
ಮುಳಿಯಾರು ಪಂಚಾಯಿತಿ: ಅಹವಾಲು ಸಹಿತ ಬರುವ ಜನರಿಗೆ ಚಹಾ ನೀಡಿ ಸ್ವಾಗತ
ಕಾಸರಗೋಡು: ಜನಪರ ನೀತಿಯನ್ನು ಸದೃಢಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು, ಸ್ಥಳೀಯ ಮಟ್ಟದಲ್ಲೇ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮುಳಿಯಾರು ಗ್ರಾಮ ಪಂಚಾಯಿತಿ ಒಂದು ಹೆಜ್ಜೆ ಮುಂದಿರಿಸಿ ಅಹವಾಲು ಸಹಿತ ಬರುವ ಜನರಿಗೆ ಚಹಾ ನೀಡಿ ಸತ್ಕರಿಸಿ ಅವರ ಅಹವಾಲು ಆಲಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂಥ ಯೋಜನೆ ಜಾರಿಗೊಳ್ಳುತ್ತಿದೆ. ವಿವಿಧ ಕೆಲಸಗಳಿಗೆ ಬರುವ ಎಲ್ಲರನ್ನೂ ‘ಬನ್ನಿ, ಕುಳಿತುಕೊಳ್ಳಿ. ಚಹಾ ಕುಡಿಯಿರಿ... ನಮ್ಮಿಂದೇನಾಗಬೇಕು ಹೇಳಿ...’ ಎನ್ನುತ್ತಾ ಸ್ವಾಗತಿಸಲಾಗುತ್ತಿದೆ. ಅಹವಾಲು ನೀಡಲು ಸರದಿ ಪ್ರಕಾರ ಬರಬೇಕಿರುವ ಅವಧಿಯನ್ನು ತಿಳಿಸಿ, ಮಾರ್ಗದರ್ಶನ ಮಾಡುತ್ತಿದೆ. ವಯೋವೃದ್ಧರಿಗೆ, ಮಹಿಳೆ ಯರಿಗೆ ಮತ್ತು ಅಂಗವಿಕಲರಿಗೂ ಈ ಯೋಜನೆ ಪ್ರಯೋಜನಕಾರಿಯಾಗಿದೆ.
ಈ ನಿಟ್ಟಿನಲ್ಲಿ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಲಾದ ‘ಟಿ ವೆಂಡಿಂಗ್’ ಯಂತ್ರದ ಬಳಕೆಗೆ ಪಂಚಾಯಿತಿ ಅಧ್ಯಕ್ಷ ಕೆ.ಬಿ.ಮುಹಮ್ಮದ್ ಕುಞಿ ಚಾಲನೆ ನೀಡಿದರು. ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-29-872610959