
ಕೋನಸಾಗರ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಗ್ರಾಮಸ್ಥರಿಂದ ಮರುಜೀವ
ಮೊಳಕಾಲ್ಮುರು (ಚಿತ್ರದುರ್ಗ): ಆಂಧ್ರದ ಗಡಿಗೆ ಅಂಟಿಕೊಂಡಿರುವ ತಾಲ್ಲೂಕಿನ ಕೋನಸಾಗರ ಗ್ರಾಮದ 500ಕ್ಕೂ ಹೆಚ್ಚುಮಕ್ಕಳ ಶೈಕ್ಷಣಿಕ ಆಸರೆಯಾಗಿರುವ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಸ್ಥಳೀಯರೇ ಮರುಜೀವ ನೀಡಿದ್ದಾರೆ.
ಅವಸಾನದ ಅಂಚಿಗೆ ತಲುಪಿ ಸೇವೆಯಿಂದ ದೂರಾವಾಗಲಿದ್ದ ಶತಮಾನ ಕಂಡ ಈ ಶಾಲೆಯ ಕಟ್ಟಡಕ್ಕೆ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾಯಕಲ್ಪ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವ ಹೊತ್ತಿನಲ್ಲಿ ಗ್ರಾಮಸ್ಥರ ಈ ಕಾರ್ಯ ಮಾದರಿಯಾಗಿ ಹೊರಹೊಮ್ಮಿದೆ.
1895ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವೀಕರಣಗೊಳ್ಳುವ ಮೂಲಕ ಮತ್ತೊಮ್ಮೆ ಜೀವಕಳೆ ಪಡೆದಿದ್ದು, ಮರು ಉದ್ಘಾಟನೆಗೆ ಸಿದ್ಧವಾಗಿದೆ.
‘ತಾಲ್ಲೂಕಿನಲ್ಲಿ ಆರಂಭವಾದ ಎರಡನೇ ಸರ್ಕಾರಿ ಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಶಾಲೆ, ಆಂಧ್ರದ ಗಡಿಗೆ ಅಂಟಿಕೊಂಡಿದ್ದು, ಕೇವಲ 4 ಕಿ.ಮೀ ದೂರದಲ್ಲಿದೆ. ಪರಿಶಿಷ್ಟ ಜಾತಿ ಪಂಗಡದ ಕೂಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿರುವ ಈ ಊರಿನಲ್ಲಿ ಶಾಲೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿಲ್ಲ. ಈಗ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 518 ವಿದ್ಯಾರ್ಥಿಗಳು ಓದುತ್ತಿದ್ದು, ಅತಿ ದೊಡ್ಡ ಶಾಲೆಗಳಲ್ಲಿ ಒಂದೆನ್ನಿಸಿದೆ.
ಇಲ್ಲಿ ಒಟ್ಟು 13 ಕೊಠಡಿಗಳಿದ್ದು, ಇದರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿ ಶಿಥಿಲವಾಗಿದ್ದ ಮೂರು ಕೊಠಡಿಗಳಿವೆ. ಇವುಗಳನ್ನು ಮೊದಲ ಹಂತದಲ್ಲಿ ನವೀಕರಿಸಲಾಗಿದ್ದು, ಒಟ್ಟು ₹ 6.95 ಲಕ್ಷ ವೆಚ್ಚವಾಗಿದೆ. ಈ ಶಾಲೆಯಲ್ಲಿ ಅಭ್ಯಾಸ ಮಾಡಿರುವ 20 ಹಳೆ ವಿದ್ಯಾರ್ಥಿಗಳು ತಲಾ ₹ 25,000ದಂತೆ ಸೇರಿಸಿದ್ದರೆ, ಸ್ಥಳೀಯ ಸಾಂಭೂಜಿಯಾ ನಿತ್ಯ ಪರಿವರ್ತನಾ ಸಂಸ್ಥೆ ಮತ್ತು ಗ್ರಾಮಸ್ಥರೂ ದೇಣಿಗೆ ನೀಡಿದ್ದಾರೆ. ಇದೇ ಶಾಲೆಯ ನಿವೃತ್ತ ಶಿಕ್ಷಕ ಕಾ.ತಿ. ಮಾಸ್ತರ್ ಮಾರ್ಗದರ್ಶನದಲ್ಲಿ ಶಾಲೆಯ ನವೀಕರಣ ಕಾರ್ಯ ನಡೆದಿದೆ.
‘ಮೂಲ ಕಟ್ಟಡ ಸುಂದರವಾಗಿದ್ದು, ಕಲಿಕೆಯ ದಿನಗಳ ನೆನಪುಗಳನ್ನು ಜೋಪಾನ ಮಾಡುವ ಉದ್ದೇಶದಿಂದ ಹಳೆ ಮಾದರಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮೇಲ್ಛಾವಣಿ, ನೆಲ, ಹೊರಭಾಗವನ್ನು ನವೀಕರಿಸಲಾಗಿದೆ. ಆಗಸ್ಟ್ 15ರಂದು ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ ಉಳಿದ ಕೊಠಡಿಗಳ ಜೀರ್ಣೋದ್ಧಾರದ ವಿಷಯದ ಬಗ್ಗೆ ಪ್ರಸ್ತಾಪಿಸಲಾಗುವುದು’ ಎಂದು ಮುಖ್ಯಶಿಕ್ಷಕ ಜಿ.ಜಿ. ನಾಗರಾಜ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-44-1924287159