
ಕೊಳ್ಳೇಗಾಲ: ಮೊಬೈಲ್ ಫೋನ್ ಕಳ್ಳರ ಹಾವಳಿ ಹೆಚ್ಚಳ
ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಫೋನ್, ಪರ್ಸ್ ಹಾಗೂ ಬಂಗಾರದ ಆಭರಣಗಳನ್ನು ಎಗರಿಸುತ್ತಿದ್ದಾರೆ.
ಗ್ರಾಮಾಂತರ ಭಾಗಗಳಿಂದ ನಿತ್ಯದ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಕಳ್ಳರು ಕರಾಮತ್ತು ತೋರುತ್ತಿದ್ದಾರೆ. ನಗರದ ಹೈಟೆಕ್ ಬಸ್ ನಿಲ್ದಾಣದಲ್ಲಿ ದಟ್ಟಣೆ ಇರುವಾಗ ಕಳ್ಳರು ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದಾರೆ.
ಕೊಳ್ಳೇಗಾಲದಿಂದ ಚಾಮರಾಜನಗರ, ಮೈಸೂರು, ಮಲೆ ಮಹದೇಶ್ವರನ ಬೆಟ್ಟ ಹಾಗೂ ಬೆಂಗಳೂರು ಮಾರ್ಗವಾಗಿ ತೆರಳುವ ಬಸ್‌ಗಳು ಹೆಚ್ಚು ದಟ್ಟಣೆಯಿಂದ ಕೂಡಿರುತ್ತವೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಕಳ್ಳರು ಮಹಿಳೆಯರ ಹಾಗೂ ವೃದ್ಧರ ಗಮನವನ್ನು ಬೇರೆಡೆಗೆ ಸೆಳೆದು, ಬಸ್ ಹತ್ತುವಾಗ ಉಂಟಾಗುವ ದಟ್ಟಣೆಯಲ್ಲಿ ಚಿನ್ನಾಭರಣ, ಮೊಬೈಲ್‌ಗಳನ್ನು ಕದಿಯುತ್ತಿದ್ದಾರೆ.
ಕಳ್ಳತನ ಸಹಿತ ಅಪರಾಧ ಕೃತ್ಯಗಳ ತಡೆಗೆ ಹಾಗೂ ಪತ್ತೆ ಹಚ್ಚಲು ಲಕ್ಷಾಂತರ ರೂಪಾಯಿ ವ್ಯಯಿಸಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದರೂ ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗದಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿದೆ. ಕೆಲವು ಕಡೆ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಕಾರ್ಯ ನಿರ್ವಹಿಸದಿರುವುದು ಕಂಡುಬಂದಿದೆ. ಈ ವಿಚಾರ ತಿಳಿದಿರುವ ಕಳ್ಳರು ರಾಜಾರೋಷವಾಗಿ ಕಳವು ಮಾಡುತ್ತಿದ್ದಾರೆ.
ಬಸ್ ನಿಲ್ದಾಣ ಸಹಿತ ಹೆಚ್ಚು ಜನರು ಸೇರುವ ಜಾಗಗಳಲ್ಲಿ ಗಸ್ತು ವ್ಯವಸ್ಥೆ ಬಲಗೊಳ್ಳಬೇಕು, ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು, ನಿರಂತರ ತಪಾಸಣೆ, ಗಸ್ತು, ವಿಚಾರಣೆ ನಡೆದಾಗ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಖಾಸಗಿ ಬಸ್ ಏಜೆಂಟ್ ನಿಶಾಂತ್ ಪ್ರಜಾವಾಣಿಗೆ ತಿಳಿಸಿದರು.
ಮೊಬೈಲ್ ಕಳವು ಹೆಚ್ಚು: ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೊಳ್ಳೇಗಾಲ ನಗರದಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಕಳುವಾಗಿವೆ. ಮೊಬೈಲ್ ಖರೀದಿಸಿದ್ದಕ್ಕೆ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳದವರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿಲ್ಲ. ಠಾಣೆಗೆ ದೂರು ನೀಡಲು ಹೋದರೆ ಮೊಬೈಲ್‌ನ ಐಎಂಇಐ ಸಂಖ್ಯೆ, ಖರೀದಿಸಿದ್ದಕ್ಕೆ ರಶೀದಿ, ಮೊಬೈಲ್‌ನ ಮಾಡೆಲ್ ಸೇರಿದಂತೆ ತಾಂತ್ರಿಕ ವಿವರಗಳನ್ನು ಕೇಳುತ್ತಾರೆ. ಹಾಗಾಗಿ ದೂರು ನೀಡುವ ಗೋಜಿಗೆ ಹೋಗಲಿಲ್ಲ ಎನ್ನುತ್ತಾರೆ ಮೊಬೈಲ್ ಕಳೆದುಕೊಂಡ ಯುವತಿ ರೇಷ್ಮಾ.
ಜಾತ್ರೆಗಳಲ್ಲಿ ಕರಾಮತ್ತು: ಜಾತ್ರೆ, ಧಾರ್ಮಿಕ ಉತ್ಸವ ಸಹಿತ ಸಮಾರಂಭ, ನಗರ ಪಟ್ಟಣಗಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಸುಲಭವಾಗಿ ಕಳ್ಳರ ಬಲೆಗೆ ಬೀಳುತ್ತಿದ್ದಾರೆ. ಬಸ್ ಹತ್ತುವಾಗ ನೂಕು ನುಗ್ಗಲಿನಲ್ಲಿ ಕಳ್ಳರು ಕೈಚಳಕ ತೋರುತ್ತಿದ್ದಾರೆ ಎಂದು ಪ್ರಯಾಣಿಕ ಶಿವಕುಮಾರ್.
ಪುಂಡರ ಹಾವಳಿ: ಕಳ್ಳರ ಹಾವಳಿಯ ಜೊತೆಗೆ ಪುಂಡರ ಕಾಟವೂ ತಾಲ್ಲೂಕಿನಲ್ಲಿ ಹೆಚ್ಚಾಗಿದೆ. ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಪುಂಡರು ಚುಡಾಯಿಸುತ್ತಿರುವ ದೂರುಗಳು ಹೆಚ್ಚಾಗಿವೆ. ಮದ್ಯ ಸೇವಿಸಿ ಅವಾಚ್ಯವಾಗಿ ಮಾತನಾಡುವುದು, ದಾರಿಗೆ ಅಡ್ಡಲಾಗಿ ನಿಲ್ಲುವುದು, ಮಲಗುವುದು ಮಾಡಲಾಗುತ್ತಿದ್ದು ಮುಜುಗರವಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಬೇಕು, ಪೊಲೀಸ್ ಚೌಕಿಯಲ್ಲಿ ಸಿಬ್ಬಂದಿ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-37-645759352