
ಸಚಿವ ಸ್ಥಾನದಿಂದ ನಾಗೇಂದ್ರ ಕೈಬಿಡಿ: ಎಲ್. ನಾಗೇಂದ್ರ
ಮೈಸೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಬಿ.ನಾಗೇಂದ್ರ ಸಚಿವ ಸಂಪುಟದಿಂದ ಕೈ ಬಿಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ಎಚ್ಚರಿಸಿದರು.
‘ಇ.ಡಿ. ತನಿಖೆ ಪೂರ್ಣಗೊಳ್ಳದೆ, ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಗದಿದ್ದರೂ ನಾಗೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರಿಗೆ ಏನಿತ್ತು? ಹಿರಿಯ ಶಾಸಕರ ವಿರೋಧದ ನಡುವೆಯೂ ಈ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಒತ್ತಡವಿದೆಯೇ? ಪರಿಶಿಷ್ಟ ಪಂಗಡದ ನಿರ್ದಿಷ್ಟ ಮತಗಳು ಕೈ ತಪ್ಪಲಿದೆ ಎಂಬ ಭಯವೇ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿ ಗುರುವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದರು.
ಹರ್ಷವರ್ಧನ್, ಈ.ಸಿ. ನಿಂಗರಾಜೇಗೌಡ, ಮೋಹನ್, ಮಹೇಶ್ ರಾಜೇ ಅರಸ್, ವಸಂತ್ ಕುಮಾರ್, ಕಿರಣ್ ಗೌಡ ಇದ್ದರು.
‘ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಬೀದಿಯಲ್ಲಿ ಹೋರಾಟ ಮಾಡಲು ಆಗಲ್ಲ. ಹೀಗಾಗಿ ಸದನದ ಒಳಗೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಸಂಪುಟದಿಂದ ಕೈಬಿಡುವವರೆಗೂ ಸದನ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
‘ನಾಗೇಂದ್ರ ಮೇಲೆ ಸಿಬಿಐ, ಎಸ್‌ಐಟಿ ಹಾಗೂ ಸಿಐಡಿ ಸೇರಿದಂತೆ ಒಟ್ಟು 31 ಪ್ರಕರಣಗಳಿವೆ. ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿದವರನ್ನು ಮತ್ತೆ ಸಚಿವರನ್ನಾಗಿ ಮಾಡಲು ಹೊರಟಿರುವುದು ಕಾಂಗ್ರೆಸ್ ಭ್ರಷ್ಟ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಟೀಕಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-39-1252563227