
ಕಲಬುರಗಿ: ಸೌಲಭ್ಯಗಳಿಲ್ಲದೆ ಸೊರಗಿದ ಉದ್ಯಾನಗಳು
ಕಲಬುರಗಿ: ಇಂದಿನ ಒತ್ತಡದ ಬದುಕಿನಲ್ಲಿ ಬಳಲಿದ ಮನಸುಗಳಿಗೆ ನೆಮ್ಮದಿ, ವಿಶ್ರಾಂತಿಯ ತಾಣಗಳಾಗಬೇಕಿದ್ದ ಉದ್ಯಾನಗಳು ಸೂಕ್ತ ನಿರ್ವಹಣೆಯಿಲ್ಲದೆ, ಮೂಲಸೌಲಭ್ಯಗಳ ಕೊರತೆಯಿಂದ ಸೊರಗಿವೆ.
ನಗರದ ಬಿದ್ದಾಪುರ, ಬ್ರಹ್ಮಪುರ, ವಸಂತನಗರ, ವಿದ್ಯಾನಗರ ಕಾಲೊನಿಗಳಲ್ಲಿರುವ ಬಹುತೇಕ ಉದ್ಯಾನಗಳು ಸ್ವರೂಪ ಕಳೆದುಕೊಂಡಿವೆ. ಬಹಳಷ್ಟು ಉದ್ಯಾನಗಳನ್ನು ಕಿರಿದಾದ ಜಾಗದಲ್ಲಿ ನಿರ್ಮಿಸಲಾಗಿದೆ. ಸೂಕ್ತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಕೆಲ ಉದ್ಯಾನಗಳು ಮರಗಳಿಲ್ಲದೆ ಬಯಲಾಗಿವೆ. ನೆರಳು, ನೆಮ್ಮದಿ ನೀಡಬೇಕಿದ್ದ ಅವು ನಾಯಿ, ಹಂದಿಗಳ ವಾಸಸ್ಥಾನಗಳಾಗಿವೆ. ವಾಕಿಂಗ್ ಪಥ ಇದ್ದರೆ, ಕುಳಿತುಕೊಳ್ಳಲು ಬೆಂಚ್‌ಗಳಿಲ್ಲ. ಬೆಳಕಿನ ವ್ಯವಸ್ಥೆಯಿಲ್ಲ. ಉದ್ಯಾನಗಳ ನಿರ್ವಹಣೆಗೆ ಸಿಬ್ಬಂದಿಯಿಲ್ಲ.
ಗಿಡಗಳಿಗೆ ನೀರುಣಿಸಲು ಇರುವ ಕೊಳವೆ ಬಾವಿಗಳು ಕೆಟ್ಟಿದ್ದು ದುರಸ್ತಿಯಾಗಿಲ್ಲ. ಇನ್ನು ಕೆಲವು ಕೊಳವೆಬಾವಿಗಳ ಅಂತರ್ಜಲ ಬತ್ತಿ ಹೋಗಿದೆ. ‘ಮಳೆ ನೀರು ಕೊಯ್ಲು’ ಗುಂಡಿಗಳು ನೀರು ಮರುಪೂರಣ ಮಾಡುತ್ತಿವೆಯೇ ಎಂಬುದು ಪ್ರಶ್ನೆಯಾಗಿದೆ. ಇನ್ನು ಕೆಲವು ಉದ್ಯಾನಗಳಿಗೆ ಸೌಲಭ್ಯಗಳನ್ನು ಒದಗಿಸಲು ಆರಂಭಿಸಲಾಗಿರುವ ಕಾಮಗಾರಿಗಳು ಅರ್ಧಂಬರ್ಧ ಉಳಿದುಕೊಂಡಿವೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿದ್ದಾಪುರ ಕಾಲೊನಿಯ ವೀರತಪಸ್ವಿ ಶಾಲೆಯ ಪಕ್ಕದಲ್ಲಿರುವ ಉದ್ಯಾನದಲ್ಲಿ ವಾಕಿಂಗ್ ಪಥ ಉತ್ತಮ ಸ್ಥಿತಿಯಲ್ಲಿದೆ. ಕುಳಿತುಕೊಳ್ಳಲು ಬೆಂಚ್‌ಗಳಿವೆ. ಆದರೆ ಕೊಳವೆ ಬಾವಿ ಇದ್ದರೂ, ಕೆಟ್ಟು ತಿಂಗಳುಗಳೇ ಕಳೆದಿವೆ. ಈವರೆಗೂ ದುರಸ್ತಿಯಾಗಿಲ್ಲ. ಮಕ್ಕಳ ಆಟಿಕೆ ಸಾಮಗ್ರಿಗಳು ಮುರಿದಿವೆ. ಕೇಳಿದರೆ ಶೀಘ್ರ ದುರಸ್ತಿಗೊಳಿಸಲಾಗುವುದು ಎಂದು ಪಾಲಿಕೆ ಸದಸ್ಯರು ಭರವಸೆ ನೀಡುತ್ತಿದ್ದಾರೆಯೇ ಹೊರತು, ಈವರೆಗೂ ದುರಸ್ತಿಯಾಗಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಬ್ರಹ್ಮಪುರ ಕಾಲೊನಿಯ ಕಾಳೆ ಲೇಔಟ್‌ನಲ್ಲಿರುವ ಉದ್ಯಾನದಲ್ಲಿ ಸೌಲಭ್ಯಗಳೇ ಇಲ್ಲ. ವಸಂತನಗರ ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಹಿಂದಿರುವ ವಿದ್ಯಾನಗರದ ಉದ್ಯಾನಗಳು ತುಂಬಾ ಕಿರಿದಾಗಿವೆ.
ವಸಂತನಗರದ ಉದ್ಯಾನದಲ್ಲಿ ವಾಕಿಂಗ್ ಪಥ ಬಿಟ್ಟರೆ ಬೇರೆ ಸೌಲಭ್ಯಗಳಿಲ್ಲ. ಗಿಡಗಳು ಅಡ್ಡ ಬರುವಂತೆ ವಾಕಿಂಗ್ ಪಥವನ್ನು ನಿರ್ಮಿಸಲಾಗಿದೆ. ಕೊಳವೆ ಬಾವಿಯಿಲ್ಲ, ವಿಶ್ರಾಂತಿ ತೆಗೆದುಕೊಳ್ಳಲು ಬೆಂಚ್‌ಗಳಿಲ್ಲ.
ವಿದ್ಯಾನಗರ ಉದ್ಯಾನವೂ ಕಿರಿದಾಗಿದ್ದು, ಪರಿಸ್ಥಿತಿ ಭಿನ್ನವಾಗಿಲ್ಲ. ಹಿರಿಯರು, ವಯಸ್ಕರಿಗಾಗಿ ಅಳವಡಿಸಿರುವ ಮುಕ್ತ ಜಿಮ್ ಸಲಕರಣೆಗಳು ಉತ್ತಮ ಸ್ಥಿತಿಯಲ್ಲಿ ಇಲ್ಲ. ನೈರ್ಮಲ್ಯದ ಕೊರತೆ ಇದೆ. ಕಾಗದದ ಹೂವಿನ ಬಳ್ಳಿಯು ವಾಕಿಂಗ್ ಪಥದ ಮೇಲೆಯೂ ಹರಡಿಕೊಂಡಿದೆ. ಬೆಂಚ್‌ಗಳ ಪಕ್ಕದಲ್ಲಿಯೇ ಗುಟ್ಕಾ ಚೀಟಿ, ಕುರುಕಲು ತಿಂಡಿಗಳ ರ‍್ಯಾಪರ್‌ಗಳನ್ನು ಬಿಸಾಡಲಾಗಿದೆ.
‘ಉದ್ಯಾನ ತುಂಬಾ ಕಿರಿದಾಗಿದ್ದು, ಸಾಕಷ್ಟು ಸ್ಥಳಾವಕಾಶವಿಲ್ಲ. ಒಂದು ಮೂಲೆಯಲ್ಲಿ ತುಂಬಾ ಕಿರಿದಾಗಿದ್ದು, ಮರಗಿಡಗಳನ್ನು ಬೆಳೆಸಲು ಅವಕಾಶವೇ ಇಲ್ಲದಂತಾಗಿದೆ. ಆರಂಭದಲ್ಲಿ ಸುಸ್ಥಿತಿಯಲ್ಲಿದ್ದ ಕೊಳವೆ ಬಾವಿ ಹಾಳಾಗಿದ್ದು, ಈವರೆಗೆ ದುರಸ್ತಿಗೊಳಿಸಿಲ್ಲ’ ಎಂದು ವಿದ್ಯಾನಗರ ನಿವಾಸಿ ಸಾವಿತ್ರಿ ಸಜ್ಜನ ಮಾಹಿತಿ ನೀಡಿದರು.
ಗೋದುತಾಯಿ ಕಾಲೊನಿಯ ಉದ್ಯಾನದ ಜಾಗದಲ್ಲಿ ಕಟ್ಟಡ ತ್ಯಾಜ್ಯ ಸೇರಿದಂತೆ ಕಸ ಸುರಿಯಲಾಗಿದೆ. ಉದ್ಯಾನವು ಸ್ವರೂಪವನ್ನು ಕಳೆದುಕೊಂಡಿದ್ದು, ಮಳೆ ನೀರು ಸಂಗ್ರಹ ಯೋಜನೆಗೂ ಧಕ್ಕೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-34-1785008930