
ಕೊಪ್ಪಳ | ಇವು ರಸ್ತೆಗಳೊ, ಮೃತ್ಯು ಕೂಪಗಳೋ?
ಕೊಪ್ಪಳ: ‘ಚುಕ್ಕನಕಲ್ ರಸ್ತೆ ಹಾಳಾಗಿದ್ದರಿಂದ ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ. ಇನ್ನು ಬೈಕ್ ಮೇಲೆ ಸಂಚಾರವಂತೂ ದುಸ್ತರವೇ. ಇಲ್ಲಿನ ರಸ್ತೆಯ ಅವ್ಯವಸ್ಥೆ ನೋಡಿದರೆ ಓಡಾಡಲು ಹಿಂದೇಟು ಹಾಕಬೇಕಾದ ಪರಿಸ್ಥಿತಿಯಿದೆ‘
ಇದು ಅಲ್ಲಿನ ಶ್ರೀಶೈಲ ನಗರದ ನಿವಾಸಿ ಅಬ್ದುಲ್ ಸಮದ್ ಅವರ ಬೇಸರದ ಮಾತುಗಳು. ಸಿಂಧೋಗಿ ಕಡೆ ತೆರಳಲು ಬಹುತೇಕರು ಇದೇ ರಸ್ತೆಯನ್ನು ಬಳಸುತ್ತಾರೆ. ಚುಕ್ಕನಕಲ್, ನಿರ್ಮಿತಿ ಕೇಂದ್ರ, ಗೋಶಾಲೆ ಎದುರಿನ ರಸ್ತೆಯಲ್ಲಿ ಎಲ್ಲಿಯೇ ಓಡಾಡಿದರೂ ಜನ ಅತ್ಯಂತ ನೋವಿನಿಂದ ಅಲ್ಲಿನ ರಸ್ತೆಯ ಅವ್ಯವಸ್ಥೆಯನ್ನು ಹೊರಹಾಕುತ್ತಾರೆ. ರಸ್ತೆಯಲ್ಲಿ ಮೊಣಕಾಲ ಆಳಕ್ಕೆ ಗುಂಡಿಗಳು ಬಿದ್ದಿವೆ.
ಸ್ವಲ್ಪ ಜೋರು ಮಳೆಬಂದರೆ ಸಾಕು ರಸ್ತೆಯೆಲ್ಲ ಹಳ್ಳದಂತಾಗುತ್ತದೆ. ಗುಂಡಿ ತುಂಬಿರುವ ರಸ್ತೆಯಲ್ಲಿ ನೀರು ನಿಂತುಕೊಳ್ಳುವುದರಿಂದ ವಾಹನಗಳ ಚಾಲಕರಿಗೆ ಅಲ್ಲಿನ ಸವಾರಿ ಸಾವಿನೊಂದಿಗೆ ಸೆಣಸಾಟದಂತೆ ಆಗುತ್ತದೆ. ಇದೇ ಮಾರ್ಗವನ್ನು ಬಳಸಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಸುತ್ತಲೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಇವೆ. ಬಹದ್ದೂರಬಂಡಿ ಮಾರ್ಗದಲ್ಲಿರುವ ಪಿ.ಎಂ. ಕೇಂದ್ರೀಯ ವಿದ್ಯಾಲಯಕ್ಕೂ ಕೊಪ್ಪಳದಿಂದ ಸಾವಿರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಅಲ್ಲಿಯೇ ಧಾರ್ಮಿಕ ತಾಣಗಳಿದ್ದರೂ ಜನರ ಓಡಾಟಕ್ಕೆ ಉತ್ತಮ ರಸ್ತೆಗಳಿಲ್ಲ.
ಇದರಿಂದ ಆಕ್ರೋಶಗೊಂಡಿದ್ದ ಶ್ರೀಶೈಲ ನಗರ ಹಾಗೂ ಅಕ್ಕಪಕ್ಕದ ಬಡಾವಣೆ ಯುವಕರು ಇತ್ತೀಚೆಗೆ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಿ ರಸ್ತೆ ದುರಸ್ತಿ ಮಾಡಿಕೊಡುವಂತೆ ಆಗ್ರಹಿಸಿದರು. ನಾಲ್ಕೈದು ದಿನಗಳ ಹಿಂದೆ ಜಿಲ್ಲಾಕೇಂದ್ರದಲ್ಲಿ ಸುರಿದ ಜೋರು ಮಳೆಯಿಂದಾಗಿ ಗುಂಡಿ ಬಿದ್ದ ಈ ರಸ್ತೆಗಳು ಹಳ್ಳದಂತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.
ಕೂಲಿಕಾರರು, ದೈನಂದಿನ ಕೆಲಸ ನಂಬಿಕೊಂಡವರು, ಆಟೊ ಚಾಲಕರು ಹೀಗೆ ಬಡವರು ಮತ್ತು ಮಧ್ಯಮವರ್ಗದವರೇ ಹೆಚ್ಚಾಗಿರುವ ಶ್ರೀಶೈಲ ನಗರದ ಜನ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಾರೆ. ಹಲವು ಬಾರಿ ನಗರಸಭೆ ಸದಸ್ಯರಾಗಿ, ಹಿಂದಿನ ಅವಧಿಯಲ್ಲಿ ಅಧ್ಯಕ್ಷರೂ ಆಗಿದ್ದ ಅಮ್ಜದ್ ಪಟೇಲ್ ಕೂಡ ರಸ್ತೆ ದುರಸ್ತಿ ಮಾಡಿಸುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಅವರು 15 ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ರಸ್ತೆ ಬದಿ ಅಂಗಡಿಗಳನ್ನು ಹೊಂದಿರುವ ಯುವಕರು ಎಚ್ಚರಿಕೆ ನೀಡಿದ್ದು, ಶಾಸಕರು ಈಗಲಾದರೂ ರಸ್ತೆ ದುರಸ್ತಿಗೆ ಮುತುವರ್ಜಿ ವಹಿಸುವರೇ ಎನ್ನುವುದನ್ನು ಕಾದು ನೋಡಬೇಕಿದೆ.