
ನಿಲೋಗಿಪುರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ
ಅಳವಂಡಿ: ಸಮೀಪದ ಬೋಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಿಲೋಗಿಪುರ ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿದ್ದು, ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು ಇದರಿಂದ ಗ್ರಾಮಸ್ಥರಲ್ಲಿ ನಾನಾ ರೋಗಗಳ ಆತಂಕ ಮೂಡಿದೆ.
ನಿಲೋಗಿಪುರದಲ್ಲಿ ಸುಮಾರು 2000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯು ಸಂಪೂರ್ಣ ಮಾಯವಾಗಿದೆ. ಸ್ವಚ್ಛತೆ ಕಾಪಾಡಬೇಕಾದ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಯು ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿಸಿದೆ. ಚರಂಡಿಗಳಲ್ಲಿ ಕಸ, ಕಡ್ಡಿ, ತ್ಯಾಜ್ಯ ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮತ್ತು ಚರಂಡಿಗಳು ಹೂಳು ತುಂಬಿದ ಕಾರಣ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿವೆ.
‘ರಸ್ತೆ ಮೇಲೆ ಚರಂಡಿ ಮತ್ತು ಕೊಳಚೆ ನೀರು ಹರಿಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುವ ಆತಂಕ ಎದುರಾಗಿದೆ. ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಆತಂಕದ ಸ್ದಿತಿಯಲ್ಲಿ ಜೀವನ ನಡೆಸುವಂತಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ನಿಲೋಗಿಪುರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನವೇ ಗ್ರಾಮ ಪಂಚಾಯಿತಿ ಅಧಿಕಾರಿ ಗಳು ಚರಂಡಿ ಸ್ವಚ್ಛಗೊಳಿಸುವುದು, ಕೊಳಚೆನೀರು ಚರಂಡಿ ಮೂಲಕ ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಉತ್ತಮ ಜೀವನ ನಡೆಸಲು ಆರೋಗ್ಯಕರವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಬಸವರಾಜ ಮುದ್ದಾಬಳ್ಳಿ, ಕಲ್ಲಪ್ಪ ಹೂಗಾರ, ಅಡಿವೆಪ್ಪ ಬಿಸನಳ್ಳಿ, ಕರ್ಣಕುಮಾರ, ಸುದೀಪ್ ನಾಯಕ ಒತ್ತಾಯಿಸಿದ್ದಾರೆ.
ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಹೂಳು ತುಂಬಿದ ಚರಂಡಿಗಳನ್ನು ಸ್ವಚ್ಛ ಮಾಡಲಾಗುವುದು. ಹಂತ ಹಂತವಾಗಿ ಚರಂಡಿ, ರಸ್ತೆ ಅಭಿವೃದ್ಧಿಪಡಿಸಲಾಗುವುದು ಶೇಖರಪ್ಪ ಪಿಡಿಒ, ಬೋಚನಹಳ್ಳಿ ಗ್ರಾ.ಪಂ