
ಮುಂಡರಗಿ: ಆಧುನಿಕತೆಯ ಭರಾಟೆಯಲ್ಲಿ ಸಾಹಸಮಯ ದೇಸಿ ಆಟೋಟ ಕಣ್ಮರೆ
ಮುಂಡರಗಿ: ಆಧುನಿಕತೆಯ ಭರಾಟೆಯಲ್ಲಿ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ದೇಸಿಯ ಆಟೋಟಗಳು ಇಂದಿನ ಯುವಜನರ ಜೀವನದಿಂದ ಕಣ್ಮರೆಯಾಗುತ್ತಿವೆ. ಇದರಿಂದ ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಆರೋಗ್ಯಕರ ಸಾಮೂಹಿಕ ಆಟಗಳ ಪರಂಪರೆ ಮರೆಯಾಗುತ್ತಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳೆಂದರೆ ಮನೆ ಮನೆಯಲ್ಲೂ ಸಂಭ್ರಮದ ವಾತಾವರಣ ಇರುತ್ತಿತ್ತು. ಆದರೆ, ಇಂದು ಮೊಬೈಲ್ ಸೇರಿದಂತೆ ಇತರೆ ಮನೋರಂಜನಾ ಮಾಧ್ಯಮಗಳ ಭರಾಟೆಯಲ್ಲಿ ಹಬ್ಬಗಳು ಗೌಣವಾಗುತ್ತಿವೆ. ಈ ಹಿಂದೆ ನಾಗರ ಪಂಚಮಿ ಹಬ್ಬದಲ್ಲಿ ಜಾನಪದ ಆಟೋಟಗಳು ಹೆಚ್ಚು ಸದ್ದು ಮಾಡುತ್ತಿದ್ದವು. ಆದರೆ, ಇಂದು ಗ್ರಾಮೀಣ ಪ್ರದೇಶದಲ್ಲಿ ಅಂತಹ ವಾತಾವರಣವೇ ಕಾಣುತ್ತಿಲ್ಲ.
ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿಯೊಂದು ಓಣಿ, ಕೇರಿಗಳಲ್ಲಿ ದೊಡ್ಡ ಮರಗಳಿಗೆ ಜೋಕಾಲಿ ಕಟ್ಟುತ್ತಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರು ಜೋಕಾಲಿ ಆಡಿ ಸಂಭ್ರಮಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ ಪ್ರತಿಯೊಂದು ಮರವೂ ಜೋಕಾಲಿಯಿಂದ ಅಲಂಕೃತಗೊಳ್ಳುತ್ತಿದ್ದವು. ಈಗ ಅಂತಹ ದೃಶ್ಯಗಳು ವಿರಳವಾಗಿವೆ.
ಪಂಚಮಿ ಹಬ್ಬದಲ್ಲಿ ತೂರು ಬಿಲ್ಲೆಯಾಟ, ನಿಗದಿತ ದೂರಕ್ಕೆ ನಿಂಬೆಹಣ್ಣು ಎಸೆಯುವ ಆಟ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಶ್ಚಿತ ಗುರಿ ತಲುಪುವ ಆಟ, ಒಂಟಿ ಕಾಲಿನಲ್ಲಿ ಓಡುವ ಸ್ಪರ್ಧೆಯಂತಹ ದೇಸಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಅದ್ಯಾವುದು ನಡೆಯುತ್ತಿಲ್ಲ.
ಹಲವು ವರ್ಷಗಳ ಹಿಂದೆ ಪಂಚಮಿ ಹಬ್ಬದ ಸಂದರ್ಭದಲ್ಲಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸುಮಾರು 60ಕೀ.ಮಿ. ದೂರದ ಮೈಲಾರಕ್ಕೆ ತೆರಳಿದ್ದರು. ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಯುವಕನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದೂರದ ಕಪ್ಪತಗುಡ್ಡದ ಗಿರಿಸಾಲಿನಲ್ಲಿರುವ ಸಂಜೀವಿನ ಹನುಮಪ್ಪನ ಗುಡಿಗೆ ತೆರಳಿ ಗುಡಿಯ ಗಂಟೆ ಬಾರಿಸಿದ್ದನು. ಇಂತಹ ಸಾಹಸಮಯ ದೇಸಿ ಆಟಗಳು ಕಣ್ಮರೆಯಾಗುತ್ತಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-23-65682581