
ಯರಗಟ್ಟಿ: ಬಿಜೆಪಿ ತಂಡದಿಂದ ಬರ ಪರಿಸ್ಥಿತಿ ವೀಕ್ಷಣೆ
ಯರಗಟ್ಟಿ/ಸತ್ತಿಗೇರಿ: ಸಮೀಪದ ಸೊಪ್ಪಡ್ಲ ಹೊರವಲಯದ ಜಮೀನುಗಳಿಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನೇತೃತ್ವದ ಬಿಜೆಪಿ ತಂಡ ಭಾನುವಾರ ಭೇಟಿ ನೀಡಿ, ಬರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಿತು.
ಸಂಪೂರ್ಣ ಒಣಗಿ ಹೋಗಿರುವ ಹೆಸರು ಬೆಳೆ ವೀಕ್ಷಿಸಿ, ರೈತರ ಸಮಸ್ಯೆಗಳನ್ನು ಆಲಿಸಿತು.
‘ಈ ಸಲ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೆಸರು, ಗೋವಿನಜೋಳದ ಬೆಳೆಗಾಗಿ ಪ್ರತಿ ಎಕರೆಗೆ ₹25 ಸಾವಿರ ಖರ್ಚು ಮಾಡಿದ್ದೇವೆ. ಹಾಕಿದ ಬಂಡವಾಳವೂ ಕೈಗೆಟುಕಿಲ್ಲ. ನಮಗೆ ನ್ಯಾಯ ಕೊಡಿಸಿ’ ಎಂದು ರೈತರಾದ ಶೇಖಪ್ಪ ಹಳ್ಳಿ ಮತ್ತು ಮಹಾಂತೇಶ ತೋಟಗಿ ಮನವಿ ಮಾಡಿದರು.
‘ನಿಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ಬಿಜೆಪಿ ನಿಯೋಗದವರು ಭರವಸೆ ನೀಡಿದರು.
₹50 ಸಾವಿರ ಪರಿಹಾರ ಘೋಷಿಸಿ
‘ಬರ ಪರಿಸ್ಥಿತಿಯಿಂದ ರೈತರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ಅರ್ಹ ರೈತರಿಗೆ ಪರಿಹಾರ ಒದಗಿಸಬೇಕು’ ಎಂದು ರವಿಕುಮಾರ್ ಆಗ್ರಹಿಸಿದರು.
ಶಾಸಕ ದುರ್ಯೋಧನ ಐಹೊಳೆ, ‘ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ, ಅಧಿವೇಶನ ನಡೆಯಲು ಬಿಡುವುದಿಲ್ಲ. ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆ ಹೋರಾಟ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಶಾಸಕರಾದ ವಿಠ್ಠಲ ಹಲಗೇಕರ, ದುರ್ಯೋಧನ ಐಹೊಳೆ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಸವರಾಜ ಯಕ್ಕಂಚಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಈರಣ್ಣ ಚಂದರಗಿ, ರೈತ ಮೋರ್ಚಾ ಅಧ್ಯಕ್ಷ ಮಹಾಂತೇಶ ತೋಟಗಿ, ವೆಂಕಟೇಶ ದೇವರಡ್ಡಿ, ಮಹಾದೇವ ಮುರಗೋಡ, ಮಹಾಂತೇಶ ಕಾಶನ್ನವರ, ಶೇಖಪ್ಪ ಹರಳಲಿ, ಕುಮಾರ ಮಲಮಾನಿ, ಗಿರೀಶ ಪಾಟೀಲ ಉಪಸ್ಥಿತರಿದ್ದರು.
ಸಂಪುಟ ವಿಸ್ತರಣೆಯಲ್ಲೇ ಕಾಲಹರಣ: ಜೊಲ್ಲೆ
‘ರಾಜ್ಯದಲ್ಲಿ ಬರ ಆವರಿಸಿದೆ. ರೈತರು ಗುಳೆ ಹೋಗುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಬೆಳೆಗಳ ಸ್ಥಿತಿ–ಗತಿ ಕುರಿತು ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ನೀಡದೆ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ ಮಾಡಿದ್ದಾರೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆರೋಪಿಸಿದರು.