
ಭಾರತ್ ಜೋಡೊ ಸಂಘಕ್ಕೆ ₹10 ಲಕ್ಷ ಅನುದಾನ; ರಾಜಕೀಯ ಕಾರ್ಯಕರ್ತರ ತಾಣವಾಗುವ ಭೀತಿ
ಬಳ್ಳಾರಿ: ರಾಜ್ಯದಾದ್ಯಂತ ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ‘ಭಾರತ್ ಜೋಡೊ ಯುವ ಸಂಘ’ (ಬಿಜೆವೈಎಸ್)ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಪ್ರತಿ ಸಂಘಕ್ಕೆ ನೀಡಲು ಹೊರಟಿರುವ ₹10 ಲಕ್ಷ ಅನುದಾನವೇ ಈಗ ಅನುಮಾನ ಹಾಗೂ ಆತಂಕಗಳಿಗೆ ಕಾರಣವಾಗಿದ್ದು, ಯೋಜನೆ ರಾಜಕೀಯ ಕಾರ್ಯಕರ್ತರ ತಾಣವಾಗುವ ಭೀತಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಹಳಿ ತಪ್ಪದಂತೆ ತಡೆಯಲು ಸಂಘಗಳಿಗೆ ಸೂಕ್ತ ಬೈಲಾ ರೂಪಿಸಲು ಜಿಲ್ಲಾಡಳಿತಗಳು ಮುಂದಾಗಿವೆ.
ಕಳೆದ ತಿಂಗಳು ಸರ್ಕಾರ ಹೊರಡಿಸಿರುವ ಆದೇಶದಂತೆ, ರಾಜ್ಯದ 6,000 ಗ್ರಾಮ ಪಂಚಾಯಿತಿಗಳು ಹಾಗೂ 4,000 ನಗರ ವಾರ್ಡ್‌ಗಳು ಸೇರಿದಂತೆ ಒಟ್ಟು 10,000 ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ.
ರಾಜ್ಯದ ಪ್ರತಿ ಸಂಘಕ್ಕೆ ತಲಾ ₹10 ಲಕ್ಷದಂತೆ ಒಟ್ಟು ₹1,000 ಕೋಟಿ ಅನುದಾನ ಮತ್ತು ಆಡಳಿತಾತ್ಮಕ ಮತ್ತು ಇತರೆ ವೆಚ್ಚಕ್ಕೆ ₹10 ಕೋಟಿ ಸೇರಿದಂತೆ ಒಟ್ಟು ₹1,010 ಕೋಟಿ ವೆಚ್ಚ ಅಂದಾಜಿಸಲಾಗಿದೆ.
ಒಂದು ಸಂಘವು 16ರಿಂದ 35 ವರ್ಷ ವಯೋಮಿತಿಯ ಕನಿಷ್ಠ 100 ಯುವಕರನ್ನು ಒಳಗೊಂಡಿರಬೇಕು. 'ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960'ರ ಅಡಿಯಲ್ಲಿ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕ್ರೀಡೆ, ಸೈಬರ್ ಭದ್ರತೆ ಅರಿವು, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ಸಮುದಾಯ ಅಭಿವೃದ್ಧಿ ಕೆಲಸಗಳನ್ನು ಈ ಸಂಘಗಳು ನಡೆಸಬೇಕಿದೆ.
ರಾಜಕೀಯ ನುಸುಳುವಿಕೆ ಅಪಾಯ: ‘ಯಾವುದೇ ಪಕ್ಷಪಾತವಿಲ್ಲದೆ ಸಮು ದಾಯದ ಪ್ರತಿಯೊಬ್ಬರಿಗೂ ಮುಕ್ತ ಅವಕಾಶ’ ನೀಡಬೇಕು ಎಂದು ಸರ್ಕಾರಿ ಆದೇಶದಲ್ಲಿ ಹೇಳಲಾಗಿದ್ದರೂ, ಅನು ಷ್ಠಾನ ಮಟ್ಟದಲ್ಲಿ ತೀವ್ರ ಸವಾಲುಗಳು ಎದುರಾಗುತ್ತಿವೆ ಎನ್ನಲಾಗಿದೆ.
ಪಕ್ಷಪಾತದ ಭೀತಿ: ಸ್ಥಳೀಯವಾಗಿ ಭಾರೀ ಮೊತ್ತದ ಅನುದಾನ ಸಿಗುತ್ತದೆ ಎಂಬ ಕಾರಣಕ್ಕೆ ಅನರ್ಹರು ಮತ್ತು ಪ್ರಭಾವಿಗಳು ಸಂಘಗಳನ್ನು ವಶಪಡಿಸಿಕೊಳ್ಳಲು ಮುಗಿಬೀಳುವ ಆತಂಕ ಸದ್ಯ ವ್ಯಕ್ತವಾಗಿದೆ. ‘ಭಾರತ್ ಜೋಡೊ’ ಎಂಬ ಹೆಸರೇ ರಾಜಕೀಯ ಸ್ಪರ್ಶ ಹೊಂದಿದ್ದು, ಆಡಳಿತ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಈ ಸಂಘಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಂಚು ರೂಪಿಸುವ ಆತಂಕಗಳು ಇವೆ. ನೈಜ ಯುವಜನರ ಬದಲು ರಾಜಕೀಯ ಕಾರ್ಯಕರ್ತರು ಪದಾಧಿಕಾರಿಗಳಾದರೆ, ಸರ್ಕಾರದ ಹಣ ರಾಜಕೀಯ ಚಟುವಟಿಕೆಗಳಿಗೆ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂಬುದು ಆತಂಕ.
‘ಬೈಲಾ’ ಮೂಲಕ ಅಂಕುಶ: ರಾಜಕೀಯ ನುಸುಳುವಿಕೆಯನ್ನು ತಡೆಯಲು ಹಾಗೂ ಅನುದಾನ ದುರ್ಬಳಕೆಗೆ ಕಡಿವಾಣ ಹಾಕಲು ಬಳ್ಳಾರಿ ಜಿಲ್ಲಾಡಳಿತಗಳು ಸೂಕ್ತ, ಕಟ್ಟುನಿಟ್ಟಿನ 'ಬೈಲಾ' (ಉಪವಿಧಿ)ಗಳನ್ನು ರೂಪಿಸಲು ಚಿಂತನೆ ನಡೆಸಿದೆ.
ರಾಜಕೀಯ ಪಕ್ಷದ ಹಸ್ತಕ್ಷೇಪ, ಚಟುವಟಿಕೆಯನ್ನು ನಿಯಂತ್ರಿಸಲು, ಅನುದಾನವನ್ನು ಸದ್ಬಳಕೆ ಮಾಡಿ ಕೊಳ್ಳಲು, ಪ್ರತಿ ಪೈಸೆಯ ವೆಚ್ಚದ ಮೇಲೂ ನಿಗಾ ವಹಿಸಲು ಬೈಲಾ ರೂಪಿಸುವ ಇರಾದೆಯನ್ನು ಜಿಲ್ಲಾಡಳಿತ ಹೊಂದಿದೆ ಎನ್ನಲಾಗಿದೆ. ಸದಸ್ಯರು ಮತ್ತು ತರಬೇತುದಾರರ ( ಗೌರವಧನ ₹24,000) ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡುವ ಚಿಂತನೆಗಳಿವೆ ಎನ್ನಲಾಗಿದೆ.
ಸದುದ್ದೇಶದಿಂದ ಆರಂಭವಾದ ಯೋಜನೆ ರಾಜಕೀಯ ಬಲಿಪಶು ವಾಗದೆ, ಯುವಕರ ಸಬಲೀಕರಣಕ್ಕೆ ಬಳಕೆಯಾಗಬೇಕಾದರೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಬೈಲಾ ಮತ್ತು ಪಾರದರ್ಶಕ ನಿಯಮಾವಳಿಗಳು ಅತ್ಯಗತ್ಯ ಎಂಬ ಮಾತುಗಳು ಕೇಳಿಬಂದಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-25-138237468