
ಹುಲಸೂರ | ಅನುದಾನ ಕೊರತೆ: ಕೂಸಿನ ಮನೆಗಳಿಗೆ ಬೀಗ
ಹುಲಸೂರ: ದುಡಿಯುವ ಮಹಿಳೆಯರು ನಿಶ್ಚಿಂತೆಯಿಂದ ಕೆಲಸಕ್ಕೆ ತೆರಳಲು ಹಾಗೂ ಅವರ ಮಕ್ಕಳಿಗೆ ಸುರಕ್ಷಿತ ಆರೈಕೆ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ‘ಕೂಸಿನ ಮನೆ’ (ಶಿಶುಪಾಲನಾ ಕೇಂದ್ರ) ಯೋಜನೆ ಹುಲಸೂರ ತಾಲ್ಲೂಕಿನಲ್ಲಿ ಅನುದಾನದ ಕೊರತೆ ಹಾಗೂ ನಿರ್ವಹಣಾ ಸಮಸ್ಯೆಯಿಂದ ಸೊರಗಿವೆ.
ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆರಂಭಿಸಿರುವ ಏಳು ಕೂಸಿನ ಮನೆಗಳಿಗೂ ಬೀಗ ಬಿದ್ದಿದೆ. ಈ ಕೇಂದ್ರಗಳಲ್ಲಿ ಒಟ್ಟು 86 ಮಕ್ಕಳು ದಾಖಲಾಗಿದ್ದು, 50 ಗಂಡು ಹಾಗೂ 36 ಹೆಣ್ಣು ಮಕ್ಕಳು ಇದ್ದಾರೆ. ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 14 ಕೇರ್‌ಟೇಕರ್‌ಗಳನ್ನು ನಿಯೋಜಿಸಲಾಗಿದೆ. ಅವರಲ್ಲಿ ಕೆಲವರಿಗೆ ಗೌರವಧನ ಪಾವತಿಯಾಗಿದ್ದರೆ, ಇನ್ನು ಕೆಲವರಿಗೆ 3–6 ತಿಂಗಳ ಗೌರವಧನ ಬಾಕಿ ಇದೆ ಎನ್ನಲಾಗಿದೆ.
ಬೇಲೂರ–11, ಗೋರಟಾ–9, ಮುಚಳಂಬ–13, ಮೀರಖಲ–17, ಗಡಿಗೌಡಗಾಂವ್–12, ತೊಗಲೂರ–13, ಹುಲಸೂರ–14 ಮಕ್ಕಳ ದಾಖಲಾತಿ ಇದೆ. ಕೇರ್‌ಟೇಕರ್‌ಗಳಿಗೆ ದಿನಕ್ಕೆ ₹370ರಂತೆ 100 ದಿನಗಳ ಕೆಲಸ ನೀಡಲಾಗುತ್ತಿದ್ದು, ಒಬ್ಬರಿಗೆ 100 ದಿನಗಳಿಗೆ ₹37,000 ಪಾವತಿಯಾಗಬೇಕಿದೆ. ವಿಬಿ–ಜಿ ರಾಮ್ ಜಿ ಯೋಜನೆ ಜಾರಿಗೆ ಬರುವ ಮುನ್ನ ಹಾಗೂ ಬಳಿಕವೂ ಗೌರವಧನ ಪಾವತಿ ಸಮಸ್ಯೆ ಮುಂದುವರಿದಿದೆ ಎನ್ನಲಾಗಿದೆ.
ಧೂಳು ಹಿಡಿದ ಆಟಿಕೆ, ಹಾಸಿಗೆ: ಮಕ್ಕಳಿಗಾಗಿ ಕೇಂದ್ರಗಳಲ್ಲಿ ಒದಗಿಸಲಾಗಿದ್ದ ಆಟಿಕೆ, ಹಾಸಿಗೆ ಸೇರಿದಂತೆ ವಿವಿಧ ಸಾಮಗ್ರಿಗಳು ಬಳಕೆಯಾಗದೆ ಮೂಲೆ ಸೇರಿವೆ. ಹಾಸಿಗೆಗಳ ಮೇಲೆ ಧೂಳು ಕುಳಿತಿದ್ದು, ಕೇಂದ್ರಗಳು ದೀರ್ಘಕಾಲದಿಂದ ಬಳಕೆಯಾಗದೆ ಇರುವುದಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಆರೈಕೆಗಾಗಿ ಸಾರ್ವಜನಿಕ ಹಣದಲ್ಲಿ ಖರೀದಿಸಿದ ಸಾಮಗ್ರಿಗಳು ಹಾಳಾಗುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಕೋಣೆ ಮಾತ್ರವಲ್ಲ, ಸೇವೆಯೂ ಬೇಕು: ಕೂಸಿನ ಮನೆಗೆ ಕೋಣೆ ಗುರುತಿಸಿ ಬಣ್ಣ ಹಚ್ಚಿ ನಾಮಫಲಕ ಅಳವಡಿಸುವುದಷ್ಟೇ ಯೋಜನೆಯ ಉದ್ದೇಶವಲ್ಲ. ಮಕ್ಕಳಿಗೆ ನಿರಂತರ ಆರೈಕೆ, ಪೌಷ್ಟಿಕ ಆಹಾರ, ಕುಡಿಯುವ ನೀರು, ಆಟದ ಸಾಮಗ್ರಿ, ವಿಶ್ರಾಂತಿಗೆ ಹಾಸಿಗೆ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಬೇಕಿದೆ. ಆದರೆ, ಕೇಂದ್ರಗಳಿಗೆ ಬೀಗ ಹಾಕಿರುವುದರಿಂದ ಈ ಸೌಲಭ್ಯಗಳು ಮಕ್ಕಳಿಗೆ ತಲುಪುತ್ತಿಲ್ಲ.
ಕೇಂದ್ರಗಳನ್ನು ಕೂಡಲೇ ಪುನರಾರಂಭಿಸಿ, ಕೇರ್‌ಟೇಕರ್‌ಗಳ ಬಾಕಿ ಗೌರವಧನ ಪಾವತಿಸಿ, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಾಯಿಗಾಂವ ಹೋಬಳಿಯಲ್ಲೂ ಸಮಸ್ಯೆ: ಭಾಲ್ಕಿ ತಾಲ್ಲೂಕಿನ ಸಾಯಿಗಾಂವ ಹೋಬಳಿಯ ಮೆಹಕರ, ಸಾಯಿಗಾಂವ, ಅಟ್ಟರಗಾ, ಹಲಸಿ ತುಗಾಂವ, ಅಳವಾಯಿ ಹಾಗೂ ವಾಂಝರಖೇಡಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೂ ಕೂಸಿನ ಮನೆಗಳು ಕಾರ್ಯನಿರ್ವಹಿಸದೆ ಬಂದ್ ಆಗಿವೆ ಎನ್ನಲಾಗಿದೆ.
‘ಕೂಸಿನ ಮನೆ ಪುನಃ ಆರಂಭಿಸಲಿ’
‘ಕೂಸಿನ ಮನೆ’ಗಳು ಅನುದಾನದ ಕೊರತೆ ಹಾಗೂ ಗೌರವಧನ ಪಾವತಿ ಸಮಸ್ಯೆಯಿಂದ ಸ್ಥಗಿತಗೊಂಡಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ. ಬಾಕಿ ಇರುವ ಕೇರ್‌ಟೇಕರ್‌ಗಳ ಗೌರವಧನ ಪಾವತಿಸಿ, ಕೇಂದ್ರಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಬಳಕೆಯಾಗದೆ ಧೂಳು ಹಿಡಿದಿರುವ ಆಟಿಕೆ, ಹಾಸಿಗೆ ಸೇರಿದಂತೆ ಸಾಮಗ್ರಿಗಳ ಪರಿಶೀಲನೆ ನಡೆಸಿ, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಬಂದ್ ಆಗಿರುವ ಎಲ್ಲ ಕೇಂದ್ರಗಳನ್ನು ತುರ್ತಾಗಿ ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-33-1195678324