
ನವಲಗುಂದ: ಮಂಗಗಳ ಹಾವಳಿ ಹೆಚ್ಚಳ, ಭಯದಲ್ಲಿ ಜನರ ಬದುಕು
ನವಲಗುಂದ: ಪಟ್ಟಣದ ಸಿದ್ದಾಪುರ ಓಣಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಂಗಗಳ ಕಾಟದಿಂದಾಗಿ ಮಕ್ಕಳು ಶಾಲೆಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಮನೆಯ ಅಂಗಳದಲ್ಲಿ, ಮಾಳಿಗೆ ಮೇಲೆ ಹಿಂಡು–ಹಿಂಡಾಗಿ ಬರುವ ಮಂಗಗಳು ಜನರ ಮೇಲೆ ಎರಗುವುದಲ್ಲದೆ, ಕಣ್ಣಿಗೆ ಕಂಡಿದ್ದನ್ನು ಕಿತ್ತುಕೊಂಡು ಹೋಗುತ್ತಿವೆ. ಕೆಲವೊಮ್ಮೆ ಮನೆಯ ಒಳಗೂ ನುಗ್ಗಿ ಗದ್ದಲ ಎಬ್ಬಿಸುತ್ತವೆ.
ಮಂಗಗಳ ಹಾವಳಿಯಿಂದ ರಸ್ತೆಯ ಮೇಲೆ ದ್ವಿಚಕ್ರ ವಾಹನ ಸವಾರರು ಸಂಚರಿಸುವುದಕ್ಕೂಆತಂಕಪಡುತ್ತಿದ್ದಾರೆ. ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಂಗಗಳು ಜಿಗಿಯುವುದರಿಂದ ಹಲವರು ಬೈಕ್‌ನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಮನೆಗಳ ಮಾಳಿಗೆಯಿಂದ ಮಾಳಿಗೆಗೆ ಜಿಗಿಯುತ್ತ ಕಿರುಕುಳ ನೀಡುವ ಮಂಗಗಳು, ಮಾಳಿಗೆ ಮೇಲೆ ಬಟ್ಟೆ ಹಾಗೂ ಜೋಳ, ಗೋದಿ ಬೆಳೆಕಾಳುಗಳನ್ನು ಒಣಗಿಸಲು ಹಾಕಿದ್ದರೆ ಅವುಗಳನ್ನು ಸಹ ಹಾಳು ಮಾಡುತ್ತವೆ.
‘ಮನೆಯಂಗಳದಲ್ಲಿ ಬೆಳೆದ ಬಾಳೆ ಹಣ್ಣು, ಹೂವಿನ ಗಿಡಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ. ಟಿವಿ ಕೇಬಲ್‌ಗಳನ್ನು ಎಳೆದು ತುಂಡು ಮಾಡುತ್ತಿವೆ. ಮಂಗಗಳ ಉಪಟಳದಿಂದ ಸಮಸ್ಯೆ ಹೆಚ್ಚಾಗುತ್ತಿವೆ. ಅರಣ್ಯ ಇಲಾಖೆ ಅವುಗಳನ್ನು ಕಾಡಿಗೆ ಸೇರಿಸುವ ಕೆಲಸ ಮಾಡಬೇಕು’ ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-24-2090829722