕೂಲಿ ಕೊಡಬೇಕಾಗಿದೆ. ಇದರಿಂದಾಗಿ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-23-540418102