
ಕರಾಟೆ ಶಿಕ್ಷಕರಿಗೆ ಅಲ್ಪ ಸಂಭಾವನೆ, ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರು
ಗದಗ: ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಶಾಲಾ ಹಂತದಲ್ಲಿಯೇ ಕರಾಟೆ ತರಬೇತಿ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ, ಅಲ್ಪ ಸಂಭಾವನೆಯಲ್ಲೇ ವಿವಿಧ ಶಾಲೆಗಳಲ್ಲಿ ತರಬೇತಿ ನೀಡಬೇಕಿರುವುದರಿಂದ ಕರಾಟೆ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದು ವಾರಕ್ಕೆ ಮೂರು ಸೆಷನ್‌ನಂತೆ ಒಟ್ಟು ಮೂರು ತಿಂಗಳಿಗೆ 36 ಸೆಷನ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಬೇಕಿದೆ. ಈ ಯೋಜನೆ ಜಾರಿಯಾಗಿ ಹಲವು ವರ್ಷಗಳಾದರೂ ₹9,000 ಮಾತ್ರ ನೀಡಲಾಗುತ್ತಿದೆ. ಸಂಭಾವನೆ ಮೊತ್ತ ಏರಿಕೆಯಾಗಿಲ್ಲ ಎಂಬುದು ಕರಾಟೆ ಶಿಕ್ಷಕರ ಆರೋಪ.
‘ಪ್ರೌಢಶಾಲೆ ಮಾತ್ರವಲ್ಲದೆ ಹಿರಿಯ ಪ್ರಾಥಮಿಕ, ಪಿಎಂಶ್ರೀ, ವಸತಿ ಶಾಲೆ ಹಾಗೂ ವಸತಿನಿಲಯಗಳಿಗೂ ಕರಾಟೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಶಿಕ್ಷಕರೊಬ್ಬರು ಕನಿಷ್ಠ ಎರಡ್ಮೂರು ಶಾಲೆಗಳಿಗೆ ತೆರಳಿ ತರಬೇತಿ ನೀಡುವುದರಿಂದ ಸರ್ಕಾರ ನೀಡುವ ಸಂಭಾವನೆ ಯಾವುದಕ್ಕೂ ಸಾಲುತ್ತಿಲ್ಲ. ಶಾಲೆಗಳ ನಡುವಿನ ಅಂತರ ದೂರವಿದ್ದರೆ, ಪ್ರಯಾಣ ಖರ್ಚನ್ನೂ ನಾವೇ ಭರಿಸಬೇಕಾದ ಪರಿಸ್ಥಿತಿ ಇದೆ’ ಎಂದು ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಸದಸ್ಯ ಚೇತನ್ ಹಬೀಬ ತಿಳಿಸಿದರು.
‘ಇನ್ನು ಕೆಲವು ಶಾಲೆಗಳಲ್ಲಿ ಅನರ್ಹರನ್ನು ಕರಟೆ ತರಬೇತಿಗೆ ನೇಮಿಸಿಕೊಳ್ಳಲಾಗುತ್ತಿದೆ. ಕೆಲವೇ ಶಿಕ್ಷಕರು ಬಹುತೇಕ ಶಾಲೆಗಳಲ್ಲಿ ತರಬೇತಿ ಕೊಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸಮರ್ಪಕವಾಗಿ ಕರಾಟೆ ತರಬೇತಿ ಸಿಗುತ್ತಿಲ್ಲ. ಕರಾಟೆ ಶಿಕ್ಷಕರಿಂದ ಕೆಲವು ತಿಂಗಳ ತರಬೇತಿ ಬಳಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಅಭ್ಯಾಸ ಮಾಡಿಸಬೇಕಿದೆ. ಎಷ್ಟೋ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಈ ಎಲ್ಲ ಕಾರಣಗಳಿಂದ ಯೋಜನೆಗೆ ಹಿನ್ನಡೆಯಾಗಿದೆ’ ಎಂದರು.
ನೇಮಕಾತಿಗೆ ಆಗ್ರಹ: ‘ವಿದ್ಯಾರ್ಥಿನಿಯರಿಗಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೂ ಕರಾಟೆ ಶಿಕ್ಷಣ ಅವಶ್ಯವಿದೆ. ಕರಾಟೆ ರಕ್ಷಣಾತ್ಮಕ ಕಲೆ ಮಾತ್ರವಾಗಿರದೆ ಕ್ರೀಡೆಯೂ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕು’ ಎಂದು ಕರಾಟೆ ಶಿಕ್ಷಕರು ಆಗ್ರಹಿಸಿದರು.
ಜಿಲ್ಲೆಯ ಕರಾಟೆ ಶಿಕ್ಷಕರ ಸಭೆ ಇಂದು
ಜಿಲ್ಲೆಯ ಕರಾಟೆ ಶಿಕ್ಷಕರನ್ನು ಒಂದೆಡೆ ಸೇರಿಸಿ, ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಗದಗ ನಗರದ ಪ್ರವಾಸಿ ಮಂದಿರದಲ್ಲಿ ಆಗಸ್ಟ್ 24ರಂದು ಸಂಜೆ 5 ಗಂಟೆಗೆ ಸಭೆ ಆಯೋಜಿಸಲಾಗಿದೆ.
‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಕರಾಟೆ ಶಿಕ್ಷಕರು ಸಭೆ ನಡೆಸಿದ್ದಾರೆ. ಎಲ್ಲರನ್ನೂ ಒಂದು ವೇದಿಕೆಗೆ ಕರೆ ತಂದು ಸಂಘಟಿಸಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸಚಿವರನ್ನು ಭೇಟಿಯಾಗಿ, ಮನವಿ ಸಲ್ಲಿಸಲಾಗುತ್ತದೆ’ ಎಂದು ಕರಾಟೆ ಶಿಕ್ಷಕ ಚೇತನ ಹಬೀಬ ತಿಳಿಸಿದರು.
ಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವ ಶಿಕ್ಷಕರಿಗೆ ನೀಡುವ ಸಂಭಾವನೆ ಹೆಚ್ಚಿಸುವ ಕುರಿತು ಸದ್ಯದವರೆಗೆ ಯಾವುದೇ ಮಾಹಿತಿ ಇಲ್ಲ
ಆರ್.ಎಸ್. ಬುರಡಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-23-1150169675