
ಕೆಆರ್‌ಎಸ್‌ನಿಂದಲೂ ಹೆಚ್ಚಿದ ಹೊರಹರಿವು, ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರೆಷ್ಟಿದೆ
ಬೆಂಗಳೂರು: ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಸೂಚಿಸಿರುವ ನಡುವೆಯೇ ಕಾವೇರಿ ಕಣಿವೆಯ ಜಲಾಶಯಗಳಿಂದ ಈಗಲೂ ಸುಮಾರು 17 ಸಾವಿರ ಕ್ಯುಸೆಕ್ ಹರಿದು ಹೋಗುತ್ತಿದೆ.
ಮಂಡ್ಯ, ಮೈಸೂರು ಭಾಗದ ರೈತರ ತೀವ್ರ ವಿರೋಧದ ನಡುವೆಯೂ ಕೃಷ್ಣರಾಜ ಸಾಗರ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದ್ದು, ಸೋಮವಾರ ಮತ್ತಷ್ಟು ಹೆಚ್ಚು ಮಾಡಲಾಗಿದೆ. ಕಬಿನಿ ಜಲಾಶಯದಿಂದಲೂ ಒಳಹರಿವಿಗಿಂತ ಹೆಚ್ಚಿನ ನೀರು ಹರಿದು ಹೋಗುತ್ತಿದೆ. ಹೇಮಾವತಿ ಜಲಾಶಯ ತುಂಬದೇ ಇದ್ದರೂ ಇಲ್ಲಿಂದಲೂ ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚು ಮಾಡಲಾಗಿದೆ.
ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸೋಮವಾರ ಬೆಳಿಗ್ಗೆ ಹೊತ್ತಿಗೆ 14062 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಹೊರ ಹರಿವಿನ ಪ್ರಮಾಣ ಸುಮಾರು 23 ಸಾವಿರ ಕ್ಯುಸೆಕ್ ನಷ್ಟಿದೆ. ನಾಲ್ಕು ಜಲಾಶಯಗಳಲ್ಲಿ ಸದ್ಯ 88.79 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ 77ರಷ್ಟು ಭರ್ತಿಯಾಗಿವೆ. ಕಳೆದ ವರ್ಷ ಇದೇ ದಿನ 113 ಟಿಎಂಸಿ ನೀರು ಸಂಗ್ರಹವಾಗಿತ್ತು. ಇಲ್ಲಿ 114 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.
ಕಬಿನಿ ಜಲಾಶಯಕ್ಕೆ ಒಳಹರಿವು 7747 ಕ್ಯುಸೆಕ್ ಗೆ ಕಡಿಮೆಯಾಗಿದೆ. ಆದರೆ ಹೊರ ಹರಿವು 13600 ಕ್ಯುಸೆಕ್ ಮುಂದುವರಿದಿದೆ. ಜಲಾಶಯದ ನೀರಿನ ಮಟ್ಟವು 2280 ಅಡಿಯಷ್ಟಿದೆ. ಜಲಾಶಯದಲ್ಲಿ ಸದ್ಯ 17 ಟಿಎಂಸಿ ನೀರಿದ್ದು, ಶೇ 87ಕ್ಕೆ ನೀರಿನ ಮಟ್ಟ ಇಳಿದಿದೆ. ಮೂರು ದಿನದಲ್ಲಿಯೇ 2 ಟಿಎಂಸಿ ನೀರಿನ ಪ್ರಮಾಣ ಕಡಿಮೆಯಾಗಿದ್ದು., ಹೆಚ್ಚು ನೀರು ಕಪಿಲಾ ನದಿ ಮೂಲಕ ಹರಿದು ಹೋಗಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ಹೊರ ಹರಿವನ್ನು 3186ಕ್ಕೆ ಏರಿಕೆ ಮಾಡಲಾಗಿದೆ. ಜಲಾಶಯದಲ್ಲಿ ಶೇ 63ರಷ್ಟು ನೀರು ಸಂಗ್ರಹವಿದೆ. ಸದ್ಯ ನೀರಿನ ಮಟ್ಟ 109.55 ಅಡಿ ಇದೆ. ಕಳೆದ ವರ್ಷ 124.46 ಅಡಿ ನೀರಿದ್ದು ಜಲಾಶಯ ಭರ್ತಿಯಾಗಿತ್ತು. ಸದ್ಯ 2069 ಕ್ಯುಸೆಕ್ ನೀರು ಮಾತ್ರ ಜಲಾಶಯಕ್ಕೆ ಹರಿದು ಬರುತ್ತಿದೆ. ಒಂದೇ ದಿನದಲ್ಲಿ 200 ಕ್ಯುಸೆಕ್ ನೀರು ಹೆಚ್ಚು ಹರಿಸಲಾಗುತ್ತಿದೆ.
ಕೊಡಗಿನ ಹಾರಂಗಿ ಜಲಾಶಯಕ್ಕೆ 2928 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 2699 ಕ್ಯುಸೆಕ್ ಹೊರ ಹರಿವು ಇದೆ. ಜಲಾಶಯದಲ್ಲಿ ಶೇ 97ರಷ್ಟು ನೀರಿದ್ದು, 8.25 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟು 2858.27 ಅಡಿ ಇದೆ.
ಹಾಸನ ಜಿಲ್ಲೆ ಹೇಮಾವತಿ ಜಲಾಶಯದಲ್ಲಿ ಶೇ 87ರಷ್ಟು ನೀರು ಸಂಗ್ರಹವಿದ್ದು, ಭರ್ತಿಯಾಗಲು ಇನ್ನೂ ಐದು ಅಡಿ ಬಾಕಿ ಇದೆ. ಜಲಾಶಯದಲ್ಲಿ 2916.75 ಅಡಿ ನೀರು ಸಂಗ್ರಹವಿದ್ದು, 32.30 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಿತ್ತು.