ಹಾವೇರಿ: ಜಿಲ್ಲಾ ಕೇಂದ್ರ ರಸ್ತೆಗಳೆಲ್ಲಾ ಗುಂಡಿಮಯ ದುಸ್ಥಿತಿ

ಹಾವೇರಿ: ಜಿಲ್ಲಾ ಕೇಂದ್ರ ರಸ್ತೆಗಳೆಲ್ಲಾ ಗುಂಡಿಮಯ ದುಸ್ಥಿತಿ

ಹಾವೇರಿ: ಜಿಲ್ಲಾ ಕೇಂದ್ರ ರಸ್ತೆಗಳೆಲ್ಲಾ ಗುಂಡಿಮಯ ದುಸ್ಥಿತಿ

ಹಾವೇರಿ: ಎಲ್ಲೆಂದರಲ್ಲಿ ಬಿದ್ದಿರುವ ತಗ್ಗು ಗುಂಡಿಗಳು. ನೀರು ನಿಂತು ಕೆರೆಯಂತಾದ ರಸ್ತೆಗಳು. ತಗ್ಗು ತಪ್ಪಿಸಲು ಹೋಗಿ ಉರುಳಿ ಬೀಳುವ ಬೈಕ್ ಸವಾರರು. ಗುಂಡಿಗಳಿಂದಾಗಿ ಜೋಲಿ ಹೊಡೆಯುತ್ತ ಸಾಗುವ ಕಾರು– ಗೂಡ್ಸ್ ವಾಹನಗಳು. ಗುಂಡಿಗಳನ್ನು ನೋಡಿಯೂ ನೋಡದಂತೆ ಐಷಾರಾಮಿ ಕಾರುಗಳಲ್ಲಿ ಓಡಾಡುವ ಜನಪ್ರತಿನಿಧಿಗಳು–ಅಧಿಕಾರಿಗಳು. ಗುಂಡಿ ಮುಚ್ಚದಿದ್ದಕ್ಕೆ ಹಿಡಿಶಾಪ ಹಾಕುತ್ತಿರುವ ಜನರು...

ಜಿಲ್ಲಾ ಕೇಂದ್ರ ಹಾವೇರಿಯ ಸದ್ಯದ ದುಸ್ಥಿತಿಯಿದು. ನಗರದ ಹಲವು ರಸ್ತೆಗಳಲ್ಲಿ ಡಾಂಬರ್ ಕಿತ್ತು ಹೋಗಿ, ದೊಡ್ಡ ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ನೀರು ನಿಂತುಕೊಂಡು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಹುತೇಕ ರಸ್ತೆಗಳು ಹಾಳಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸಿ ಜನರ ಜೀವಕ್ಕೂ ಕುತ್ತು ಎದುರಾಗುತ್ತಿದೆ.

ಹಾವೇರಿ ತಾಲ್ಲೂಕಿನ ಕಂದಾಯದ ಆಡಳಿತ ನಡೆಸುವ ತಹಶೀಲ್ದಾರ್ ಕಚೇರಿ ಎದುರೇ ದೊಡ್ಡ ಗುಂಡಿಗಳು ಬಿದ್ದಿವೆ. ನೀರು ನಿಂತುಕೊಂಡು ಕೆರೆಯಂತಾಗಿದೆ. ಇದೇ ರಸ್ತೆ ಮೂಲಕ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ನಿತ್ಯವೂ ಓಡಾಡುತ್ತಾರೆ. ರೈಲು ನಿಲ್ದಾಣಕ್ಕೆ ಬರುವ ಜನಪ್ರತಿನಿಧಿಗಳಿಗೆ, ಇದೇ ರಸ್ತೆಯೇ ಸಂಚಾರಕ್ಕೆ ಮಾರ್ಗವಾಗಿದೆ. ಆದರೆ, ಅವರ‍್ಯಾರೂ ರಸ್ತೆ ದುರಸ್ತಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ಮಾತನ್ನೂ ಹೇಳಿಲ್ಲ. ಹಲವು ತಿಂಗಳಿನಿಂದ ಗುಂಡಿ ಬಿದ್ದು ಇಡೀ ರಸ್ತೆ ಹಾಳಾದರೂ ತಿರುಗಿ ನೋಡುತ್ತಿಲ್ಲ. ರಸ್ತೆಯಲ್ಲಿ ಓಡಾಡುವ ಜನರು, ಪದೇ ಪದೇ ಆಯತಪ್ಪಿ ಬೀಳುವುದು ಮಾತ್ರ ತಪ್ಪಿಲ್ಲ.

ಜಿಲ್ಲಾ ಕ್ರೀಡಾಂಗಣವಿರುವ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ಸ್ಥಿತಿಯೂ ಅಯೋಮಯವಾಗಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂತನ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಇದೇ ರಸ್ತೆ ಮೂಲಕ ಐಷಾರಾಮಿ ಕಾರುಗಳಲ್ಲಿ ಓಡಾಡಿದರು. ಆದರೆ, ರಸ್ತೆ ಹದಗೆಟ್ಟರೂ ದುರಸ್ತಿಗೆ ಅವರು ಗಮನ ಹರಿಸಿಲ್ಲ. ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಅವರಿಗೆ ಹದಗೆಟ್ಟ ರಸ್ತೆಯ ಅನುಭವವೂ ಆಗುವುದಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

‘ಜೆ.ಎಚ್‌. ಪಟೇಲ್‌ ವೃತ್ತದ ರಸ್ತೆ ತೀರಾ ಹದಗೆಟ್ಟಿದೆ. ಮಳೆ ಬಂದರೆ, ಗುಂಡಿಯಲ್ಲಿ ನೀರು ನಿಂತುಕೊಳ್ಳುತ್ತಿದೆ. ಯಾವುದು ರಸ್ತೆ? ಯಾವುದು ಗುಂಡಿ? ಎಂಬುದೇ ಕಾಣಿಸುತ್ತಿಲ್ಲ. ಇದರಿಂದಾಗಿ, ಬೈಕ್ ಸವಾರರು ಪದೇ ಪದೇ ಉರುಳಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಅಪಘಾತಗಳು ಸಂಭವಿಸಿ, ಹಲವರು ಆಸ್ಪತ್ರೆಗೂ ಹೋಗಿ ಬಂದಿದ್ದಾರೆ’ ಎಂದು ಸ್ಥಳೀಯರು ದೂರಿದರು.

ಜಿಲ್ಲಾಧಿಕಾರಿ ಕಚೇರಿ ರಸ್ತೆಯೂ ಗುಂಡಿಮಯ: ಮುನ್ಸಿಪಲ್ ಹೈಸ್ಕೂಲ್ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಅಲ್ಲಲ್ಲಿ ತೀರಾ ಹದಗೆಟ್ಟಿದೆ.

ಪೈಪ್‌ ಅಳವಡಿಕೆ ಕಾಮಗಾರಿಗಾಗಿ ರಸ್ತೆಯ ಎರಡು ಬದಿಯಲ್ಲಿ ಮಣ್ಣು ಅಗೆದು, ಅವೈಜ್ಞಾನಿಕ ರೀತಿಯಲ್ಲಿ ಮುಚ್ಚಲಾಗಿದೆ. ಇದರಿಂದಾಗಿ ರಸ್ತೆಯ ಹಲವು ಕಡೆಗಳಲ್ಲಿ ತಗ್ಗು ಬಿದ್ದು, ಗುಂಡಿಗಳು ಸೃಷ್ಟಿಯಾಗಿವೆ. ಇದೇ ಮಾರ್ಗದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ನಿತ್ಯವೂ ಓಡಾಡುತ್ತಾರೆ. ಆದರೆ, ರಸ್ತೆ ದುರಸ್ತಿಯತ್ತ ಅವರು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಸವೇಶ್ವರನಗರದ ಎ,ಬಿ, ಸಿ ಬ್ಲಾಕ್ ಸೇರಿ ಸುತ್ತಮುತ್ತಲಿನ ಒಳ ರಸ್ತೆಗಳು, ಇಜಾರಿ ಲಕಮಾಪುರ, ನೇತಾಜಿನಗರ, ದೇಸಾಯಿ ಗಲ್ಲಿ, ಮುಲ್ಲಾನ ಕೆರೆ ರಸ್ತೆ, ಶಿವಾಜಿನಗರ, ರಾಜೇಂದ್ರನಗರ ಹಾಗೂ ಸುತ್ತಮುತ್ತಲಿನ ರಸ್ತೆಗಳ ಸ್ಥಿತಿಯೂ ತೀರಾ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರು, ನಿತ್ಯವೂ ಒಂದಿಲ್ಲಂದೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

‘ಪ್ರತಿಭಟಿಸಿ ಪ್ರಶ್ನೆ ಮಾಡದ ಜನರು’

‘ಹಾವೇರಿ ನಗರದ ಬಹುತೇಕ ಜನರು, ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದಾರೆ. ಬೈಕ್‌ನಿಂದ ಬಿದ್ದು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಹಾಕಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ. ಆದರೆ, ಗುಂಡಿ ಬಿದ್ದ ರಸ್ತೆ ಸರಿಪಡಿಸಲು ಯಾರೊಬ್ಬರೂ ಪ್ರತಿಭಟನೆ ಮಾಡುತ್ತಿಲ್ಲ. ನಮಗೇಕೆ ಬೇಕು? ಎಂದು ಮೌನವಾಗುತ್ತಿದ್ದಾರೆ. ಇಂಥ ಮನಸ್ಥಿತಿಯಿಂದಲೇ ಹಾವೇರಿ ಸುಧಾರಣೆಯಾಗುತ್ತಿಲ್ಲ’ ಎಂದು ದಾನೇಶ್ವರಿನಗರದ ನಿವಾಸಿ ಮಲ್ಲೇಶಪ್ಪ ಹಳೇಮನಿಯವರ ದೂರಿದರು. ‘ಹಾವೇರಿಯಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಜನರು ಮೊದಲು ಜಾಗೃತರಾಗಬೇಕು. ಅನ್ಯಾಯ ಪ್ರಶ್ನಿಸಬೇಕು. ಸೌಕರ್ಯಗಳನ್ನು ಪಡೆಯಲು ಪ್ರತಿಭಟಿಸಬೇಕು. ಅವಾಗಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಎಚ್ಚರಿಕೆಯಿಂದ ಇರುತ್ತಾರೆ. ಜನರು ಕೇಳದಿದ್ದರೆ, ಅವರೆಲ್ಲರೂ ಸದಾ ಕಾಲ ಮೌನವಾಗಿರುತ್ತಾರೆ’ ಎಂದು ಹೇಳಿದರು.

‘ಸಚಿವರೇ ಇತ್ತ ಗಮನ ಹರಿಸಿ’

‘ಹಾವೇರಿ ಜಿಲ್ಲಾ ಕೇಂದ್ರದ ರಸ್ತೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಅಷ್ಟಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ರಸ್ತೆ ದುರಸ್ತಿಗೆ ಗಮನ ಹರಿಸುತ್ತಿಲ್ಲ. ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರಿಂದಲೂ ಗುಂಡಿ ಮುಚ್ಚಿಸುವ ಕೆಲಸ ಆಗುತ್ತಿಲ್ಲ’ ಎಂದು ಬಸವೇಶ್ವರನಗರ ಸಿ ಬ್ಲಾಕ್ ನಿವಾಸಿಗಳು ಅಸಮಾಧಾನ ಹೊರಹಾಕಿದರು.

‘ಹೊಸ ರಸ್ತೆ ನಿರ್ಮಿಸಲು ಸಾಕಷ್ಟು ಸಮಯ ಬೇಕು. ವಿಶೇಷ ಅನುದಾನವೂ ಬೇಕು. ಅದರ ಬದಲು, ತ್ವರಿತವಾಗಿ ಗುಂಡಿ ಮುಚ್ಚಿಸುವ ಕೆಲಸ ಆಗಬೇಕು. ರುದ್ರಪ್ಪ ಲಮಾಣಿ ಅವರು ಗಮನ ಹರಿಸಬೇಕು. ಸಂಬಂಧಪಟ್ಟ ಇಲಾಖೆಗೆ ಖಡಕ್ ಸೂಚನೆ ನೀಡಿ, ಗುಂಡಿ ಮುಚ್ಚಿಸಬೇಕು’ ಎಂದು ಆಗ್ರಹಿಸಿದರು.

ಬಸವೇಶ್ವರ ನಗರ ಎ, ಬಿ, ಸಿ ಬ್ಲಾಕ್ ಹಾಗೂ ಮಂಜುನಾಥ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಚಲಾಯಿಸಲು ಜನರು ಹರಸಾಹಸಪಡುತ್ತಿದ್ದಾರೆ. ಸಂಬಂಧಪಟ್ಟವರು ಗಮನ ಹರಿಸಬೇಕು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-22-1401447552

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ