
ವಿವರ ದಾಖಲಿಸಲು 'ಆ್ಯಪ್' ತೊಡಕು; ಗೃಹ ಜ್ಯೋತಿ ಪ್ರಯೋಜನ ಕೈತಪ್ಪುವ ಆತಂಕ
ಕಲಬುರಗಿ: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದೆ. ಆದರೆ, ‘ಆ್ಯಪ್’ ತೊಡಕಿನಿಂದ ರಾಜ್ಯದ ಅರ್ಹ ಮತದಾರರಿಗೂ ‘ಗೃಹ ಜ್ಯೋತಿ’ ಪ್ರಯೋಜನ ಕೈತಪ್ಪುವ ಆತಂಕ ಎದುರಾಗಿದೆ.
ಸದ್ಯ ಕಲ್ಯಾಣ ಕರ್ನಾಟಕದಲ್ಲಿ ನೆಲೆಸಿರುವ ರಾಜ್ಯದ ಇತರ ಭಾಗದ ‘ಬಾಡಿಗೆದಾರ’ರ ಮೂಲ ಜಿಲ್ಲೆಗಳ ವಿವರ, ಮತ ಕ್ಷೇತ್ರ ನಮೂದಿಸಲು ಆ್ಯಪ್‌ನಲ್ಲಿ ಅವಕಾಶವೇ ಇಲ್ಲ. ಆ್ಯಪ್‌ನಲ್ಲಿ ಬರೀ ಜೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಮಾಹಿತಿಯಷ್ಟೇ ಇದೆ. ಕೆಲಸಕ್ಕಾಗಿ ವಲಸೆ ಬಂದು ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಪೋಲು ತಡೆಗೆ ಹಾಗೂ ಅನರ್ಹರನ್ನು ಯೋಜನೆಯಿಂದ ಹೊರಗಿಡಲು ರಾಜ್ಯ ಸರ್ಕಾರವು ಜುಲೈ 1ರಿಂದ ಫಲಾನುಭವಿಗಳ ಪರಿಶೀಲನಾ ಕಾರ್ಯ ಆರಂಭಿಸಿದೆ. ಐದೂ ಎಸ್ಕಾಂಗಳ ಸಿಬ್ಬಂದಿ ತಮ್ಮ ವ್ಯಾಪ್ತಿಯ ಗೃಹೋಪಯೋಗಿ ವಿದ್ಯುತ್ ಬಳಕೆದಾರ ಗ್ರಾಹಕರ ಮಾಹಿತಿ ಪಡೆದು 11 ಪ್ರಶ್ನಾವಳಿಗಳ ‘ಗೃಹಜ್ಯೋತಿ ಫಲಾನು ಭವಿಗಳ ಪರಿಶೀ ಲನಾ ಅರ್ಜಿ’ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.
ಅರ್ಜಿಯ 8ನೇ ಪ್ರಶ್ನಾವಳಿಯಲ್ಲಿ ‘ಫಲಾನುಭವಿಯು ಕರ್ನಾಟಕ ರಾಜ್ಯದ ನೋಂದಾಯಿತ ಮತದಾ ರನೇ?’ ಎಂದು ಕೇಳಲಾಗಿದೆ. ರಾಜ್ಯದ ನೋಂದಾಯಿತ ಮತದಾರರಾಗಿದ್ದರೆ ‘ಎಪಿಕ್ ಸಂಖ್ಯೆ’ ನಮೂದಿಸಬೇಕು.
ಈ ಮಾಹಿತಿ ಮೀಟರ್ ರೀಡರ್‌ಗಳು ಸರ್ಕಾರ ಒದಗಿಸಿರುವ ಮೊಬೈಲ್ ಆ್ಯಪ್‌ನಲ್ಲೂ ದಾಖಲಿಸಬೇಕು. ಆದರೆ, ಜೆಸ್ಕಾಂಗೆ ಒದಗಿಸಿರುವ ಆ್ಯಪ್‌ನಲ್ಲಿ ಕಲ್ಯಾಣ ವ್ಯಾಪ್ತಿಯ ಏಳು ಜಿಲ್ಲೆಗಳು, ಅಲ್ಲಿನ ಮತಕ್ಷೇತ್ರಗಳ ಮಾಹಿತಿಯಷ್ಟೇ ಇದೆ. ಇದರಿಂದ ಕಲ್ಯಾಣ ಪ್ರದೇಶದ ಹೊರಗಿನ ಜಿಲ್ಲೆಯ ಬಾಡಿಗೆದಾರರಿಗೆ ‘ಗೃಹಜ್ಯೋತಿ’ಗೆ ಮಾಹಿತಿ ನೀಡಿ, ಸೌಲಭ್ಯ ಪಡೆಯಲು ಸಂಕಷ್ಟ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೆಸ್ಕಾಂ ಅಧಿಕಾರಿ, ‘ಈ ಸಮಸ್ಯೆ ಜೆಸ್ಕಾಂಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಎಸ್ಕಾಂಗಳಲ್ಲೂ ಅದರ ವ್ಯಾಪ್ತಿಯ ಜಿಲ್ಲೆಗಳು, ಮತಕ್ಷೇತ್ರಗಳ ವಿವರಗಳನ್ನಷ್ಟೇ ನೀಡಲಾಗಿದೆ’ ಎಂದಿದ್ದಾರೆ. ಸರ್ಕಾರ ‘ಆ್ಯಪ್’ ತೊಡಕು ಜೇಬಿನ ಭಾರ ಹೆಚ್ಚಿಸುವ ಆತಂಕ ನಗರ–ಪಟ್ಟಣಗಳಲ್ಲಿ ನೆಲೆಸಿರುವ ಬಾಡಿಗೆದಾರರನ್ನು ಕಾಡುತ್ತಿದೆ.
‘ನಾನು ವಿಜಯಪುರ ಜಿಲ್ಲೆಯವನು. ಉದ್ಯೋಗಕ್ಕಾಗಿ ಸದ್ಯ ಕಲಬುರಗಿಯಲ್ಲಿ ನೆಲೆಸಿದ್ದೇನೆ. ಗೃಹಜ್ಯೋತಿ ಪರಿಷ್ಕರಣೆ ಅರ್ಜಿಯ ಮಾಹಿತಿ ಪಡೆಯಲು ಬಂದಿದ್ದ ಜೆಸ್ಕಾಂ ಸಿಬ್ಬಂದಿ ನಿಮ್ಮ ಜಿಲ್ಲೆ ನಮೂದಿಸಲು ಅವಕಾಶವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿ ಹೋದರು. ರಾಜ್ಯದ ನೋಂದಾಯಿತ ಮತದಾರನಾಗಿದ್ದರೂ, ಇದೀಗ ನನಗೆ ಗೃಹಜ್ಯೋತಿಯ ಸೌಲಭ್ಯವೇ ಕೈತಪ್ಪುವ ಆತಂಕ ಕಾಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.
ಆ್ಯಪ್ ತೊಡಕಿನಿಂದ ಬಾಡಿಗೆದಾರರ ಹಿತಕಾಯಲು ವಿವಿಧ ಎಸ್ಕಾಂಗಳ ಸಿಬ್ಬಂದಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ‘ಬಾಡಿಗೆದಾರರ ಬದಲು ಮನೆಯ ಮಾಲೀಕರ, ಇಲ್ಲವೇ ಎಸ್ಕಾಂ ವ್ಯಾಪ್ತಿಗಳ ಮತದಾರರ ವಿವರ ಕೊಟ್ಟು ಅರ್ಜಿ ಭರ್ತಿ ಮುಗಿಸುತ್ತಿದ್ದೇವೆ. ಅದಾಗ್ಯೂ ನಗರ ಪ್ರದೇಶಗಳಲ್ಲಿ ಹತ್ತಾರು ಅರ್ಜಿಗಳು ಇಂಥ ಸಮಸ್ಯೆಯಿಂದ ಭರ್ತಿ ಮಾಡದೇ ಉಳಿಸಿದ್ದೇವೆ’ ಎನ್ನುತ್ತಾರೆ ಜೆಸ್ಕಾಂ, ಹೆಸ್ಕಾಂ ಸಿಬ್ಬಂದಿ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-34-2069555024