
ಉದ್ಯೋಗದ ರಹದಾರಿ ತೋರುವ ಜಿಟಿಟಿಸಿ; ಹುಬ್ಬಳ್ಳಿಯ ಯುವಕರಿಗೆ ವೃತ್ತಿಪರ ಶಿಕ್ಷಣ
ಹುಬ್ಬಳ್ಳಿ: ಯುವಜನರು ಉನ್ನತ ಶಿಕ್ಷಣ ಗಳಿಸಿಯೂ ಉದ್ಯೋಗ ಲಭಿಸದೆ ಪರದಾಡುತ್ತಿರುವ ದೃಶ್ಯ ಹಲವೆಡೆ ಕಾಣುತ್ತಿದ್ದೇವೆ. ಇದರ ನಡುವೆ ಪಿಯುಸಿ, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರುಹಾಗೂ ಅನುತ್ತೀರ್ಣರಾದವರಿಗೆ ಒಂದು ವರ್ಷದ ವೃತ್ತಿಪರ ಶಿಕ್ಷಣದ ತರಬೇತಿ ನೀಡಿ ಶೇ 100ರಷ್ಟು ಉದ್ಯೋಗಾವಕಾಶ ನೀಡಿದ ಸಾಧನೆಯನ್ನು ಇಲ್ಲಿಯ ಗೋಕುಲ ರಸ್ತೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಮಾಡಿದೆ.
ಓದಿನಲ್ಲಿ ಆಸಕ್ತಿ ಇಲ್ಲದ ಅದೆಷ್ಟೋ ಮಕ್ಕಳು ಎಸ್ಎಸ್ಎಲ್‌ಸಿಯಲ್ಲಿ ಅನುತ್ತೀರ್ಣರಾಗುವುದು ಸಾಮಾನ್ಯ. ಅನುತ್ತೀರ್ಣ ಎಂಬ ಹಿಂಜರಿಕೆ ಬಿಟ್ಟು ಇಲ್ಲಿಯ ಜಿಟಿಟಿಸಿಗೆ ಬಂದವರಿಗೆ ಮರು ವರ್ಷವೇ ಉದ್ಯೋಗದ ಹೆಬ್ಬಾಗಿಲು ತೆರೆದಿದೆ.
2025–26ನೇ ಸಾಲಿನಲ್ಲಿ ಜಿಟಿಟಿಸಿಗೆ ಬಂದು 10 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮಾಡಿದ ವಿದ್ಯಾರ್ಥಿಗಳು ಈಗ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಧಾರವಾಡ ಸೇರಿದಂತೆ ದೊಡ್ಡ ನಗರಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಸಂಬಳದ ಉದ್ಯೋಗ ಗಳಿಸಿ ಜೀವನಕ್ಕೆ ದಾರಿ ಕಂಡುಕೊಂಡಿದ್ದಾರೆ.
‘ಇಲ್ಲಿಯ ಜಿಟಿಟಿಸಿಯಲ್ಲಿ ಒಟ್ಟು ಐದು ವೃತ್ತಿಶಿಕ್ಷಣ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. 2025-26ನೇ ಸಾಲಿನಲ್ಲಿ ಟೂಲ್ ರೂಮ್ ಮಷಿನಿಸ್ಟ್ ಕೋರ್ಸ್‌ಗೆ 50, ಅಡ್ವಾನ್ಸ್ಡ್ ಟೂಲ್‌ರೂಮ್ ಮಷಿನಿಸ್ಟ್ ಕೊರ್ಸ್‌ಗೆ 50, ವೆಹಿಕಲ್ ಅಸೆಂಬ್ಲಿ ಫಿಟರ್ 50, ಅಟೊಮೊಬೈಲ್ ವೆಲ್ಡರ್ 30, ಮಲ್ಟಿಸ್ಕಿಲ್ ಟೆಕ್ನಿಷಿಯನ್ (ಎಲೆಕ್ಟ್ರಿಷಿಯನ್, ಕಾರ್ಪೆಂಟರಿ ಹಾಗೂ ಪ್ಲಂಬಿಂಗ್) 80 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು ಎಲ್ಲರಿಗೂ ಅದೇ ವರ್ಷದ ಕೊನೆಯಲ್ಲಿ ನಡೆದ ಕ್ಯಾಂಪಸ್ ಆಯ್ಕೆಯಲ್ಲೇ ಟ್ರೇನಿ ಕೆಲಸ ಲಭಿಸಿದೆ. ಕೈಗಾರಿಕಾ ಕ್ಷೇತ್ರದಲ್ಲಿ, ವೆಲ್ಡಿಂಗ್, ಫಿಟ್ಟಿಂಗ್, ಟರ್ನಿಂಗ್, ಮಿಲ್ಲಿಂಗ್, ಗ್ರೈಂಡಿಂಗ್ ಹಾಗೂ ಸಿಎನ್‌ಸಿ(ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್) ಕೆಲಸ ಬಲ್ಲವರಿಗೆ ಬೇಡಿಕೆ ಇದೆ’ ಎಂದು ಜಿಟಿಟಿಸಿ ಪ್ರಾಂಶುಪಾಲ ಮಾರುತಿ ಭಜಂತ್ರಿ ಹೇಳಿದರು.
‘ಉತ್ಪಾದನಾ ಕ್ಷೇತ್ರ, ಅಟೊಮೊಬೈಲ್ ಉದ್ಯಮ, ವೈಮಾನಿಕ ಕೈಗಾರಿಕೆಗಳು ಹಾಗೂ ಟೂಲಿಂಗ್ ಕೈಗಾರಿಕೆಗಳಲ್ಲಿ ವೃತ್ತಿಶಿಕ್ಷಣ ಪಡೆದವರಿಗೆ ಅತ್ಯುತ್ತಮ ಉದ್ಯೋಗಾವಕಾಶ ಲಭ್ಯವಿವೆ. 10 ತಿಂಗಳ ತರಬೇತಿ ಕೋರ್ಸ್‌ಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಹಾಗೂ ಓದಿಗಿಂತ ಪ್ರಾಯೋಗಿಕ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸೂಕ್ತ. ಈ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವುದರಿಂದ ಜೀವನಕ್ಕೆ ಒಂದು ಗುರಿ ಹಾಗೂ ದಾರಿ ಲಭಿಸಿದಂತೆ ಆಗುತ್ತದೆ. ಓದು, ತಾಂತ್ರಿಕ ಸಾಮರ್ಥ್ಯಗಳಲ್ಲಿಸಮಾನ ಆಸಕ್ತಿ ಇರುವವರು ಜಿಟಿಟಿಸಿಗಳಲ್ಲಿ ವೃತ್ತಿಪರ ಡಿಪ್ಲೊಮಾ ತರಬೇತಿಗಳನ್ನು ಪಡೆಯುವುದು ಸೂಕ್ತ’ ಎಂದು ಅವರು ವಿವರಿಸಿದರು.
‘ಕಳೆದ ಸಾಲಿನಲ್ಲಿ ವಿಮಾನಯಾನ ಸಂಸ್ಥೆಗಳಾದ ಎರೊಪ್ಲಾಟಿನಾ ಟೆಕ್ನಾಲಜಿಸ್ 2, ಏರೊಟೆಕ್ ಪ್ರೆಸಿಶನ್ 2, ಎರೊಮೆಕ್ ಪ್ರೆಸಿಶನ್ 3, ಮಲ್ಟಿಟೆಕ್ ಎಂಜಿನಿಯರಿಂಗ್ 2, ಫ್ಯೂಚರ್ ಟೆಕ್ ಎಲ್ಎಲ್‌ಪಿ 2, ಮೈಸೂರಿನ ರಂಗಾಸನ್ಸ್ ಎರೊಸ್ಪೇಸ್ 2 ವಿದ್ಯಾರ್ಥಿಗಳಿಗೆ ಟ್ರೇನಿ ಉದ್ಯೋಗ ನೀಡಿವೆ. ಉಳಿದಂತೆ ಹೈಕಾಮ್ ಎಂಜಿನಿಯರಿಂಗ್ 7, ಗ್ಲೋಬಲ್ ಡಿಸೈನ್ಸ್ 4, ಡಿಎಫ್ಎಂ ಟೆಕ್ನಾಲಜಿಸ್ 28, ಇನ್‌ಸೈಟ್ ಕ್ಯಾಮ್ ಸೆಂಟರ್ 26, ಏಕಸ್ ಎಚ್‌ಡಿಸಿ 6, ವೀರ್ ಒ ಮೆಟಲ್ 8, ವಿಎಂಎಕ್ಸ್ ಹೈ ಕನೆಕ್ಟರ್ 10, ವಿಪ್ರೊ ಕಾವಾಸಕಿ 40, ಜಿಯಾ ಎಂಜಿನಿಯರಿಂಗ್ 1, ಉನೊ ಮಿಂಡಾ 17, ಲಕ್ಷ್ಮಿ ಟೂಲಿಂಗ್ಸ್‌ನಲ್ಲಿ 4 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿದ್ದಾರೆ’ ಎಂದು ಜಿಟಿಟಿಸಿ ಕೇಂದ್ರದ ಪ್ಲೇಸ್‌ಮೆಂಟ್ ಅಧಿಕಾರಿ ಲೀಲಾಧರ್ ಚಳಗೇರಿ ತಿಳಿಸಿದರು.
‘ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣನಾದ ನಂತರ ಓದು ಮುಂದುವರಿಸುವ ಇಚ್ಛೆ ಇರಲಿಲ್ಲ. ಹೀಗಾಗಿ ಜಿಟಿಟಿಸಿಯಲ್ಲಿ ವೃತ್ತಿಪರ ಶಿಕ್ಷಣದ ಕೋರ್ಸ್ ಮಾಡಿದೆ. ಈಗ ಬೆಂಗಳೂರಿನ ಹೈಕಾಮ್ ಎಂಜಿನಿಯರಿಂಗ್ ಕಂಪನಿಯಲ್ಲಿ ಸಿಎನ್‌ಸಿ ಮಷಿನ್ ಆಪರೇಟಿಂಗ್ ಉದ್ಯೋಗ ಲಭಿಸಿದೆ’ ಎಂದರು ಧಾರವಾಡದ ಮುತ್ತು ಕಲ್ಯಾಣಿ.
ಅಲ್ಪಾವಧಿ ಕೌಶಲ ತರಬೇತಿಯೂ ಲಭ್ಯ
ಜಿಟಿಟಿಸಿ ಕೇಂದ್ರದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ, ಬಿಸಿಎ, ಬಿಎಸ್‌ಸಿ, ಐಟಿಐ ವಿದ್ಯಾರ್ಥಿಗಳು ಹಾಗೂ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಂಡಸ್ಟ್ರಿಯಲ್ ಆಟೊಮೇಶನ್, ಐಒಟಿ, ವೆಬ್ ಡೆವಲಪ್‌ಮೆಂಟ್, ಸೈಬರ್ ಸೆಕ್ಯುರಿಟಿ, ಎಐ, ಎಆರ್-ವಿಆರ್, ಬಿಲ್ಡಿಂಗ್ ಆಟೊಮೇಶನ್, ಪಿಎಲ್‌ಸಿ, ಕ್ಯಾಡ್ (ಮೆಕಾನಿಕಲ್ ಮತ್ತು ಸಿವಿಲ್), ಕ್ಯಾಮ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು 3ಡಿ ಪ್ರಿಂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಅಲ್ಪಾವಧಿ ಕೌಶಲ ತರಬೇತಿ ನೀಡಿ ಇಂಟರ್ನ್‌ಶಿಪ್ ಆಯೋಜಿಸಿ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನೂ ಒದಗಿಸಲಾಗುತ್ತಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-24-771979557