
ರಟ್ಟೀಹಳ್ಳಿ | ಕೆಳಸೇತುವೆಯಲ್ಲಿ ನೀರು: ಸಂಚಾರ ಸಂಕಷ್ಟ
ರಟ್ಟೀಹಳ್ಳಿ: ತಾಲ್ಲೂಕಿನ ಹಿರೇಮೊರಬ ಗ್ರಾಮದಿಂದ ಮಾಸೂರು ಗ್ರಾಮದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 766 ಸಿ) ಹಾದು ಹೋಗಿದೆ. ಇದೇ ಮಾರ್ಗದಲ್ಲಿರುವ ಕೆಳಸೇತುವೆಯಲ್ಲಿ ನಿರಂತರವಾಗಿ ನೀರು ಹರಿಯುತ್ತಿದ್ದು, ಇದರಿಂದಾಗಿ ವಾಹನಗಳ ಸಂಚಾರಕ್ಕೆ ನಿತ್ಯವೂ ತೊಂದರೆ ಉಂಟಾಗುತ್ತಿದೆ.
ಹೆದ್ದಾರಿಯ ರಾಮತೀರ್ಥ ಕ್ರಾಸ್ ಬಳಿ ಕರ್ನಾಟಕ ನೀರಾವರಿ ನಿಗಮದಿಂದ ತುಂಗಾ ಮೇಲ್ದಂಡೆ ಯೋಜನೆಯಡಿ ಮುಖ್ಯ ಕಾಲುವೆ ನಿರ್ಮಿಸಲಾಗಿದೆ. ಇದೇ ಕಾಲುವೆಯ ಕೆಳಗಡೆ ವಾಹನಗಳು ಸಂಚರಿಸಲು ಕೆಳಸೇತುವೆ ನಿರ್ಮಿಸಿದ್ದು, ಸದ್ಯ ಅದು ಅವ್ಯವಸ್ಥೆಯ ಆಗರವಾಗಿದೆ. ಮುಖ್ಯಕಾಲುವೆ ನಿರ್ಮಾಣ ಆದಾಗಿನಿಂದಲೂ ಸೇತುವೆ ಕೆಳಗೆ ಆಳೆತ್ತರಕ್ಕೆ ನೀರು ನಿಂತು, ವಾಹನಗಳ ಸಂಚಾರ ದುಸ್ತರವಾಗಿದೆ.
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕೆಳಸೇತುವೆಯ ಅವ್ಯವಸ್ಥೆಯಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಯಾವುದೇ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
‘ಕೆಳಸೇತುವೆಯಲ್ಲಿ ಮಳೆ ನೀರು ನಿಂತು, ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಉರುಳಿ ಬೀಳುತ್ತಿದ್ದಾರೆ. ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಸೇತುವೆ ತುಂಬಿ ಅಲ್ಲಿಂದ ನೀರು ಬಸಿದು ಬರುತ್ತಿದ್ದರೂ ಇಲಾಖಾ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಜನರು ಆಪಾದಿಸಿದರು.
ಬೇಸಿಗೆ ಸಮಯದಲ್ಲಿ ಸಂಚರಿಸುವಾಗ ರಸ್ತೆಯಲ್ಲಿರುವ ಗುಂಡಿಗಳು ಕಾಣುತ್ತವೆ. ಆದರೆ, ಮಳೆಗಾಲದಲ್ಲಿ ನಿರಂತರವಾಗಿ ನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ ಗೋಚರಿಸುತ್ತಿಲ್ಲ.
2003ರಲ್ಲಿ ಮುಖ್ಯಕಾಲುವೆ ನಿರ್ಮಿಸಿ ಕೆಳಸೇತುವೆ ಮಾಡಲಾಗಿದೆ. ಪ್ರತಿ ವರ್ಷದ ಮಳೆಗಾಲದಲ್ಲಿಯೂ ಇದೇ ಸಮಸ್ಯೆ ಕಂಡುಬರುತ್ತದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ನಿತ್ಯವೂ ಹಿರೇಮೊರಬ, ಖಂಡೇಬಾಗೂರು, ಮಾಸೂರು, ರಟ್ಟೀಹಳ‍್ಳಿಗೆ ಜನರು ಓಡಾಡುತ್ತಾರೆ. ಕೆಳಸೇತುವೆ ಸರಿ ಇಲ್ಲದಿದ್ದರಿಂದ, ಸವಾರಿ ಕಷ್ಟಕರವಾಗುತ್ತಿದೆ’ ಎಂದು ವಾಹನ ಸವಾರರು ಅಳಲು ತೋಡಿಕೊಂಡರು.
‘ಲೋಕೋಪಯೋಗಿ, ನೀರಾವರಿ ಇಲಾಖೆಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ಶಾಶ‍್ವತ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯ ಕಾಲುವೆಯಿಂದ ನೀರು ಸೋರಿಕೆಯಾಗಿ ಕೆಳಸೇತುವೆಯಲ್ಲಿ ಸಂಗ್ರಹವಾಗುತ್ತಿದೆ. ಅಕ್ಕಪಕ್ಕದ ಜಮೀನುಗಳಿಂದಲೂ ನೀರು ಹರಿದುಬಂದು ಕೆಳಸೇತುವೆ ಸೇರುತ್ತಿದೆ. ಇದೇ ನೀರು ಚರಂಡಿಯಲ್ಲಿ ಸಮರ್ಪಕವಾಗಿ ಹರಿದು ಹೋಗದೇ ಹೆದ್ದಾರಿ ಮೇಲೆಯೇ ನಿಲ್ಲುತ್ತಿದೆ‘ ಎಂದು ಹಿರೇಮೊರಬ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
‘ಶಾಶ್ವತ ಪರಿಹಾರಕ್ಕೆ ಯೋಜನೆ’
‘ಅಕ್ಕ–ಪಕ್ಕದ ಜಮೀನಿನ ನೀರು ಕೆಳಸೇತುವೆಯ ಚರಂಡಿ ಮೂಲಕ ಹೋಗುತ್ತದೆ. ಕೆಳಸೇತುವೆಯ ಚರಂಡಿಯು ಮಣ್ಣಿನಿಂದ ತುಂಬಿದೆ. ಮಣ್ಣು ಮಿಶ್ರಿತ ನೀರು ಚರಂಡಿಗೆ ಸೇರಿ ಮುಚ್ಚಿದೆ. ಇದು ಸಮಸ್ಯೆಗೆ ಕಾರಣವಾಗಿದೆ. ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಶೀಘ್ರದಲ್ಲಿ ಅನುಷ‍್ಠಾನಗೊಳಿಸಲಾಗುವುದು’ ಎಂದು ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಎಂಜಿನಿಯರ್ ರವಿಕುಮಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮುಖ್ಯಕಾಲುವೆ ನಿರ್ಮಾಣವೇ ಅವೈಜ್ಞಾನಿಕವಾಗಿದೆ. ಸೇತುವೆ ನಿರ್ಮಿಸಿದಾಗಿನಿಂದಲೂ ಸಮಸ್ಯೆಯಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರು ಪ್ರಾಣ ಕಳೆದುಕೊಳ್ಳುವ ಮೊದಲು ಸೇತುವೆಯ ಗುಂಡಿಗಳನ್ನು ಮುಚ್ಚಬೇಕು. ಸೇತುವೆ ಕೆಳಗೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಒದಗಿಸಬೇಕು.
– ನಾಗರಾಜ ಹಿರೇಮಠ, ಮಾಸೂರು ಜನಜಾಗೃತಿ ಜನಪರ ವೇದಿಕೆಯ ಅಧ್ಯಕ್ಷ
‘ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆಯ ಸಮಸ್ಯೆ ಬಗೆಹರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಜನರ ಸಂಕಷ್ಟ ಅರಿತು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು
– ಹಾಲನಗೌಡ ಮುದಿಗೌಡ್ರ, ಹಿರೇಮೊರಬ ಗ್ರಾಮದ ನಿವಾಸಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-22-1975032716