
ಹುಲಸೂರಲ್ಲಿ ಹೆಚ್ಚಿದ ಮಂಗಗಳ ಕಾಟ, ಸಾರ್ವಜನಿಕರಲ್ಲಿ ಆತಂಕ
ಹುಲಸೂರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಂಗಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ನಿತ್ಯ ಆತಂಕದಲ್ಲಿಯೇ ಓಡಾಡುವಂತಾಗಿದೆ. ಮನೆಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ಹಾಳು ಮಾಡುವ ಮಂಗಗಳು ಒಂದೆಡೆಯಾದರೆ, ಗುಂಪಾಗಿ ಸಂಚರಿಸಿ ಜನರನ್ನು ಬೆನ್ನಟ್ಟುವ ಬೀದಿ ನಾಯಿಗಳು ಮತ್ತೊಂದೆಡೆ ತೊಂದರೆ ನೀಡುತ್ತಿವೆ.
ಪಟ್ಟಣದ ಬಸವೇಶ್ವರ ವೃತ್ತ, ಬಸವಕಲ್ಯಾಣ–ಭಾಲ್ಕಿ ಮುಖ್ಯ ರಸ್ತೆ, ಗುರು ಬಸವೇಶ್ವರ ಸಂಸ್ಥಾನ ಮಠ, ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠ, ಗಾಂಧಿ ವೃತ್ತದಿಂದ ಲಕ್ಷ್ಮಿ ಚೌಕ್‌ವರೆಗೆ ಹಾಗೂ ವಿವಿಧ ಬಡಾವಣೆಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ.
ಗುಂಪು ಗುಂಪಾಗಿ ಬರುವ ಮಂಗಗಳು ಮನೆಗಳ ಚಾವಣಿ, ನೀರಿನ ಟ್ಯಾಂಕ್, ಪೈಪ್ ಹಾಗೂ ವಿದ್ಯುತ್ ತಂತಿಗಳ ಮೇಲೆ ಓಡಾಡುತ್ತಿವೆ. ಬಾಗಿಲು ತೆರೆದಿರುವುದನ್ನು ಗಮನಿಸಿದರೆ ಒಳಗೆ ನುಗ್ಗಿ ಅಡುಗೆ ಮನೆಯಲ್ಲಿರುವ ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುತ್ತಿವೆ.
ಒಣಗಲು ಹಾಕಿದ ಬಟ್ಟೆ, ಹಪ್ಪಳ, ಸಂಡಿಗೆ ಹಾಗೂ ಹಣ್ಣುಗಳನ್ನು ಹಾಳು ಮಾಡುತ್ತಿವೆ. ಮನೆಗಳ ಆವರಣದಲ್ಲಿರುವ ಗಿಡಗಳನ್ನು ಮುರಿದು ಹಾಕಿ, ಅಲ್ಲಿಯೇ ಮಲ, ಮೂತ್ರ ವಿಸರ್ಜಿಸುವುದರಿಂದ ನಿವಾಸಿಗಳಿಗೆ ಸ್ವಚ್ಛತೆಯ ಸಮಸ್ಯೆಯೂ ಎದುರಾಗಿದೆ.
ಮಂಗಗಳನ್ನು ಓಡಿಸಲು ನಿವಾಸಿಗಳು ಕೋಲು, ಬಡಿಗೆ ಹಿಡಿದು ಅವುಗಳನ್ನು ಓಡಿಸಲು ಮುಂದಾದರೆ ಮರುದಾಳಿ ನಡೆಸುವ ಭೀತಿಯೂ ಇದೆ. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಹುಲಸೂರ ಪಟ್ಟಣದಲ್ಲಿ ಈ ಹಿಂದೆ ಮಂಗವೊಂದು 12ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿದ್ದ ಘಟನೆ ನಡೆದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಂಗವನ್ನು ಸೆರೆಹಿಡಿದಿದ್ದರು. ಇದೀಗ ಮತ್ತೆ ಮಂಗಗಳ ಹಾವಳಿ ಕಾಣಿಸಿಕೊಂಡಿರುವುದು ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.
ಬೀದಿ ನಾಯಿಗಳದ್ದೂ ಕಾಟ: ಮತ್ತೊಂದೆಡೆ ಪಟ್ಟಣದ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಗುಂಪಾಗಿ ಸೇರುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವವರನ್ನು ಕಂಡ ಕೂಡಲೇ ಬೊಗಳುತ್ತಾ ಬೆನ್ನಟ್ಟುತ್ತಿವೆ. ದ್ವಿಚಕ್ರ ವಾಹನ ಸವಾರರಿಗೆ ಬೀದಿ ನಾಯಿಗಳ ಹಾವಳಿ ತೊಂದರೆಯಾಗಿದೆ. ನಾಯಿಗಳು ಏಕಾಏಕಿ ರಸ್ತೆಗೆ ಅಡ್ಡಬರುವುದರಿಂದ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವ ಅಪಾಯವಿದೆ.
ಪರಿಹಾರ ಯಾವಾಗ? ಎನ್ನುತ್ತಿರುವ ಜನ
ಮಂಗಗಳು ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರ ನೆಮ್ಮದಿ ಹಾಳಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ, ಇದಕ್ಕೆ ಪರಿಹಾರ ಯಾವಾಗ ಎಂಬುದು ಸ್ಥಳೀಯ ನಿವಾಸಿಗಳ ಅಳಲಾಗಿದೆ.
‘ಅಧಿಕಾರಿಗಳೇ ಜನರ ಸುರಕ್ಷತೆಗೆ ಆದ್ಯತೆ ನೀಡಿ’
‘ಮಂಗ ಹಾಗೂ ಬೀದಿ ನಾಯಿಗಳ ಹಾವಳಿ ಕೇವಲ ಕಿರಿಕಿರಿಯ ಸಮಸ್ಯೆಯಾಗಿ ಉಳಿದಿಲ್ಲ. ಇದು ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಸುರಕ್ಷತೆಯ ಪ್ರಶ್ನೆಯಾಗಿದೆ. ಪಟ್ಟಣ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಕಾರ್ಯಾಚರಣೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಂಗಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಸ್ಥಳಾಂತರಿಸುವುದರ ಜತೆಗೆ, ಬೀದಿ ನಾಯಿಗಳ ನಿಯಂತ್ರಣಕ್ಕೂ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು’ ಎಂಬುದು ನಿವಾಸಿಗಳ ಒತ್ತಾಯ.
ಮಂಗಗಳ ಹಾವಳಿ ಹೆಚ್ಚಾಗಿರುವುದರಿಂದ ಮನೆ ಬಾಗಿಲು ತೆರೆದಿಡಲೂ ಭಯವಾಗುತ್ತಿದ್ದು, ಮಕ್ಕಳ ಹಾಗೂ ವೃದ್ಧರ ಸುರಕ್ಷತೆಯ ಬಗ್ಗೆಯೂ ಆತಂಕವಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು
ಗುಲಾಂ ಬಡಾಯಿ, ಸ್ಥಳೀಯ ನಿವಾಸಿ
ರಾತ್ರಿ ವೇಳೆ ಬೀದಿ ನಾಯಿಗಳು ಗುಂಪಾಗಿ ರಸ್ತೆಯಲ್ಲಿ ಓಡಾಡುತ್ತವೆ. ಒಬ್ಬಂಟಿಯಾಗಿ ಸಂಚರಿಸಲು ಭಯವಾಗುತ್ತದೆ. ವಾಹನ ಸವಾರರು ಕೂಡ ಎಚ್ಚರಿಕೆಯಿಂದ ಓಡಾಡಬೇಕಾಗಿದೆ. ಗ್ರಾಮ ಪಂಚಾಯಿತಿಯವರು ತಕ್ಷಣ ಕ್ರಮ ಕೈಗೊಳ್ಳಬೇಕು.
ರಾಜಕುಮಾರ ತೋಂಡಾರೆ, ಸ್ಥಳೀಯ ನಿವಾಸಿ
ಮಂಗಗಳು ಹಾಗೂ ಬೀದಿ ನಾಯಿಗಳ ಹಾವಳಿ ಕುರಿತು ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ
ಶಿವಾನಂದ ಮೇತ್ರೆ, ತಹಶೀಲ್ದಾರ್ ಹುಲಸೂರ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-33-609607583