
ಹಂಪಾಪುರ: ಮರಗಳ ಉಳಿಸಿಯೇ ರಸ್ತೆಗೆ ಡಾಂಬರು
ಹಂಪಾಪುರ (ಮೈಸೂರು): ಎಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕೆರೆಯೂರು ಸಮೀಪದ ರಸ್ತೆಗೆ ಡಾಂಬರು ಹಾಕುವ ಮತ್ತು ವೃತ್ತ ನಿರ್ಮಾಣ ಕಾಮಗಾರಿ ವೇಳೆ ಮಧ್ಯಭಾಗದಲ್ಲಿದ್ದ ನೂರಾರು ವರ್ಷದ ಹಳೆಯ ಮರಗಳನ್ನು ಕಡಿಯದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಜೊತೆಗೆ ಮರಗಳನ್ನೇ ವೃತ್ತದ ಪ್ರಮುಖ ಆಕರ್ಷಣೆಯನ್ನಾಗಿ ರೂಪಿಸಲಾಗಿದೆ.
ಚಿಕ್ಕೆರೆಯೂರು ಗ್ರಾಮದಿಂದ ಗದ್ದಿಗೆ, ಮಾದಾಪುರ ಹಾಗೂ ಬಾಚೇಗೌಡನ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ವೃತ್ತವನ್ನು ನಿರ್ಮಿಸುವಾಗ ಮಧ್ಯದಲ್ಲಿದ್ದಎರಡು ಬೃಹತ್ ಬೇವು, ಒಂದು ಹುಣಸೆಮರಗಳನ್ನು ಹಾಗೇ ಉಳಿಸಿಕೊಳ್ಳಲಾ ಗಿದೆ. ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ರಸ್ತೆಗೆ ಡಾಂಬರು ಹಾಕುವಾಗ ಮರದ ಕಾಂಡ ಅಥವಾ ಬೇರುಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮಳೆ ನೀರು ಭೂಮಿಯೊಳಗೆ ಸರಾಗವಾಗಿ ಇಳಿಯುವಂತೆ ಮರಗಳ ಬುಡದ ಸುತ್ತಲೂ ಜಾಗ ಬಿಡಲಾಗಿದೆ.
ಪಕ್ಷಿಗಳಿಗೆ ಆಶ್ರಯ:ಈ ರಸ್ತೆ ನಡುವಿರುವ ಮರಗಳು ಹಲವು ಜಾತಿಯ ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಕೊಂಬೆಗಳಲ್ಲಿ ಗೂಡು ಕಟ್ಟಿರುವ ಪಕ್ಷಿಗಳ ಚಿಲಿಪಿಲಿ ಧ್ವನಿ ಈ ಪ್ರದೇಶಕ್ಕೆ ಜೀವಂತಿಕೆ ನೀಡುತ್ತಿದೆ.
ಬಸ್‌ಗಾಗಿ ಕಾಯುವವರು ಈ ಮರಗಳ ನೆರಳಲ್ಲಿ ವಿಶ್ರಮಿಸುತ್ತಾರೆ. ಮರಗಳು ಪ್ರಯಾಣಿಕರಿಗೆ ನೈಸರ್ಗಿಕ ತಂಗುದಾಣಗಳಾಗಿವೆ. ‘ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಪಪಡಿಸಿರುವುದರಿಂದ, ಪರಿಸರ ಸಂರಕ್ಷಣೆ ಜೊತೆಗೆ ನೂರಾರು ಪಕ್ಷಿಗಳ ಆವಾಸಸ್ಥಾನವನ್ನೂ ಉಳಿಸಿದಂತಾಗಿದೆ’ ಎಂದು ಪರಿಸರ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಮರಗಳು ನಾಶವಾಗುತ್ತಿವೆ. ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಬಹುದು. ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯ ಎಂಬುದನ್ನು ಚಿಕ್ಕೆರೆಯೂರಿನ ವೃತ್ತ ಮತ್ತು ರಸ್ತೆ ಕಾಮಗಾರಿ ತೋರಿಸಿಕೊಟ್ಟಿದೆ ಎನ್ನುತ್ತಾರೆ ಸ್ಥಳಿಯರು.
‘ಇಚ್ಛಾಶಕ್ತಿ ಇದ್ದರೆ ಸಾಧ್ಯ’
‘ರಸ್ತೆ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪರಸ್ಪರ ವಿರುದ್ಧವಾದ ವಿಚಾರಗಳಲ್ಲ. ಸೂಕ್ತ ಯೋಜನೆ ಹಾಗೂ ಇಚ್ಛಾಶಕ್ತಿ ಇದ್ದರೆ ಎರಡನ್ನೂ ಸಮತೋಲನ ದಲ್ಲಿ ಸಾಧಿಸಬಹುದು ಎನ್ನುತ್ತಾರೆ’ ಪರಿಸರ ಪ್ರೇಮಿಗಳು.
ವೃತ್ತದ ಮಧ್ಯದಲ್ಲಿದ್ದ ನೂರಾರು ವರ್ಷದ ಬೇವಿನ ಮರವನ್ನು ಕಡಿಯದೆ ಅದನ್ನೇ ವೃತ್ತದ ಹೆಗ್ಗುರುತಾಗಿ ರೂಪಿಸಿರುವುದು ಶ್ಲಾಘನೀಯ. ಇಲ್ಲಿನ ಮಾದರಿಯನ್ನು ರಾಜ್ಯದ ಇತರ ಕಡೆಗಳಲ್ಲಿ ನಡೆಯುವ ರಸ್ತೆಕಾಮಗಾರಿಗಳಲ್ಲೂ ಅನುಸರಿಸಿದರೆ ಸಾವಿರಾರು ಮರಗಳನ್ನು ಉಳಿಸಬಹುದು ಎನ್ನುತ್ತಾರೆ ಚಿಕ್ಕೆರೆಯೂರು ನಿವಾಸಿ ಶಿವಕುಮಾರ್.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-51-2030710600