
ದಲಿತ ಸಮುದಾಯದ ಬಸವಂತಪ್ಪಗೆ ಮುಜರಾಯಿ ಖಾತೆ: ದೇವಸ್ಥಾನ ಆಡಳಿತದಲ್ಲಿ ಹೊಸ ಹೆಜ್ಜೆ
ಬೆಂಗಳೂರು: ದೇವಸ್ಥಾನಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ದಲಿತ ಸಮುದಾಯದ ಕೆ.ಎಸ್. ಬಸವಂತಪ್ಪ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಮುಜರಾಯಿ ಖಾತೆ ನೀಡಿರುವುದು ಗಮನ ಸೆಳೆದಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ಬಸವಂತಪ್ಪ ಅವರು ಈಗ ರಾಜ್ಯದ ಹಿಂದೂ ದೇವಸ್ಥಾನಗಳ ಆಡಳಿತ ನೋಡಿಕೊಳ್ಳುವ ಮುಜರಾಯಿ ಇಲಾಖೆಯ ಸಚಿವರಾಗಿದ್ದಾರೆ. ಪೌರಕಾರ್ಮಿಕರಾದ ಸಂಗಪ್ಪ ಪೈಲ್ವಾನ್ ಮತ್ತು ಹನುಮಕ್ಕ ಅವರ ಪುತ್ರರಾಗಿರುವ ಬಸವಂತಪ್ಪ ಅವರದು ಬಡತನದ ಹಿನ್ನೆಲೆ.
2020ರಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ತಮ್ಮ ರಾಜಕೀಯ ಜೀವನದ ಆರಂಭದ ದಿನಗಳ ಅನುಭವವೊಂದನ್ನು ಹಂಚಿಕೊಂಡಿದ್ದರು. 1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಬಳಿಕ ವಿಜಯೋತ್ಸವದ ಸಂದರ್ಭದಲ್ಲಿ ತಮ್ಮನ್ನು ಒಂದು ದೇವಸ್ಥಾನದೊಳಗೆ ಕರೆದೊಯ್ಯಲಾಗಿತ್ತು. ದೇವರಿಗೆ ನಮಸ್ಕರಿಸಿ ಮಂಗಳಾರತಿ ಪಡೆದು ಹೊರಬಂದ ಬಳಿಕ, ಅವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದ್ದರು.
ಆ ಘಟನೆ ಬಳಿಕ ಜಾತಿ ತಾರತಮ್ಯ ಇರುವ ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು ತಾವು ತಪ್ಪಿಸುತ್ತಿರುವುದಾಗಿ ಪರಮೇಶ್ವರ ಹೇಳಿದ್ದರು.
ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ದಲಿತ ಸಮುದಾಯದ ಬಸವಂತಪ್ಪ ಅವರಿಗೆ ದೇವಸ್ಥಾನಗಳ ಆಡಳಿತದ ಹೊಣೆಗಾರಿಕೆಯಿರುವ ಮುಜರಾಯಿ ಖಾತೆ ಸಿಕ್ಕಿರುವುದು ಒಂದು ರೀತಿಯಲ್ಲಿ ಬದಲಾವಣೆಯ ಸಂಕೇತವಾಗಿ ಕಾಣುತ್ತಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2016ರಿಂದ 2018ರವರೆಗೆ ರುದ್ರಪ್ಪ ಲಮಾಣಿ ಮುಜರಾಯಿ ಸಚಿವರಾಗಿದ್ದರು. ಅವರು ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿದವರು. ಆದರೆ ಪರಿಶಿಷ್ಟ ಜಾತಿಯ ಎಡ ಅಥವಾ ಬಲ ಸಮುದಾಯಗಳಿಂದ ಬಸವಂತಪ್ಪ ಈ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ ಎಂದು ವರದಿಗಳು ಹೇಳುತ್ತದೆ.
ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವಕ್ಕೆ ಅನುಗುಣವಾಗಿ ಬಸವಂತಪ್ಪ ಅವರಿಗೆ ಮುಜರಾಯಿ ಸಚಿವಾಲಯದ ಹೊಣೆಗಾರಿಕೆ ನೀಡಲಾಗಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ ಸಿಕ್ಕರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ಮುಖ್ಯ ಎಂದು ಅವರು ಹೇಳಿದ್ದಾರೆ.
ಬಸವಂತಪ್ಪಅವರಿಗೆ ಈ ಜವಾಬ್ದಾರಿ ನೀಡಿರುವುದನ್ನು ಸಮಾಜ ಹೇಗೆ ಸ್ವೀಕರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
‘ಈ ನಿರ್ಧಾರವನ್ನು ಒಂದು ದೃಷ್ಟಿಯಿಂದ ಸ್ವಾಗತಿಸಬಹುದು. ಇಂತಹ ಬೆಳವಣಿಗೆಯನ್ನು ಮೇಲ್ಜಾತಿಯ ಸಮಾಜ ಸ್ವೀಕರಿಸಲು ಸಿದ್ಧವಾಗಿದೆಯೇ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಹೀಗಾಗಿ ಬಸವಂತಪ್ಪ ಅವರನ್ನು ಮುಜರಾಯಿ ಸಚಿವರನ್ನಾಗಿ ನೇಮಿಸಿರುವುದು ಕೇವಲ ಮತ್ತೊಂದು ಖಾತೆ ಹಂಚಿಕೆಯಾಗಿ ನೋಡಲಾಗುವುದಿಲ್ಲ. ದೇವಸ್ಥಾನಗಳ ಆಡಳಿತದ ಜವಾಬ್ದಾರಿ ಜಾತಿಯ ಗಡಿಗಳನ್ನು ಮೀರಿ ಕೊಟ್ಟಿರುವುದುನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದಕ್ಕೂ ಈ ನೇಮಕ ಒಂದು ರೀತಿಯ ಪರೀಕ್ಷೆಯಾಗಬಹುದು.