
ಹನೂರು ಗುಂಡೇಟು ಪ್ರಕರಣ|ಮೃತ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ: ಶಾಸಕ ಮಂಜುನಾಥ್
ಹನೂರು (ಚಾಮರಾಜನಗರ ಜಿಲ್ಲೆ): ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿರುವ ಮೂವರ ಕುಟುಂಬಸ್ಥರ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ನಕಲಿ ಎನ್‌ಕೌಂಟರ್ ನಡೆಸಿ ಮೂವರನ್ನು ಕೊಂದು ಹಾಕಿದ್ದಾರೆ. ಪ್ರಕರಣದಲ್ಲಿ ಮ್ಯಾಜಿಸ್ಟೇಟ್ ನೇತೃತ್ವದಲ್ಲಿ ನಿಷ್ಪಪ್ಷಪಾತ ತನಿಖೆ ನಡೆಯಬೇಕು, ತಪ್ಪಿತಸ್ಥ ಸಿಬ್ಬಂದಿಗೆ ಕಠಿಣ ಶಿಕ್ಷೆಯಾಗಬೇಕು, ಮೃತರ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ಶವ ಪಡೆಯುವುದಿಲ್ಲ ಎಂದು ಸಂಬಂಧಿಗಳು ಪಟ್ಟು ಹಿಡಿದಿದ್ದಾರೆ.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಬಳಿ ಮೃತರ ಕುಟುಂಬಸ್ಥರು, ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳ ಗ್ರಾಮಸ್ಥರು ಜಮಾಯಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ
ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ಕಚೇರಿಗಳಿಗೆ ಭದ್ರತೆ ಒದಗಿಸಲಾಗಿದೆ.
ಹನೂರು ಶಾಸಕ ಎಂ.ಆರ್ ಮಂಜುನಾಥ್ ಭಾನುವಾರ ಪ್ರತಿಭಟನಾಕಾರರನ್ನು ಭೇಟಿಯಾಗಿ ಮಾತುಕತೆ ನಡೆಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.
ಬಳಿಕ ಮಾತನಾಡಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಯ ಹೊಣೆಯನ್ನು ಮ್ಯಾಜಿಸ್ಟ್ರೇಟ್‌ಗೆ ವಹಿಸಿದೆ. ಆರ್‌ಎಫ್‌ಒ ಹಂತದ ಸಿಬ್ಬಂದಿ ಅಮಾನತಿಗೆ ಕ್ರಮ ಕೈಗೊಳ್ಳಲಿದೆ.
ಸರ್ಕಾರದಿಂದ ತಾತ್ಕಾಲಿಕವಾಗಿ ₹ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಜೊತೆಗೆ ವೈಯಕ್ತಿಕವಾಗಿ ₹10 ಲಕ್ಷ ಪರಿಹಾರ ನೀಡುವುದಾಗಿ ಶಾಸಕರು ಹೇಳಿದರು.
ಗುಂಡು ಹಾರಿಸಿದ ಪ್ರಕರಣ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖಾ ತಂಡವನ್ನೂ ರಚಿಸಲಾಗಿದ್ದು ವರದಿ ಸಲ್ಲಿಕೆಯಾದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಶಾಸಕ ಮಂಜುನಾಥ್ ಹೇಳಿದರು.