
ಎಸ್‌ಐಆರ್: ದಾವಣಗೆರೆ ಜಿಲ್ಲೆಯಲ್ಲಿ 15 ಸಾವಿರ ಮತದಾರರಿಗೆ ನೋಟಿಸ್ ಸಾಧ್ಯತೆ
ದಾವಣಗೆರೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ನಮೂನೆ ಡಿಜಿಟಲೀಕರಣ ಹಾಗೂ ‘ಎಎಸ್‌ಡಿಡಿಒ’ ರೋಲ್‌ಬ್ಯಾಕ್ ಪ್ರಕ್ರಿಯೆ ಸೋಮವಾರ ಕೊನೆಗೊಳ್ಳಲಿದೆ. ಜಿಲ್ಲೆಯಲ್ಲಿ ಅಂದಾಜು 15,000 ಮತದಾರರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.
ಗಣತಿ ನಮೂನೆ ವಿತರಣೆ, ಸಂಗ್ರಹ ಹಾಗೂ ಡಿಜಿಟಲೀಕರಣದ ಮೊದಲ ಹಂತದ ಪ್ರಕ್ರಿಯೆ ಆ.17ಕ್ಕೆ ಮುಕ್ತಾಯವಾಗಲಿದೆ. ಕರಡು ಮತದಾರರ ಪಟ್ಟಿ ಆ.24ರಂದು ಪ್ರಕಟಗೊಳ್ಳಲಿದ್ದು, ಎಸ್‌ಐಆರ್ ಪ್ರಕ್ರಿಯೆ 2ನೇ ಹಂತಕ್ಕೆ ಕಾಲಿಡಲಿದೆ. ನೋಟಿಸ್ ಪಡೆದ ಮತದಾರರು ಅಗತ್ಯ ದಾಖಲೆಗಳೊಂದಿಗೆ ಕ್ಲೇಮು ಮತ್ತು ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶವಿದೆ.
ಜಿಲ್ಲೆಯಲ್ಲಿರುವ 14.99 ಲಕ್ಷ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ 12.97 ಲಕ್ಷ ಗಣತಿ ನಮೂನೆಗಳ ಡಿಜಿಟಲೀಕರಣ ಮಾಡಲಾಗಿದ್ದು, ಶೇ 86.51ರಷ್ಟು ಪ್ರಗತಿ ಸಾಧಿಸಲಾಗಿದೆ. ಮ್ಯಾಪಿಂಗ್ ಆಗದ 3,516 ಮತದಾರರು ಹಾಗೂ 2002ರ ಮತದಾರರ ಪಟ್ಟಿಯ ಮಾಹಿತಿ ಇಲ್ಲದವರು, ಪಾಲಕರ ಜೊತೆಗಿನ ಸಂಬಂಧ, ಹೆಸರು ಉಲ್ಲೇಖಿಸದ 11,894 ಮತದಾರರಿಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ನೋಟಿಸ್‌ಗಳನ್ನು ನೀಡಲಿದ್ದಾರೆ.
‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ ಬಿಎಲ್‌ಒಗಳ ಕಾರ್ಯ ಬಹುಮಟ್ಟಿಗೆ ಪೂರ್ಣಗೊಳ್ಳಲಿದೆ. ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಜಾರಿಯಾಗುವ ನೋಟಿಸ್‌ಗಳನ್ನು ಸಂಬಂಧಿಸಿದ ಮತದಾರರಿಗೆ ತಲುಪಿಸುವ ಹೊಣೆಯನ್ನು ಮಾತ್ರ ಇವರು ನಿಭಾಯಿಸಲಿದ್ದಾರೆ. ಮತದಾರರು ಮುಂದೇನು ಮಾಡಬೇಕು ಎಂಬುದರ ಬಗ್ಗೆ ದಾರಿ ತೋರಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಕರಡು ಮತದಾರರ ಪಟ್ಟಿಗೆ ಕ್ಲೇಮು ಮತ್ತು ಆಕ್ಷೇಪ ಸಲ್ಲಿಕೆಗೆ ಅಗತ್ಯ ವ್ಯವಸ್ಥೆ ರೂಪಿಸುವ ಸಿದ್ಧತೆಯನ್ನು ಜಿಲ್ಲಾಡಳಿತ ಆರಂಭಿಸಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಕ್ಕೆ ಚುನಾವಣಾಧಿಕಾರಿ (ಇಆರ್‌ಒ) ಹಾಗೂ ಸಹಾಯಕ ಚುನಾವಣಾಧಿಕಾರಿ (ಎಇಆರ್‌ಒ) ನೇಮಕ ಮಾಡಲಾಗುತ್ತಿದೆ. ಮತದಾರರ ಅಹವಾಲು ಆಲಿಸಿ ಪರಿಹರಿಸುವ ಹೊಣೆಯನ್ನು ಇವರು ನಿಭಾಯಿಸಲಿದ್ದಾರೆ.
‘ಪ್ರತಿ 10ರಿಂದ 12 ಮತಗಟ್ಟೆಗೆ ಒಬ್ಬ ಎಇಆರ್‌ಒ ನೇಮಕ ಮಾಡಲಾಗುತ್ತದೆ. ಮತದಾರರು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತಹ ವ್ಯವಸ್ಥೆ ರೂಪಿಸಲಾಗುತ್ತದೆ. ಸಲ್ಲಿಕೆಯಾಗುವ ಅಹವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಹಕ್ಕು ಕಳೆದುಕೊಂಡವರು: ನಗರದಲ್ಲೇ ಹೆಚ್ಚು
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕು ಕಳೆದುಕೊಂಡವರಲ್ಲಿ ನಗರ ಪ್ರದೇಶದ ಮತದಾರರ ಸಂಖ್ಯೆ ಹೆಚ್ಚು. ಅದರಲ್ಲೂ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೇ ಹೆಚ್ಚು ಜನರು ಮತದಾರರ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವುದು ಬಹುತೇಕ ನಿಶ್ಚಳವಾಗಿದೆ. ಆ.13ರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 34,639 ಮತದಾರರು ಮರಣ ಹೊಂದಿರುವುದು ಖಚಿತವಾಗಿದೆ. 1.05 ಲಕ್ಷ ಮತದಾರರು ಶಾಶ್ವತ ವಲಸೆ, 28,253 ಮತದಾರರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹಕ್ಕು ಹೊಂದಿದ್ದು ದೃಢಪಟ್ಟಿದೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 31,399 ಮತದಾರರು ಹಾಗೂ ದಕ್ಷಿಣ ಕ್ಷೇತ್ರದಲ್ಲಿ 29,215 ಮತದಾರರು ಶಾಶ್ವತ ವಲಸೆ ಹೋಗಿದ್ದಾರೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 10,202 ಮತದಾರರು ಶಾಶ್ವತ ವಲಸೆ ಹೋಗಿರುವುದು ಪತ್ತೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-43-1000632308