
ಹುಮನಾಬಾದ್: ಬರದ ಬಾಯಿಗೆ ತುತ್ತಾಗುತ್ತಿರುವ ತಾಲ್ಲೂಕುಗಳು!
ಹುಮನಾಬಾದ್: ಚಿಟಗುಪ್ಪ ಮತ್ತು ಹುಮನಾಬಾದ್ ತಾಲ್ಲೂಕುಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಪರಿಣಾಮ ಬರದ ಛಾಯೆ ಆವರಿಸುತ್ತಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಮಳೆಯ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೃಷಿ ಹಾಗೂ ಕಂದಾಯ ಇಲಾಖೆಯು ಸರ್ಕಾರಕ್ಕೆ ಒದಗಿಸಿರುವ ಮಾಹಿತಿ ಪ್ರಕಾರ ಅಂದಾಜು 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂಬುದಾಗಿ ತಿಳಿದುಬಂದಿದೆ.
ಹುಮನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕಿನ ಬಹುತೇಕ ಗ್ರಾಮಗಳ ಜಮೀನುಗಳು ಮಳೆಯಾಶ್ರಿತವಾಗಿವೆ. ಹೀಗಾಗಿ ಈ ಬಾರಿಯೂ ಮಳೆಗಾಲ ಆರಂಭದಿಂದಲೂ ಕೊರತೆ ಉಂಟಾಗಿದ್ದರಿಂದ ಬಹುಪಾಲು ಬೆಳೆ ಕುಂಠಿತಗೊಂಡಿದೆ.
ಮಳೆ ಕೊರತೆಯಿಂದ ಹೊಲಗಳಲ್ಲಿ ತೇವಾಂಶ ಕಡಿಮೆಯಾಗಿದ್ದು, ಬಿತ್ತನೆ ಮಾಡಿದ ಸೋಯಾಬೀನ್, ಹೆಸರು, ಉದ್ದು ಸೇರಿದಂತೆ ಮಳೆಯಾಶ್ರಿತ ಬೆಳೆಗಳ ಸ್ಥಿತಿ ರೈತರಲ್ಲಿ ಚಿಂತೆ ಮೂಡಿಸಿದೆ. ಸಕಾಲದಲ್ಲಿ ಉತ್ತಮ ಮಳೆಯಾಗದೆ ಇದ್ದ ಕಾರಣ ಬೆಳೆಗಳ ಇಳುವರಿ ಕುಸಿಯುವ ಸಾಧ್ಯತೆಯೂ ಇದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿರುವ ರೈತರಿಗೆ ನಷ್ಟ ಉಂಟಾಗುವುದರ ಜೊತೆಗೆ ಪ್ರಮುಖವಾಗಿ ಹೈನುಗಾರಿಕೆಗೆ ಮೇವಿನ ಕೊರತೆ ಉಂಟಾಗುವ ಭಯ ರೈತರನ್ನು ಕಾಡುತ್ತಿದೆ.
‘ಮಳೆಗಾಲ ಆರಂಭದ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಆಗಿತ್ತು. ಆದರೆ, ಜುಲೈ ತಿಂಗಳ ಮೊದಲ ವಾರದಲ್ಲೇ ಬಿತ್ತನೆಗೆ ಆಗುವಷ್ಟು ಮಳೆ ಆಗಿತ್ತು. ಹೀಗಾಗಿ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇವು. ನಂತರ ಆಗಸ್ಟ್ ತಿಂಗಳ ವರೆಗೆ ಮಳೆಯೇ ಬರಲಿಲ್ಲ. ಹೀಗಾಗಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆದು ಸಸಿ ಬರುವಾಗ ಬೆಳೆಗೆ ತೇವಾಂಶದ ಕೊರತೆ ಉಂಟಾಗಿದ್ದರಿಂದ ಸಂಪೂರ್ಣ ಬೆಳೆ ಹಾಳಾಗಿದೆ’ ಎನ್ನುತ್ತಾರೆ ಹಳ್ಳಿಖೇಡ್ (ಬಿ) ರೈತ ಲಕ್ಷ್ಮಣ್.
ಈ ವರ್ಷದ ಮುಂಗಾರಿನಿಂದ ವಾಡಿಕೆಯಂತೆ ತಾಲ್ಲೂಕಿನಲ್ಲಿ 421.8 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 172.3 ಮಿ.ಮೀ ಆಗಿದ್ದು, ಶೇ 60ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತಮವಾಗಿ ಮಳೆ ಬರಲಿದೆ ಎಂಬ ಭರವಸೆಯಿಂದ ಸೋಯಾಬಿನ್, ತೊಗರಿ, ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದೆವು. ಆದರೆ, ಮಳೆ ಬರಲಿಲ್ಲ. ಬಿತ್ತನೆ ಮಾಡಿದ್ದ ಬೆಳೆ ಈಗ ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ’ ಎನ್ನುತ್ತಾರೆ ದಬುಲಗುಂಡಿ ಗ್ರಾಮದ ರೈತ ರಾಜು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-33-1149351134