ಪಾರ್ಕಿಂಗ್‌ ಶುಲ್ಕ ನೀವೇನು ಹೇಳುತ್ತೀರಿ?: ಅರ್ಥವಿಲ್ಲದ ಕಾನೂನು ಬೇಡ

ಪಾರ್ಕಿಂಗ್‌ ಶುಲ್ಕ ನೀವೇನು ಹೇಳುತ್ತೀರಿ?: ಅರ್ಥವಿಲ್ಲದ ಕಾನೂನು ಬೇಡ

ಪಾರ್ಕಿಂಗ್‌ ಶುಲ್ಕ ನೀವೇನು ಹೇಳುತ್ತೀರಿ?: ಅರ್ಥವಿಲ್ಲದ ಕಾನೂನು ಬೇಡ

ಯೋಜನೆ, ಯೋಚನೆ ಸರಿ ಇಲ್ಲ

ಬೇರೆಯವರ ಮನೆಯ ಮುಂದೆ ಕಾರು ನಿಲ್ಲಿಸಿದರೆ, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿ ಜನರಿಗೆ ತೊಂದರೆ ನೀಡಿದರೆ ದಂಡ ವಿಧಿಸುವುದಕ್ಕೆ ಅರ್ಥವಿದೆ. ನಮ್ಮ ಮನೆಯ ಮುಂದೆ ನಮ್ಮ ವಾಹನಗಳನ್ನು ನಿಲ್ಲಿಸಿದರೆ ತಪ್ಪೇನು? ಮನೆ ಮಾಡುವುದೇ ಕಷ್ಟ ಎನ್ನುವ ಕಾಲದಲ್ಲಿ ಮಧ್ಯಮ ವರ್ಗದ ಜನರು ಇರುವ ಕಡಿಮೆ ಜಾಗದಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ. ತಮ್ಮ ಮನೆ ಮುಂದೆ ಗಾಡಿ ನಿಲ್ಲಿಸುವುದಕ್ಕೆ ದಂಡ ವಿಧಿಸುವ ಸರ್ಕಾರದ ಯೋಜನೆ ಹಾಗೂ ಯೋಚನೆ ಸರಿಯಿಲ್ಲ. ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿ ಮಾಡಲು ಕ್ರಮ ಕೈಗೊಳ್ಳಬೇಕು. 

ಮನೆ ಮುಂದೆ ಕಾರು ಹಾಗೂ ಇತರೆ ವಾಹನಗಳನ್ನು ನಿಲ್ಲಿಸಿದರೆ, ತೆರಿಗೆ ಅಥವಾ ದಂಡ ಹಾಕುವ ನಿಯಮ ಆಘಾತಕಾರಿ. ದೇಶದ ಯಾವುದೇ ರಾಜ್ಯದಲ್ಲಿ ಇಂಥ ನಿಯಮ ಜಾರಿಯಲ್ಲಿಲ್ಲ. ಬಡತನದಿಂದ ಶ್ರಮ ಪಟ್ಟು ಮಧ್ಯಮ ವರ್ಗಕ್ಕೆ ಬಂದು ವಾಹನ ತೆಗೆದುಕೊಳ್ಳಲು ಯೋಚಿಸುವವರಿಗೆ ಮರ್ಮಾಘಾತವಾಗಲಿದೆ. ಇದು ಸಾಮಾನ್ಯ ಜನರಿಗೆ ಹೊರೆಯಾಗಲಿದೆ. ಸರ್ಕಾರ ಮರು ಪರಿಶೀಲಿಸುವುದು ಅಗತ್ಯ. 

ಸಿ.ಎನ್.ಭಂಡಾರೆ, ಹಿರಿಯ ನಾಗರಿಕರ ವೇದಿಕೆ ಗೌರವಾಧ್ಯಕ್ಷ, ವಿಶ್ವೇಶ್ವರಯ್ಯ ಬಡಾವಣೆ

ಜನಸಾಮಾನ್ಯರ ಪರ ನಿರ್ಧಾರವಿರಲಿ

ಇತ್ತೀಚಿನ ದಿನಗಳಲ್ಲಿ ಮಧ್ಯಮವರ್ಗದ ಜನರು ಒಂದು ಸ್ವಂತ ಮನೆ, ಕಾರು ಹೊಂದಲು ತಮ್ಮ ಸೇವಾ ಅವಧಿಯಲ್ಲಿ ಸಾಲ ಮಾಡಿಯೇ ಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ನಮ್ಮ ಮನೆಯ ಮುಂದೆ ಕಾರು ನಿಲ್ಲಿಸಿದರೆ ಶುಲ್ಕ ವಿಧಿಸುವ ಜಿಬಿಎ ನಿರ್ಧಾರ ಸಾಮಾನ್ಯ ಜನರ ಹೊಟ್ಟೆಯ ಮೇಲೆ ಹೊಡೆದಂತೆ. ಅಲ್ಲದೇ ನಾಗರಿಕರ ಹಕ್ಕು ಚ್ಯುತಿಯೂ ಹೌದು. ಈ ಅಧಿಸೂಚನೆ ಹೊರಡಿಸುವ ಮೊದಲು ಚೆನ್ನಾಗಿ ಪರಾಮರ್ಶಿಸಬೇಕು. ಜನಸಾಮಾನ್ಯರಿಗೆ ಹೊರೆಯಾಗುವ ಶುಲ್ಕ ವಿಧಿಸುವ ನಿರ್ಧಾರ ಕೈಬಿಡಬೇಕು.

ಕೆ.ಎಂ. ರುಕ್ಮಿಣಿ, ಬೆಮೆಲ್ ಲೇಔಟ್, ರಾಜರಾಜೇಶ್ವರಿ ನಗರ

ಬಾಡಿಗೆದಾರರಿಗೆ ಬೀಳಲಿದೆ ಹೊರೆ

ಬೆಂಗಳೂರಿನಲ್ಲಿ ಸ್ವಂತ ಅಥವಾ ಬಾಡಿಗೆ ಮನೆ ಎಲ್ಲೇ ಇದ್ದರೂ ಕಾರು ಇಲ್ಲದೆ ಇದ್ದರೆ ಬದಕಲು ಸಾಧ್ಯವಿಲ್ಲ ಅನ್ನುವ ಹಾಗಿದೆ. ಇಲ್ಲಿ ಇರುವುದಕ್ಕೆ ಬಾಡಿಗೆ ಮನೆ ಸಿಗುವುದೇ ಕಷ್ಟ. ಇಂಥ ಸಂದರ್ಭದಲ್ಲಿ ಕಾರ್ ಪಾರ್ಕಿಂಗ್ ಇರುವ ಮನೆಗಳು ಸಿಗುವುದು ದುರ್ಲಭ. ಮನೆ ಮುಂದೆ ಕಾರು ನಿಲ್ಲಿಸುವುದು ಅನಿವಾರ್ಯ. ಕಾರು ಪಾರ್ಕಿಂಗ್‌ಗೆ ದರ ವಿಧಿಸಿದರೆ ಮನೆ ಮಾಲೀಕರು ಬಾಡಿಗೆದಾರರಿಂದ ಅದನ್ನು ವಸೂಲಿ ಮಾಡುತ್ತಾರೆ. ಬಾಡಿಗೆದಾರರು ಬೆಂಗಳೂರಿನಲ್ಲಿ ಜೀವನ ನಡೆಸುವುದೇ ಕಷ್ಟವಾಗಲಿದೆ. ಜನರು ಸುಖವಾಗಿರಲು ಸರ್ಕಾರ ಯೋಜನೆ ರೂಪಿಸಬೇಕೇ ಹೊರತು ತೊಂದರೆ ಕೊಡಲು ಅಲ್ಲ.

ನಾರಾಯಣ ಸ್ವಾಮಿ ಟಿ.ಕೆ., ಜಿಕೆವಿಕೆ ಬಡಾವಣೆ, ಜಕ್ಕೂರು

ಒಂದು ಮನೆ ಒಂದು ಕಾರು ವಿನಾಯಿತಿ ಇರಲಿ

ಮಧ್ಯಮ ವರ್ಗದವರಾದ ನಾವು ಸುಮಾರು 40 ವರ್ಷಗಳ ಹಿಂದೆ ಒಂದು ಚಿಕ್ಕ ಮನೆ ಕಟ್ಟಿಕೊಂಡಾಗ ಮುಂದೊಂದು ದಿನ ನಾವೂ ಕಾರು ಖರೀದಿಸುತ್ತೇವೆಂದು ಕನಸಿನಲ್ಲೂ ಎಣೆಸಿರಲಿಲ್ಲ. ಆದುದರಿಂದ ಕಾರು ನಿಲ್ಲಿಸಲು ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಕೆಲ ವರ್ಷಗಳ ಹಿಂದೆ ಅವಶ್ಯಕತೆಗಾಗಿ ಒಂದು ಸಣ್ಣ ಕಾರು ಇಟ್ಟುಕೊಂಡಿದ್ದು ಮನೆಮುಂದೆ ರಸ್ಥೆಯ ಬದಿ ನಿಲ್ಲಿಸುತ್ತಾ ಬಂದಿದ್ದೇವೆ. ಈಗ ಕಾರು ನಿಲುಗಡೆಗೆ ಶುಲ್ಕ ವಿಧಿಸಲು ಮುಂದಾಗಿರುವುದು ದಿಗ್ಭ್ರಮೆ ಉಂಟುಮಾಡಿದೆ. ಇನ್ನುಮುಂದೆ ಮನೆಕಟ್ಟುವ ಹಾಗೂ ಕಾರು ಖರೀದಿಸುವ ಮಾಲೀಕರಿಗೆ ಅನ್ವಯಿಸುವಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿ. ವಿದ್ಯುತ್ ಮೀಟರ್‌ಗೆ ಅನುಸಾರವಾಗಿ ‘ಒಂದು ಮನೆಗೆ ಒಂದು ಕಾರು ನಿಲುಗಡೆಗೆ ವಿನಾಯಿತಿ’ ಎಂದಾದರೂ ನಿಯಮ ಮಾಡಲಿ. 

ಸರ್ಕಾರ ದೂರಿ ಪ್ರಯೋಜನವಿಲ್ಲ

ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುವಾಗ ಸಂದರ್ಶಕರ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಬಿಲ್ಡರ್‌ಗಳಿಗೆ ದಂಡ ವಿಧಿಸಬೇಕು. ಹಾಗೆಯೇ ಹೊಸದಾಗಿ ಎರಡು ಮೂರು ಮಹಡಿಗಳ ಮನೆ ಕಟ್ಟುವವರು ಅನುಮೋದಿತ ನಕ್ಷೆ ಪ್ರಕಾರ ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸದೇ ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ? ಬಹಳ ಹಳೆಯ ಮನೆಯಾದರೆ ಸರಿ. ಆ ಕಾಲದಲ್ಲಿ ಹಲವರ ಬಳಿ ಸ್ವಂತ ವಾಹನ ಇದ್ದಿರಲಿಲ್ಲ. ಸೆಟ್‌ಬ್ಯಾಕ್ ಬಿಡದೆ, ಪಾರ್ಕಿಂಗ್‌ಗೂ ಜಾಗ ಬಿಡದೆ ಒಂದರ ಮೇಲೆ ಒಂದರಂತೆ ಮನೆಗಳನ್ನು ಕಟ್ಟಿದ್ದಾರೆ. ಈಗ ಸರ್ಕಾರವನ್ನು ದೂರುವುದು ಸರಿಯಲ್ಲ.

ಬಿ.ಎನ್. ಭರತ್, ಭರತ ನಗರ

ಅಂಗಡಿ ಮುಂದೆ ಸ್ಕೂಟರ್ ನಿಲ್ಲಿಸಿ ಒಂದು ಜ್ಯೂಸ್ ಕುಡಿದು ಗಾಡಿ ತೆಗೆಯಲು ಹೋದರೆ, ಪಾರ್ಕಿಂಗ್ ₹10 ಕೊಡಿ. ಇನ್ನೊಂದು ಕಡೆ 4-5 ಪೇಪರ್ ಜೆರಾಕ್ಸ್ ತೆಗೆದುಕೊಂಡು ಹಿಂದೆ ನೋಡಿದರೆ ಪಾರ್ಕಿಂಗ್ ಶುಲ್ಕ ಕೊಡಿ. ಮತ್ತೊಂದು ಕಡೆ ದಿನಸಿ ಸಾಮಾನು ಖರೀದಿಸಿ ಹೊರಟರೆ ಪಾರ್ಕಿಂಗ್ ಫೀ ಸಾರ್ ಎಂಬುದು ಶುರುವಾದರೆ ಜನಸಾಮಾನ್ಯರು ಏನು ಮಾಡಬೇಕು? ಆದಾಯ ಹೆಚ್ಚಿಸಬೇಕೆಂಬ ಏಕೈಕ ಉದ್ದೇಶಕ್ಕಾಗಿ ಈ ರೀತಿಯ ಅತಿರೇಕದ ಕ್ರಮಗಳು ಸಲ್ಲದು. ಅದೂ ಅಲ್ಲದೆ ಸರ್ಕಾರದ ಖಜಾನೆಗೆ ಈ ಹಣ ಹೋಗುವುದಿಲ್ಲ. ಗುತ್ತಿಗೆದಾರರು ಸುಲಭವಾಗಿ ಪೆಟ್ಟಿಗೆ ತುಂಬಿಸಿಕೊಳ್ಳುತ್ತಾರೆ. ನಿತ್ಯ ಜಗಳ, ತಿಕ್ಕಾಟಗಳು ಆರಂಭವಾದರೆ ಆಶ್ಚರ್ಯವಿಲ್ಲ. ಸರ್ಕಾರವು ಆತುರ ಮಾಡದೆ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.

ಎನ್.ರಾಘವನ್, ವಿಲ್ಸನ್ ಗಾರ್ಡನ್

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ