
ನರೇಗಲ್ | ಜನರ ಕಾಳಜಿ: ಸಮೃದ್ಧ ‘ಹಸಿರು’, ಪ್ರಾಣಿ–ಪಕ್ಷಿಗಳಿಗೆ ಆಶ್ರಯ
ನರೇಗಲ್: ರೋಣದ ಅರಣ್ಯ ಉಪವಲಯವು ಸ್ಥಳೀಯರ ಸಹಕಾರದೊಂದಿಗೆ ನರೇಗಲ್ ಪಟ್ಟಣದ ವಿವಿಧೆಡೆ 2022ರಲ್ಲಿ ನೆಟ್ಟಿದ್ದ ಹಲವು ಜಾತಿಯ ಸಸಿಗಳು ಇಂದು ಸಮೃದ್ಧವಾಗಿ ಬೆಳೆದು ನಿಂತಿವೆ. ಪ್ರಾಣಿ–ಪಕ್ಷಿಗಳಿಗೆ ಆಶ್ರಯ, ಜನರಿಗೆ ನೆರಳು ನೀಡುತ್ತಿವೆ.
ಪಟ್ಟಣದ ಹಠಯೋಗಿ ವೀರಪ್ಪಜ್ಜನ ಮಠದ ರಸ್ತೆ, ಹಾಲಕೆರೆ ಕಡೆಗೆ ಹೋಗುವ ರಸ್ತೆ, ಪೊಲೀಸ್ ಠಾಣೆಯಿಂದ ಕೋಟುಮಚಗಿ ಕಡೆಗೆ ಹೋಗುವ ರಸ್ತೆ ಬದಿ ಸೇರಿದಂತೆ ಇತರೆ ಕಡೆಗಳಲ್ಲಿ ಅತ್ತಿಹಣ್ಣು, ಮಲ್ನಾಡ್ ಹುಣಸೆ ಹಣ್ಣಿನ ಗಿಡಗಳು ಸೊಬಗು ತಂದಿವೆ.
ಇಲಾಖೆಯಿಂದ ಹೊಂಗೆ, ಬೇವು, ಅರಳಿ, ಅತ್ತಿ, ಗುಲ್‌ಮೊಹರ್, ಅಲ್ಟೋ ಫಾರ್ಮ್, ಅತ್ತಿಹಣ್ಣು, ಮಲ್ನಾಡ್ ಹುಣಸೆ ಸೇರಿದಂತೆ ವಿವಿಧ ಜಾತಿಯ 900 ಸಸಿಗಳನ್ನು ನೆಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಸುತ್ತಲಿನ ಜಮೀನುಗಳ ರೈತರು ಹಾಗೂ ಸ್ಥಳೀಯರು ಕಾಳಜಿ ವಹಿಸಿದ್ದರಿಂದ ನೂರಾರು ಗಿಡಗಳು ಬೆಳೆದು ನಿಂತಿವೆ.
ಸಮೃದ್ದವಾಗಿ ಬೆಳೆದಿರುವ ಗಿಡಗಳು ರಸ್ತೆಯ ಅಂದವನ್ನು ಹೆಚ್ಚಿಸಿವೆ. ವೀರಪ್ಪಜ್ಜನ ಮಠ, ಮಾರನಬಸರಿ ಮಾರ್ಗ, ಹಾಲಕೆರೆ ರಸ್ತೆಯಲ್ಲಿ ವಾಯುವಿಹಾರ ಮಾಡುವವರು ಗಿಡಗಳಲ್ಲಿ ಬೆಳೆದಿರುವ ಹಣ್ಣುಗಳ ಸವಿ ಸವಿಯುತ್ತಿದ್ದಾರೆ.
‘ವಿವಿಧ ಜಾತಿಯ ಹಕ್ಕಿಗಳು ಗಿಡಗಳ ಮೇಲೆ ಗೂಡು ಕಟ್ಟಿದ್ದು, ಸಂತಾನೋತ್ಪತ್ತಿ ನಡೆಸುತ್ತಿವೆ. ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಹಿಂಡು ಹಿಂಡಾಗಿ ಬರುವ ಪಕ್ಷಿಗಳು ಇಲ್ಲಿನ ಹಣ್ಣುಗಳನ್ನು ತಿನ್ನುತ್ತಾ ಆಶ್ರಯ ಪಡೆದಿವೆ. ಪಕ್ಷಿಗಳ ಹಿಕ್ಕೆಯಿಂದ ಹೊಲಕ್ಕೆ ಗೊಬ್ಬರ ಸಿಗುತ್ತಿದೆ ಹಾಗೂ ಕೀಟಗಳ ಪ್ರಮಾಣವು ಕಡಿಮೆಯಾಗಿದೆ’ ಎನ್ನುವುದು ಕೃಷಿಕರ ಅಭಿಪ್ರಾಯ.
‘ಹೆಚ್ಚಿನ ಆಸಕ್ತಿ ವಹಿಸಿದ ಗ್ರಾಮಸ್ಥರು’
‘ಸಸಿಗಳನ್ನು ರಸ್ತೆ ಬದಿಯಲ್ಲಿ ನೆಡುವಾಗ ರೈತರ ಮನವೊಲಿಸುವುದು ಗ್ರಾಮಸ್ಥರನ್ನು ಪ್ರೇರೇಪಿಸುವುದು ಹಾಗೂ ಪರಿಸರದ ಕುರಿತು ತಿಳಿವಳಿಕೆ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನರೇಗಲ್, ಮಾರನಬಸರಿ, ಕೋಡಿಕೊಪ್ಪ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಆಸಕ್ತಿ ವಹಿಸಿದ ಪರಿಣಾಮ ಗಿಡಗಳು ಚೆನ್ನಾಗಿ ಬೆಳೆದಿವೆ’ ಎಂದು ರೋಣ ಉಪ ವಲಯ ಅರಣ್ಯಾಧಿಕಾರಿ ಅನ್ವರ ಕೋಲ್ಹಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-23-1589890931