
ಎಐ ಅಳವಡಿಸಿದ ಮೊಬೈಲ್ ಫೋನ್‌ನಿಂದ ಬಾಯಿ ಕ್ಯಾನ್ಸರ್ ಪತ್ತೆ; ಐಐಎಸ್‌ಸಿ ಸಂಶೋಧನೆ
ಬೆಂಗಳೂರು: ಬಾಯಿಯ ಕ್ಯಾನ್ಸರ್ ಪತ್ತೆ ಹಚ್ಚಲು ಭಾರತೀಯ ವಿಜ್ಞಾನ ಸಂಸ್ಥೆಯು ಮೊಬೈಲ್ ಫೋನ್ ಆಧಾರಿತ, ಕೃತಕ ಬುದ್ಧಿಮತ್ತೆ ಹಾಗೂ ವೈಟ್–ಲೈಟ್ ತಂತ್ರಜ್ಞಾನವನ್ನು ಒಳಗೊಂಡ ಸಾಧನವನ್ನು ಸಂಶೋಧಿಸಿದೆ.
‘ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೆಯೇ ಚಿಕಿತ್ಸಾ ಸ್ಥಳದಲ್ಲೇ ತಕ್ಷಣದ ಫಲಿತಾಂಶಗಳನ್ನು ಒದಗಿಸುವ ಜಗತ್ತಿನ ಏಕೈಕ ಸಾಧನ ಇದು’ ಎಂದು ಸಂಸ್ಥೆ ಪ್ರತಿಪಾದಿಸಿದೆ. ಸಾಧನವನ್ನು ಪರೀಕ್ಷಾರ್ಥವಾಗಿ ಬಳಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪರವಾನಗಿಯೂ ದೊರೆತಿದ್ದು, ಮಾರುಕಟ್ಟೆ ಪರವಾನಗಿ ಪಡೆಯುವ ಪ್ರಕ್ರಿಯೆ ನಡೆದಿದೆ.
ಸಾಧನಕ್ಕೆ ‘ಆರೋಗ್ಯ ಆರೋಹಣ’ ಎಂದು ಹೆಸರಿಡಲಾಗಿದ್ದು, ಬಾಯಿಯ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಆಗಬಲ್ಲ ಬಾಯಿಯ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಬಳಸಬಹುದು. ಸಾಧನ ರೂಪಿಸಲು ಸಂಸ್ಥೆಯು ಎರಡು ವರ್ಷ ಸಂಶೋಧನೆ ನಡೆಸಿದೆ. ದೇಶದ ಒಂಬತ್ತು ಸ್ಥಳಗಳಲ್ಲಿ ಈ ಸಾಧನವನ್ನು ಪರೀಕ್ಷಾರ್ಥವಾಗಿ ಬಳಸಿದ ಬಳಿಕ, ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ದೃಢೀಕರಿಸಿವೆ.
ವಿಜ್ಞಾನ ಸಂಸ್ಥೆಯ ‘ಎಐ ಸೆಂಟರ್ ಆಫ್ ಎಕ್ಸಲೆನ್ಸ್‌ನ- ತನುಹ (ಟ್ರಾನ್ಸ್‌ಲೇಶನಲ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಫಾರ್ ನೆಟ್‌ವರ್ಕ್ಡ್ ಯೂನಿವರ್ಸಲ್ ಹೆಲ್ತ್ ಕೇರ್) ಈ ಮಹತ್ವದ ಪ್ರಯತ್ನಕ್ಕೆ, ಸಂಸ್ಥೆಯ ಆವರಣದಲ್ಲೇ ಕಾರ್ಯನಿರ್ವಹಿಸುತ್ತಿರುವ ಆರ್ಟ್ ಪಾರ್ಕ್ ಸಂಶೋಧನಾ ಫೌಂಡೇಶನ್ ಮತ್ತು ಎಐ ಕ್ಷೇತ್ರದಲ್ಲಿ ಪ್ರಸಿದ್ಧವಾದ ಟ್ರೀವಿಯಸ್ ಸಂಸ್ಥೆಯು ಸಹಯೋಗ ನೀಡಿವೆ.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಐ ಹಬ್ ಫಾರ್ ರೊಬೋಟಿಕ್ಸ್ ಆ್ಯಂಡ್ ಆಟಾನಮಸ್ ಸಿಸ್ಟಮ್ಸ್ ಇನ್ನೋವೇಶನ್ ಫೌಂಡೇಶನ್, ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್ ಮತ್ತು ಕೋಟಕ್–ಐಐಎಸ್‌ಸಿ ಎಐಎಂಲ್ ಸೆಂಟರ್‌ನಿಂದ ಸಂಶೋಧನೆಗೆ ಆರ್ಥಿಕ ನೆರವು ನೀಡಲಾಗಿದೆ. ಜಮ್ಮುವಿನ ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯೂನಿಟ್ ಕೂಡ ಬೆಂಬಲ ನೀಡಿದೆ.
ಈ ಉಪಕರಣದ ಅಭಿವೃದ್ಧಿಯಲ್ಲಿ ಬಯೊಕಾನ್ ಫೌಂಡೇಶನ್, ಕೆಎಲ್ಇಎಸ್‌ನ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬಿಟ್ಸ್ ಪಿಲಾನಿ ಗೋವಾ ಕ್ಯಾಂಪಸ್ ಪ್ರಮುಖ ಪಾಲುದಾರಿಕೆ ವಹಿಸಿವೆ.
‘ಮೊದಲ ಹಂತದಲ್ಲಿ ಎಐ ಇಲ್ಲದೆ, ಡಿಜಿಟಲ್ ದಾಖಲೆಗಳನ್ನು ಆಧರಿಸಿ ಎರಡು ವರ್ಷಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಎರಡನೇ ಹಂತದಲ್ಲಿ, ಗೋವಾ ಮತ್ತು ತಂಜಾವೂರು ಜಿಲ್ಲೆಗಳ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಸಾಧನವನ್ನು ಅಳವಡಿಸಲಾಗಿದ್ದು, ಎರಡು ತಿಂಗಳಲ್ಲಿ 1,200ಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಗಿದೆ’ ಎಂದು ವಿಜ್ಞಾನ ಸಂಸ್ಥೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಭಾಗಗಳಲ್ಲಿ ತಲಾ ಒಂದರಂತೆ, ಒಟ್ಟು ಐದು ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶವಿದೆ. ಕಾರ್ಯಸಾಧ್ಯವೆಂದು ಕಂಡುಬಂದರೆ, ‘ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ’ದೊಂದಿಗೆ ಸಂಯೋಜಿಸಲಾಗುವುದು ಮತ್ತು ಡಿಜಿಟಲ್ ಸಾರ್ವಜನಿಕ ಸಂಪನ್ಮೂಲವಾಗಿ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.