
ಹನೂರು | ಗುಂಡಿನ ದಾಳಿ: ತಪ್ಪಿದ್ದರೆ ಶಿಕ್ಷಿಸಬಹುದಿತ್ತು; ಕೊಲ್ಲಬಹುದೇ?
ಚಾಮರಾಜನಗರ/ಹನೂರು: ಆ.15 ರಂದು ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ತುಂಬಿ ತುಳುಕುತ್ತಿದ್ದರೆ ಗಡಿಭಾಗದ ತಾಲ್ಲೂಕಾಗಿರುವ ಹನೂರಿನಲ್ಲಿ ಮಾತ್ರ ನೆತ್ತರು ಹರಿದಿತ್ತು.
ಕಾವೇರಿ ವನ್ಯಧಾಮದ ಶಾಗ್ಯ ಶಾಖೆಯ ಹೊಳೆ ಮುರಿದಟ್ಟಿ ಗಸ್ತಿನಲ್ಲಿರುವ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಬಲಿಯಾದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಪಟ್ಟಣದ ಚಿತ್ರಣವೇ ಬದಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿಯ ನಡೆಯ ವಿರುದ್ಧ ಶಾಗ್ಯ ಹಾಗೂ ಕಾಡಂಚಿನ ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶದ ಕಟ್ಟೆ ಹೊಡೆಯಿತು. ಮೃತರ ಸಂಬಂಧಿಗಳು, ಗ್ರಾಮಸ್ಥರು ಆಕ್ರೋಶಕ್ಕೆ ಕಳ್ಳಿದೊಡ್ಡಿಯಲ್ಲಿರುವ ಕಳ್ಳಬೇಟೆ ತಡೆ ಶಿಬಿರ ಹಾಗೂ ಶಾಗ್ಯದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಯ ವಸತಿ ಗೃಹಗಳು ಧ್ವಂಸಗೊಂಡವು.
ಹನೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂದೆ ದಿನವಿಡೀ ಪ್ರತಿಭಟನೆ ನಡೆಯಿತು. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಆರಂಭವಾದ ಪ್ರತಿಭಟನೆಯ ಕಿಡಿ ರಾತ್ರಿಯಾದರೂ ಆರಲಿಲ್ಲ. ತುಂತುರು ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಗ್ರಾಮಸ್ಥರು ಊಟ, ನೀರು, ವಿಶ್ರಾಂತಿ ಇಲ್ಲದೆ ರಸ್ತೆಯಲ್ಲಿ ಕುಳಿತು ಹೋರಾಟ ಮಾಡಿದರು. ಕುಟುಂಬಸ್ಥರು, ಸಂಬಂಧಿಗಳು ನಿತ್ರಾಣಗೊಂಡರು. ‘ನಕಲಿ ಎನ್‌ಕೌಂಟರ್’ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
‘ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸುವಂತೆ ನನ್ನ ಪತಿ ಕಾಡುಪ್ರಾಣಿ ಬೇಟೆಯಾಡಿದ್ದರೆ ಬಂಧಿಸಿ ಜೈಲಿಗಟ್ಟಬಹುದಿತ್ತು. ಐದಾರು ವರ್ಷ ಶಿಕ್ಷೆ ಕೊಡಬಹುದಿತ್ತು. ಆದರೆ, ಪ್ರಾಣಿಗಳ ಜೀವ ತೆಗೆದರು ಎಂಬ ನೆಪವೊಡ್ಡಿ ಮನುಷ್ಯರ ಜೀವ ತೆಗೆಯುವುದು ನ್ಯಾಯವೇ?’ ಎಂದು ಮೃತ ಕುಮಾರ್ ಪತ್ನಿ ಡೊಮಿನಾ ಕಣ್ಣೀರು ಸುರಿಸಿದರು.
‘ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ, ಹೆಣ್ಣುಮಕ್ಕಳ ಭವಿಷ್ಯ ನೆನೆಸಿಕೊಂಡರೆ ಭಯವಾಗುತ್ತಿದೆ. ಕಿಂಚಿತ್ತೂ ಮಾನವೀಯತೆ ತೋರದೆ ನಿರ್ದಾಕ್ಷಿಣ್ಯವಾಗಿ ಗುಂಡು ಹೊಡೆದಿದ್ದು ಸರಿಯೇ, ಮಕ್ಕಳಿಗೆ ಯಾರು ದಿಕ್ಕು’ ಎಂದು ಮೃತ ಪೀಟರ್ ಪತ್ನಿ ರಸ್ತೆಯಲ್ಲೇ ಗೋಳಾಡಿದರು.
‘ಶೂಟೌಟ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಜೈಲು ಶಿಕ್ಷೆಯಾಗಬೇಕು, ಮೃತರ ಕುಟುಂಬಗಳ ಜೀವನಕ್ಕೆ ಆಧಾರ ಮಾಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಬೇಕು, ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಮೃತರ ಸಂಬಂಧಿ ತೋಮಿಯಾರ ಪಾಳ್ಯದ ರಾಜೇಶ್ ತಿಳಿಸಿದರು.
ಹಿಂದೆಯೂ ನಡೆದಿತ್ತು ಘಟನೆ
ಜಿಲ್ಲೆಯಲ್ಲಿ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮ, ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯಗಳಿದ್ದು ಕಳ್ಳಬೇಟೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ತಮಿಳುನಾಡಿನಿಂದ ಕಾವೇರಿ ನದಿ ದಾಟಿ ರಾಜ್ಯದ ಅರಣ್ಯ ಪ್ರವೇಶಿಸುವ ಕಳ್ಳಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಹಲವು ಬಾರಿ ಗುಂಡಿನ ಚಕಮಕಿಗಳು ನಡೆದಿದ್ದು ಹಲವರು ಬಲಿಯಾಗಿದ್ದಾರೆ.
2016ರಲ್ಲಿ ಪಾಲಾರ್‌ನಲ್ಲಿ ತಮಿಳುನಾಡು ಮೂಲದ ಬೇಟೆಗಾರ ಮೃತಪಟ್ಟಿದ್ದ. ಈ ಘಟನೆಯಿಂದ ಉದ್ರಿಕ್ರಗೊಂಡ ಮೃತನ ಸಂಬಂಧಿಗಳು ತಮಿಳುನಾಡಿನಿಂದ ರಾಜ್ಯದ ಗಡಿಗೆ ನುಗ್ಗಿ ಪಾಲಾರ್ ಚೆಕ್‌ಪೋಸ್ಟ್ ಧ್ವಂಸ ಗೊಳಿಸಿದ್ದರು. 2019ರಲ್ಲಿ ಗೋಪಿನಾಥಂ ಅರಣ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡು ಮೂಲದ ಬೇಟೆಗಾರ ಮೃತಪಟ್ಟಿದ್ದ.
2023ರ ಫೆಬ್ರುವರಿಯಲ್ಲಿ ಕಾವೇರಿ ನದಿ ದಾಟಿ ಬಂದಿದ್ದ ತಮಿಳುನಾಡಿನ ನಾಲ್ವರು ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಘಟನೆ ನಡೆದು ಹಲವು ದಿನಗಳ ಬಳಿಕ ಬೇಟೆಗಾರರ ಶವ ನದಿಯಲ್ಲಿ ಪತ್ತೆಯಾಗಿ ಅರಣ್ಯ ಇಲಾಖೆ ವಿರುದ್ಧ ಮೃತರ ಸಂಬಂಧಿಗಳು ಪ್ರತಿಭಟನೆಗಳು ನಡೆಸಿದ್ದರು.
ಕಾವೇರಿ ವನ್ಯಧಾಮದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಸ್ಥಳೀಯರು ಬಲಿಯಾಗಿದ್ದು ಪ್ರಕರಣದ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಬೇಕಿದೆ.
ಆತ್ಮರಕ್ಷಣೆಗೆ ಫೈರಿಂಗ್: ಅರಣ್ಯ ಇಲಾಖೆ ಸ್ಪಷ್ಟನೆ
ಚಾಮರಾಜನಗರ: ಹನೂರು ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದು ಈ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ಹೊಳೆ ಮುರಿದಟ್ಟಿ ಗಸ್ತಿನ ಚಿಕ್ಕಲ್ಲೂರು ಮೀಸಲು ಅರಣ್ಯದಲ್ಲಿ ಕಳ್ಳಬೇಟೆಗಾರರ ತಂಡ ನುಸಳಿ ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡು ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಯಿತು.
ಗಣಿಗಲೆ ಮರದ ವಾಚ್ ಟವರ್ ಮೇಲೆ ಸಿಬ್ಬಂದಿ ವೀಕ್ಷಣೆ ಮಾಡುವಾಗ ಗೋಮಡಿನ ಹಳ್ಳ ಹಾಗೂ ಸೀರನಮಡ ಅರಣ್ಯದಲ್ಲಿ ಬೇಟೆಗಾರರು ಇರುವುದು ಪತ್ತೆಯಾಯಿತು. ಇದರ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ 5 ಗಂಟೆಯ ಹೊತ್ತಿಗೆ ಕಾರ್ಯಾಚರಣೆ ನಡೆಸಿದಾಗ ಕಲ್ಲುಬಂಡೆ ಹಾಗೂ ಪೊದೆಗಳಲ್ಲಿ ಬೇಟೆಗಾರರು ಅವಿತಿರುವುದು ಕಂಡುಬಂದಿದ್ದು ವಶಕ್ಕೆ ಪಡೆಯಲು ಮುಂದಾದಾಗ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ಮಾಡಿದರು.
ಬೇಟೆಗಾರರಿಗೆ ಶರಣಾಗುವಂತೆ ಮನವೊಲಿಸಲು ಯತ್ನಿಸಿದರೂ ನಾಡ ಬಂದೂಕಿನಿಂದ ದಾಳಿ ಮಾಡಿದರು. ಈ ಸಂದರ್ಭ ಸಿಬ್ಬಂದಿ ಆತ್ಮರಕ್ಷಣೆಗೆ ಹಾರಿಸಿದ ಗುಂಡು ಮೂವರಿಗೆ ತಗುಲಿದೆ. ಘಟನೆಯಲ್ಲಿ ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಮೂವರನ್ನು ಚಿಕಿತ್ಸೆಗೆ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಂಧಿತರಿಂದ ಎರಡು ನಾಡಬಂದೂಕು, 38 ಗುಂಡುಗಳು, ಚಾಕು, ಮದ್ದಿನ ಪುಡಿ, ಎರಡು ಚೀಲದಲ್ಲಿ ತುಂಬಿದ್ದ 20 ಕೆ.ಜಿ ಪ್ರಾಣಿಯ ಮಾಂಸ, ಬಟ್ಟೆ ಬ್ಯಾಗ್, ಪಾತ್ರೆಗಳು, ಅಡುಗೆ ತಯಾರಿಸಲು ತಂದಿದ್ದ ಆಹಾರ ಸಾಮಾಗ್ರಿ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳಬೇಟೆ ಸಂಬಂಧ ಆರೋಪಿಗಳ ವಿರುದ್ಧ ವನ್ಯಜೀವಿ (ಸಂರಕ್ಷಣಾ) ಕಾಯ್ದೆ-1972ರ ಸೆಕ್ಷನ್ 2 (16)(ಎ), 9, 27 ಮತ್ತು 31ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-37-2032053286