
ಉತ್ತರ ಕನ್ನಡ | ಅಲ್ಪ ಮಳೆಗೆ 636 ಕಿ.ಮೀ ರಸ್ತೆ ಹಾಳು
ಕಾರವಾರ: ಮುಂಗಾರು ಅಬ್ಬರಿಸುತ್ತಿದ್ದ ಆರಂಭಿಕ ಮೂರು ತಿಂಗಳ ಅವಧಿಯಲ್ಲಿ ವಾಡಿಕೆಗಿಂತ ಶೇ 19ರಷ್ಟು ಕಡಿಮೆ ಮಳೆಯಾಗಿದೆ. ಆದರೂ, ಜಿಲ್ಲೆಯಲ್ಲಿ ಮಳೆಗೆ ರಸ್ತೆ ಹಾಳಾಗುವ ಪ್ರಮಾಣ ಇಳಿಕೆಯಾಗಿಲ್ಲ. ಮುಂಗಾರು ಅವಧಿಯಲ್ಲಿ 636 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹಾಳಾಗಿದೆ.
ಪ್ರತಿ ಬಾರಿಯೂ ಮುಂಗಾರು ಅಬ್ಬರಕ್ಕೆ ಜಿಲ್ಲೆಯಲ್ಲಿ ನೂರಾರು ಕಿ.ಮೀ ರಸ್ತೆ ಹಾಳಾಗುವುದು ಸಹಜವಾಗಿದೆ. ಕರಾವಳಿ, ಮಲೆನಾಡು ಭಾಗದ ಗ್ರಾಮಿಣ ಪ್ರದೇಶಗಳಲ್ಲಿ ಪ್ರಮಾಣ ಹೆಚ್ಚಿದೆ. ಈ ಬಾರಿಯೂ ಮಳೆಗೆ ಗ್ರಾಮೀಣ ರಸ್ತೆಗಳೇ ಹೆಚ್ಚು ಪ್ರಮಾಣದಲ್ಲಿ ಹಾಳಾಗಿವೆ ಎಂಬುದಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಜೂನ್ 1ರಿಂದ ಆ.24ರ ಅವಧಿಯಲ್ಲಿ ಮಳೆಯ ಕಾರಣದಿಂದ 382.80 ಕಿ.ಮೀ ಉದ್ದದಷ್ಟು ಗ್ರಾಮಿಣ ರಸ್ತೆ, 142.57 ಕಿ.ಮೀ ಜಿಲ್ಲಾ ರಸ್ತೆ, 110.70 ಕಿ.ಮೀ ರಾಜ್ಯ ಹೆದ್ದಾರಿ ಹಾಳಾಗಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ 10 ಸೇತುವೆಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ವ್ಯಾಪ್ತಿಗೆ ಒಳಪಡುವ 47 ಸೇತುವೆಗಳು ಹಾನಿಗೀಡಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಳೆ ಗಾಳಿಯಿಂದ 91 ಶಾಲೆಗಳು, 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 32 ಅಂಗನವಾಡಿ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಸಣ್ಣ ನೀರಾವರಿ ಇಲಾಖೆ ನಿರ್ವಹಿಸುವ 42 ಟ್ಯಾಂಕ್‌ಗಳಿಗೂ ಹಾನಿಯಾಗಿದೆ ಎಂದೂ ಮಾಹಿತಿ ನೀಡಿದೆ.
ಮಳೆಯಿಂದಾಗಿ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ, ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಹೊಂಡಗಳು ಬಿದ್ದಿವೆ. ಆದರೆ, ಹಾನಿ ವರದಿಯಲ್ಲಿನ ಅವುಗಳ ಕುರಿತಾಗಿ ಜಿಲ್ಲಾಡಳಿತ ಉಲ್ಲೇಖಿಸಿಲ್ಲದಿರುವುದು ಅಚ್ಚರಿ ಮೂಡಿಸಿದೆ.
‘ಮಳೆ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಬೇಗನೆ ಹಾಳಾಗುತ್ತವೆ. ಗುಡ್ಡಗಾಡು ಜಿಲ್ಲೆಯಾಗಿರುವ ಕಾರಣದಿಂದ ಸರ್ಕಾರ ಗ್ರಾಮಿಣ ಪ್ರದೇಶಗಳಿಗೆ ಗುಣಮಟ್ಟದ ರಸ್ತೆ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವ ವಿಶೇಷ ಪ್ಯಾಕೇಜ್ ಘೋಷಿಸಬೇಕಿತ್ತು. ಈ ಬಾರಿ ಅಲ್ಪ ಮಳೆಗೆ ಅತಿ ಹೆಚ್ಚು ರಸ್ತೆಗಳು ಹಾಳಾಗಿವೆ. ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸಿಕೊಳ್ಳುವ ಬದಲು, ಗುಣಮಟ್ಟದ ರಸ್ತೆಗೆ ಅನುದಾನ ಪಡೆಯಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರಾಜೀವ ನಾಯ್ಕ ಹೇಳಿದರು
ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು
ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-20-1479774817