
ರೇಣುಕಸ್ವಾಮಿ ಕೊಲೆ ಪ್ರಕರಣ: ‘ಮಾಫಿ ಸಾಕ್ಷಿ’ಗೆ ಏಕೆ ಅಷ್ಟು ಮಹತ್ವ?
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ. ಆರೋಪಿ ಪ್ರದೂಷ್ ರಾವ್ ಅವರು ತಮ್ಮನ್ನು ‘ಮಾಫಿ ಸಾಕ್ಷಿ’ ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು, ಆದೇಶವನ್ನು ಕಾಯ್ದಿರಿಸಿದ್ದಾರೆ.
ಪ್ರದೂಷ್ ರಾವ್ ಅವರು ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದಾರೆ. ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಮುಂದಿನ ವಿಚಾರಣೆಯನ್ನು ಆಗಸ್ಟ್ 10ರಂದು ಪೂರ್ಣಗೊಳಿಸಿ ಅಂತಿಮ ಆದೇಶ ಪ್ರಕಟಿಸುವುದಾಗಿ ಗುರುವಾರ ಪ್ರಕಟಿಸಿದ್ದಾರೆ.
ಆರೋಪಿಗಳ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ ನಟ ದರ್ಶನ್, ಅವರ ಸ್ನೇಹಿತೆ ಪವಿತ್ರಾಗೌಡ, ದರ್ಶನ್ ವ್ಯವಸ್ಥಾಪಕ ಆರ್.ನಾಗರಾಜ್, ಕಾರು ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್, ಚಿತ್ರದುರ್ಗದ ಆಟೊ ಚಾಲಕರಾದ ಅನುಕುಮಾರ್ ಅಲಿಯಾಸ್ ‘ಅನು’, ಜಗದೀಶ್ ಅಲಿಯಾಸ್ ‘ಜಗ್ಗ’ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಮಾಫಿಗೆ ಷರತ್ತು
ಪ್ರದೂಷ್ ಪರವಾಗಿ ವಕೀಲರು ಎರಡು ದಿನಗಳ ಹಿಂದಷ್ಟೇ ನ್ಯಾಯಾಲಯಕ್ಕೆ ‘ಮಾಫಿ ಸಾಕ್ಷಿ’ಯ ಅರ್ಜಿ ಸಲ್ಲಿಸಿದ್ದಾರೆ. ಸತ್ಯಾಂಶವನ್ನು ಹೇಳುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದಲ್ಲಿ 10ನೇ ಆರೋಪಿ ವಿನಯ್ ಹಾಗೂ 8ನೇ ಆರೋಪಿ ರವಿಶಂಕರ್ ಅವರೂ ‘ಮಾಫಿ ಸಾಕ್ಷಿ’ಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ಪ್ರದೂಷ್ ಪರ ವಕೀಲರು ನ್ಯಾಯಾಲಯದಲ್ಲಿ ಕೋರಿದ್ದರು.
ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಕೆಲವು ಷರತ್ತುಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್ ಪರವಾಗಿ ‘ಮಾಫಿ ಸಾಕ್ಷಿ’ಗೆ ಒಪ್ಪಿಗೆ ಸೂಚಿಸಿ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ. ಇದಕ್ಕೆ ದರ್ಶನ್ ಪರ ವಕೀಲ ಹಸ್ಮತ್ ಪಾಷ ಆಕ್ಷೇಪಿಸಿದ್ದಾರೆ.
ಅಂದಹಾಗೆ, ಇಂತಹ ಅಪರಾಧ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ‘ಮಾಫಿ ಸಾಕ್ಷಿ’ಗೆ ತನ್ನದೇ ಮಹತ್ವವಿದೆ. ಅಪರಾಧದಲ್ಲಿ ನೇರವಾಗಿ ಭಾಗಿಯಾದ ವ್ಯಕ್ತಿಯೇ, ತನಗೆ ಕ್ಷಮೆ ನೀಡುವ ಷರತ್ತಿನ ಮೇಲೆ ಕೋರ್ಟ್‌ನಲ್ಲಿ ಸತ್ಯ ಹೇಳಲು ಒಪ್ಪಿಕೊಳ್ಳುವ ಸಾಕ್ಷಿಗೆ ಮಾಫಿ ಸಾಕ್ಷಿ ಎನ್ನಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಆತ/ಆಕೆ ನ್ಯಾಯಾಲಯ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹಾಗಾಗಿ, ಇಡೀ ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ‘ಮಾಫಿ ಸಾಕ್ಷಿ’ಗೆ ಇದೆ.
ಮಾಫಿ ನೀಡುವ ಅಧಿಕಾರ ಇರುವುದು ಯಾರಿಗೆ?
ಮ್ಯಾಜಿಸ್ಟ್ರೇಟ್ ಅಥವಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು, ಮಾಫಿ ನೀಡುವ ಅಧಿಕಾರ ಹೊಂದಿರುತ್ತಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಮಾಫಿ ಮಾಡುವ ಹಾಗೂ ಮಾಫಿ ರದ್ದು ಮಾಡುವ ಅಧಿಕಾರದ ಕುರಿತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 343, 344 ಹಾಗೂ 345ರ ಅಡಿಯಲ್ಲಿ ವಿವರಿಸಲಾಗಿದೆ.
ಮಾಫಿ ಸಾಕ್ಷಿ ಮಹತ್ವ ಏಕೆ?
ಭಯೋತ್ಪಾದನೆ, ಕೊಲೆ ಸಂಚು, ಭಾರಿ ಹಗರಣಗಳಂತಹ ಪ್ರಕರಣಗಳಲ್ಲಿ ಹೊರಗಿನಿಂದ ಪುರಾವೆಗಳನ್ನು ಸಂಗ್ರಹಿಸುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ, ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೇ ಮಾಫಿ ಸಾಕ್ಷಿಯಾಗಿ ಮುಂದೆ ಬಂದರೆ, ಇಡೀ ಪ್ರಕರಣವನ್ನು ಬೇಧಿಸಲು ನೆರವಾಗುತ್ತದೆ.
ಹಾಗೆಯೇ, ಪ್ರತ್ಯಕ್ಷದರ್ಶಿಗಳು ಇಲ್ಲದ ಪ್ರಕರಣಗಳಲ್ಲಿಯೂ ಮಾಫಿ ಸಾಕ್ಷಿ ಮುಖ್ಯವಾಗುತ್ತದೆ. ಕೃತ್ಯದ ಮಾಸ್ಟರ್‌ಮೈಂಡ್ ಯಾರು, ಹಣಕಾಸಿನ ವ್ಯವಹಾರ, ಶಸ್ತ್ರಾಸ್ತ್ರ ಹಗರಣವನ್ನು ಬಯಲು ಮಾಡಲು ನೆರವಾಗುತ್ತದೆ. ತನಿಖೆಗೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಬಹುದಾದ ಪ್ರಕರಣಗಳೂ ‘ಮಾಫಿ ಸಾಕ್ಷಿ’ ಹೇಳಿಕೆ ಆಧಾರದಲ್ಲಿ ತ್ವರಿತವಾಗಿ ಇತ್ಯರ್ಥಗೊಳ್ಳುತ್ತವೆ.
ಸುಳ್ಳು ಹೇಳುವ ಸಾಧ್ಯತೆ
ಆರೋಪಿಯು ತಾನು ಪ್ರಕರಣದಿಂದ ಪಾರಾಗುವ ಸಲುವಾಗಿ ಸುಳ್ಳು ಹೇಳುವ ಸಾಧ್ಯತೆ ಇರುತ್ತದೆ. ಮಾಫಿ ಸಾಕ್ಷಿ ನೀಡುವ ಪ್ರತಿಯೊಂದು ಹೇಳಿಕೆಗೂ ಸಾಕ್ಷ್ಯಗಳು ಲಭ್ಯವಿರಬೇಕು. ಇಲ್ಲದಿದ್ದರೆ, ಅಷ್ಟು ಸುಲಭವಾಗಿ ಪ್ರಕರಣದಿಂದ ಪಾರಾಗಲು, ತನಿಖೆ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನ್ಯಾಯಾಲಯದ ಎದುರು ದುರುದ್ದೇಶದಿಂದ ಸುಳ್ಳು ಹೇಳಿದರೆ ಅಥವಾ ಸಹಕಾರ ನೀಡದೇ ಇದ್ದರೆ, ‘ಮಾಫಿ’ ರದ್ದಾಗಿ ಮತ್ತೆ ಕೇಸ್ ಬೀಳಬಹುದು.
ಮಾಫಿ ಸಾಕ್ಷಿಯೇ ಫೈನಲ್ ಅಲ್ಲ
ಮಾಫಿ ಸಾಕ್ಷಿದಾರನು ನ್ಯಾಯಾಲಯದ ಎದುರು ನೀಡುವ ಹೇಳಿಕೆಗಳೇ ಶಿಕ್ಷೆಯನ್ನು ನಿರ್ಣಯಿಸಲು ಅಂತಿಮವಲ್ಲ. ಅವರು ನೀಡುವ ಹೇಳಿಕೆಗಳಿಗೆ ಪೂರಕ ಸಾಕ್ಷ್ಯಗಳು ಬೇಕಾಗುತ್ತವೆ. ಮಾಫಿ ಸಾಕ್ಷಿಯ ಹೇಳಿಕೆಗಳನ್ನು ಹೇಗೆ ಪರಿಗಣಿಸಬೇಕು ಎಂಬುದಕ್ಕೆ ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ (ಬಿಎಸ್‌ಎ) ಪ್ರತ್ಯೇಕ ನಿಯಮಗಳಿವೆ.