ಮೇಕೆದಾಟು ಜಾರಿಗೆ ಯಾರಪ್ಪಣೆಯೂ ಬೇಕಿಲ್ಲ: ನೀರಾವರಿ ತಜ್ಞ ಎಸ್‌.ರಾಜಾ ರಾವ್‌

ಮೇಕೆದಾಟು ಜಾರಿಗೆ ಯಾರಪ್ಪಣೆಯೂ ಬೇಕಿಲ್ಲ: ನೀರಾವರಿ ತಜ್ಞ ಎಸ್‌.ರಾಜಾ ರಾವ್‌

ಮೇಕೆದಾಟು ಜಾರಿಗೆ ಯಾರಪ್ಪಣೆಯೂ ಬೇಕಿಲ್ಲ: ನೀರಾವರಿ ತಜ್ಞ ಎಸ್‌.ರಾಜಾ ರಾವ್‌

ಬೆಂಗಳೂರು: ‘ಮಹಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಜಾರಿಗೆ ಯಾರಪ್ಪಣೆಯೂ ಬೇಕಾಗಿಲ್ಲ’ ಎಂದು  ಹಿರಿಯ ನೀರಾವರಿ ತಜ್ಞ ಕ್ಯಾಪ್ಟನ್‌ ಎಸ್‌.ರಾಜಾ ರಾವ್‌ ಅವರು ಬಲವಾಗಿ ಪ್ರತಿಪಾದಿಸಿದರು.

‘ಜಲವಿವಾದ ಪರಿಹಾರ ನ್ಯಾಯಮಂಡಳಿಗಳು ನಿರ್ದಿಷ್ಟ ಅವಧಿಯಲ್ಲೇ ತೀರ್ಪು ನೀಡಬೇಕು ಎಂಬುದನ್ನು ಸರ್ಕಾರಿಯಾ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಯಾದರೂ ಕರ್ನಾಟಕದ ಪಾಲಿಗೆ ಆ ನಿಯಮ ಈತನಕ ಪಾಲನೆಯಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಬೆಂಗಳೂರು ವಕೀಲರ ಸಂಘ’ದ ಆಶ್ರಯದಲ್ಲಿ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ, ‘ಕಾವೇರಿ ಜಲವಿವಾದ ಸಂಕಷ್ಟ ಸೂತ್ರ ಅಂದು–ಇಂದು’ ಎಂಬ ವಿಷಯದ ಕುರಿತಂತೆ ಅವರು ಮಾತನಾಡಿದರು.

‘ತನ್ನ ಪಾಲಿನ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕರ್ನಾಟಕ ಸ್ವತಂತ್ರವಾಗಿದೆ ಎಂಬುದನ್ನು ಬ್ರಿಟಿಷ್ ಕಾಲದ 1924ರ ಒಪ್ಪಂದಗಳು ಅತ್ಯಂತ ಸ್ಫುಟವಾಗಿ ದಾಖಲೆಗಳಲ್ಲಿರಿಸಿವೆ. ಆದ್ದರಿಂದ, ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತಂದಲ್ಲಿ ಕಾವೇರಿಯ ನದಿ ಪಾತ್ರದ ರೈತರು ಹಾಗೂ ಜನರ ಸಂಕಷ್ಟಕ್ಕೆ ಒಂದಷ್ಟು ಸಮಾಧಾನಕರ ಪರಿಹಾರ ಖಂಡಿತಾ ಲಭ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ರಾಜ್ಯಕ್ಕೆ ಸಂಬಂಧಿಸಿದ ಜಲವಿವಾದ ಪರಿಹಾರಕ್ಕೆ ನ್ಯಾಯಮಂಡಳಿಗಳ ವಿಚಾರಣೆ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಬೆಳೆಯುತ್ತಿರುವ ಬೆಂಗಳೂರಿಗೆ ಕನ್ನಂಬಾಡಿ ನೀರುಣಿಸುವ ಬಾನಿಯಾಗಿರುವುದು ವಿಪರ್ಯಾಸ. ಯಾಕೆಂದರೆ, ಕೆಆರ್‌ಎಸ್ ನಿರ್ಮಾಣವಾಗಿದ್ದು ಆ ಪ್ರದೇಶದ ಕೇವಲ ಕೃಷಿ ಚಟುವಟಿಕೆಗೆ ಮಾತ್ರವೇ ಸೀಮಿತವಾಗಿತ್ತು ಎಂಬುದನ್ನು ಮರೆಯಬಾರದು’ ಎಂದರು. 

‘ಕಾವೇರಿ, ಕೃಷ್ಣ, ಮಹದಾಯಿ ಜಲ ವಿವಾದಗಳಲ್ಲಿ ಕರ್ನಾಟಕದ ಜನತೆ ನಿರಂತರವಾಗಿ ಸಂಕಷ್ಟ ಅನುಭವಿಸುತ್ತಲೇ ಮುನ್ನಡೆದಿದ್ದಾರೆ. ರಾಜ್ಯದ ಆಳುವ ಸರ್ಕಾರಗಳು ಸಮಸ್ಯೆ ಭುಗಿಲೆದ್ದಾಗ ಮಾತ್ರವೇ ಮೌನ ಮುರಿಯುತ್ತವೆ. ಉಳಿದ ಸಮಯದಲ್ಲಿ ಮೈಮರೆತುಬಿಡುತ್ತವೆ. ಈ ನಿಟ್ಟಿನಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಎಲ್ಲ ಸರ್ಕಾರಗಳು ನಡೆದುಕೊಂಡು ಬಂದಿರುವ ರೀತಿಯನ್ನು ನೋಡಿ ನಾವು ಕಲಿಯಬೇಕಿರುವುದು ಸಾಕಷ್ಟಿದೆ’ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಸಂಘದ ಪದಾಧಿಕಾರಿಗಳು, ಹಿರಿ–ಕಿರಿಯ ವಕೀಲರು ಉಪಸ್ಥಿತರಿದ್ದರು.

‘ನಿವೃತ್ತ ನ್ಯಾಯಮೂರ್ತಿಗಳ ಆಶ್ರಯ ಕೇಂದ್ರ’

‘ಜಲ ವಿವಾದ ಮಧ್ಯಸ್ಥಿಕೆಗೆ ಮತ್ತು ವ್ಯಾಜ್ಯಗಳ ಪರಿಹಾರಕ್ಕೆ ರೂಪಿಸಲಾಗಿರುವ ನ್ಯಾಯಮಂಡಳಿಗಳು ನಿವೃತ್ತ ನ್ಯಾಯಮೂರ್ತಿಗಳ ಪಾಲಿಗೆ ಆಶ್ರಯ ತಾಣಗಳಂತಾಗಿವೆ’ ಎಂದು ಹೈಕೋರ್ಟ್‌ನ ಹಿರಿಯ ವಕೀಲ ಎಂ.ಶಿವಪ್ರಕಾಶ್‌ ಕಿಡಿ ಕಾರಿದರು. ‘ಸುಪ್ರೀಂ ಕೋರ್ಟ್‌ ತನ್ನ ಮೇಲಿನ ಭಾರವನ್ನು ನ್ಯಾಯಮಂಡಳಿಗಳ ಮೇಲೆ ವರ್ಗಾಯಿಸಿದೆ. ಪರಿಣಾಮ ನ್ಯಾಯಮಂಡಳಿಗಳಲ್ಲಿನ ತಾಂತ್ರಿಕ ಜ್ಞಾನದ ಕೊರತೆಯಿಂದ ವಿವಾದಗಳನ್ನು ಪರಿಹರಿಸಲು ಸುದೀರ್ಘ ಸಮಯ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಗಮನ ಹರಿಸುವಂತಾಗಬೇಕು’ ಎಂದು ಒತ್ತಾಯಿಸಿದರು.

ಪ್ರಕೃತಿಗೆ ಕಾನೂನು ಬರೆಯಲು ಹೊರಟಿದ್ದೇವೆ...

‘ನ್ಯಾಯಮಂಡಳಿ–ಪ್ರಾಧಿಕಾರ ರಚನೆ ಆಗುವತನಕ ಯಾವುದೇ ಬಿಕ್ಕಟ್ಟು ಇಲ್ಲದ ಕಾವೇರಿ ಜಲ ಹಂಚಿಕೆ ಇವತ್ತು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ಬಿದ್ದು ಹರಿದು ಹೋಗುವ ನೀರಿನ ಮರುಬಳಕೆಯಲ್ಲಿ ಸೋತಿರುವ ನಾವಿಂದು ಪ್ರಕೃತಿಗೆ ಕಾನೂನಿನ ಭಾಷ್ಯ ಬರೆಯಲು ಹೊರಟಿದ್ದೇವೆ’ ಎಂದು ಹಿರಿಯ ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಬಣ್ಣಿಸಿದರು. ಮೆಟ್ಟೂರು ಜಲಾಶಯದ ಸಾಮರ್ಥ್ಯ 93 ಟಿಎಂಸಿ ಅಡಿಯಷ್ಟು ಇದ್ದರೆ ಕನ್ನಂಬಾಡಿ ಹೇಮಾವತಿ ಹಾರಂಗಿ ಮತ್ತು ಕಬಿನಿಯ ನಾಲ್ಕೂ ಜಲಾಶಯಗಳನ್ನು ಸೇರಿಸಿದರೂ ಇಷ್ಟು ಪ್ರಮಾಣದಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಕರ್ನಾಟಕಕ್ಕೆ ಇಲ್ಲ. ಆದ್ದರಿಂದ ಕೂಡಲೇ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ಆಗಬೇಕು. ಕೆಆರ್‌ಎಸ್‌ ಜಲಾಶಯದ ನೀರು ಕೇವಲ ಕೃಷಿಗೆ ಬಳಕೆಯಾಗುವಂತೆ ನಿರ್ದಿಷ್ಟ ಕಾರ್ಯಕ್ರಮ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬೆಳೆಯುತ್ತಿರುವ ಬೆಂಗಳೂರು ಬಡಾವಣೆಗಳು...

‘ಕಾವೇರಿಯ ಜಲಾಶಯ ಆಶ್ರಿತ ಮಂಡ್ಯ ಭಾಗದಲ್ಲಿ 18 ಲಕ್ಷ ಎಕರೆ ಕೃಷಿ ಜಮೀನು ಹಸಿರಾಗಬೇಕು. ಆದರೆ ಇವತ್ತು ಕೇವಲ 8 ಲಕ್ಷ ಎಕರೆಗೂ ನೀರುಣಿಸಲು ಆಗುತ್ತಿಲ್ಲ’ ಎಂದು ‘ಮಂಡ್ಯ ಕೃಷಿಕರ ಹಿತರಕ್ಷಣಾ ಸಮಿತಿ’ ಹಿರಿಯ ಉಪಾಧ್ಯಕ್ಷರೂ ಆದ ರೈತ ಹೋರಾಟಗಾರ ಕೆ.ಬೋರಯ್ಯ ಆತಂಕ ವ್ಯಕ್ತಪಡಿಸಿದರು. ‘ಮೈಸೂರು ಮಹಾರಾಜರು ಕೆರೆಗಳ ಉಳಿವಿಗೆ ರೂಪಿಸಿದ್ದ ಕಾರ್ಯಕ್ರಮಗಳನ್ನು ನಾವಿಂದು ಮರೆತಿದ್ದೇವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ವಿಶ್ವೇಶ್ವರಯ್ಯ ಶಿವರಾಮ ಕಾರಂತ ಕೆಂಪೇಗೌಡ... ಬಡಾವಣೆಗಳಂತಹ ಬೃಹತ್‌ ವಸತಿ ಯೋಜನೆಗಳ ಪರಿಣಾಮ ಇವೆಲ್ಲವುಗಳ ಕುಡಿಯುವ ನೀರಿಗೆ ಕಾವೇರಿ ಜಲಾಶಯದ ನೀರನ್ನೇ ಆಶ್ರಯಿಸುವಂತಾಗಿದೆ ಮಾತ್ರವಲ್ಲ ಮಂಡ್ಯ–ಬೆಂಗಳೂರು ನಿವಾಸಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶ ಎದುರಾಗಿದೆ’ ಎಂದರು.

Post a Comment

If u have any queries, Please let us know

Previous Post Next Post