ಕರ್ನಾಟಕದಲ್ಲಿ ಕೃಷಿ ಆಧರಿತ ಆಹಾರ ಸಂಸ್ಕರಣಾ ಯೋಜನೆಗೆ ಅಸ್ತು, ಉದ್ಯೋಗಕ್ಕೆ ಅವಕಾಶ
ಬೆಂಗಳೂರು: ಕರ್ನಾಟಕದಲ್ಲಿ ಕೃಷಿ ಆಧರಿತ ಆಹಾರ ಸಂಸ್ಕರಣೆ ಹಾಗೂ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಬಂಡವಾಳ ಹರಿದು ಬರಲಿದೆ. ಇದಕ್ಕಾಗಿ ಒಪ್ಪಿಗೆಯನ್ನೂ ನೀಡಲಾಗಿದೆ.
ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚು ಬಂಡವಾಳ ಸೆಳೆಯುವ ಪ್ರಯತ್ನ ಮುಂದುವರಿಸಿದ್ದು, ಬುಧವಾರ ಬೆಂಗಳೂರಿನಲ್ಲಿ ನಡೆದ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಒಟ್ಟು ₹ 6,252 ಕೋಟಿಗೂ ಹೆಚ್ಚು ಹೂಡಿಕೆಯ 83 ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಡಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಪೈಕಿ 24 ಯೋಜನೆಗಳು ತಲಾ ₹50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಲಿದ್ದು, ಇವುಗಳಿಂದ ₹ 4,703 ಕೋಟಿ ಹರಿದು ಬರಲಿದೆ. ₹15 ಕೋಟಿಯಿಂದ ₹50 ಕೋಟಿಯವರೆಗೆ ಬಂಡವಾಳ ಹಾಕುವಂಥ 57 ಯೋಜನೆಗಳಿದ್ದು ಇವುಗಳಿಂದ ₹1291.87 ಕೋಟಿ ಬರಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗಳ ಮೂಲಕ ₹258 ಕೋಟಿ ಬರಲಿದೆ . ಒಟ್ಟು 83 ಯೋಜನೆಗಳ ಪೈಕಿ 69 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಇರಲಿವೆ ಎನ್ನುವುದು ಸಚಿವರು ನೀಡಿರುವ ವಿವರಣೆ.
ಹೆಚ್ಚಿನ ಕಂಪನಿಗಳು ಆಹಾರ ಸಂಸ್ಕರಣೆ, ಸಕ್ಕರೆ, ಏರೋಸ್ಪೇಸ್, ಮಶೀನ್ ಟೂಲ್ಸ್, , ಜವಳಿ, ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್, ಜನರಲ್ ಎಂಜಿನಿಯರಿಂಗ್, ಇ.ಎಸ್.ಡಿ.ಎಂ. ಮತ್ತು ಉತ್ಪಾದನೆ ವಲಯಗಳಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿವೆ. ಜಸ್ವಿನ್ ವೆಂಚರ್ಸ್ ಮತ್ತು ಜಂಪನಾ ಕನ್ಸ್ಟ್ರಕ್ಷನ್ಸ್ ಕಂಪನಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಕ್ರಮವಾಗಿ 475 ಮತ್ತು ₹465 ಕೋಟಿ ವಿನಿಯೋಗಿಸಲಿವೆ.
ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರೀಸ್ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಉತ್ಪಾದನೆಗೆ ₹453.10 ಕೋಟಿ, ಆಕ್ಸಿಸ್ಕೇಡ್ ಏರೋಸ್ಪೇಸ್ ಇನ್ಫ್ರಾಸ್ಟ್ರಕ್ಚರ್ ದೇವನಹಳ್ಳಿಯಲ್ಲಿ₹426 ಕೋಟಿ, ಪ್ಯಾರಿ ಇಂಡಿಯಾ ಲಿಮಿಟೆಡ್ ಬಾಗಲಕೋಟೆಯಲ್ಲಿ ಬೆಲ್ಲ ತಯಾರಿಕೆ ಘಟಕಕ್ಕೆ ₹397.43 ಕೋಟಿ, ಲೀಫಿನಿಟಿ ಬಯೋಎನರ್ಜಿ ಕಂಪನಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕುಗಳಲ್ಲಿ ಒಟ್ಟು 4 ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕಗಳ ಸ್ಥಾಪನೆಗೆ ₹310 ಕೋಟಿ ಬಂಡವಾಳ ಹೂಡಲಿವೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾ.ನಲ್ಲಿ ಬ್ಲೂಲೈನ್ ಕಂಪನಿಯು ಎರಡು ಯೋಜನೆಗಳಿಗೆ ಕ್ರಮವಾಗಿ ₹201.50 ಕೋಟಿ ಮತ್ತು ₹177.50 ಕೋಟಿ, ಕೋಲಾರ ಜಿಲ್ಲೆ ಮಾಲೂರು ತಾ.ನಲ್ಲಿ ಸಾಂಡರ್ ಪ್ರಾಜೆಕ್ಟ್ಟ್ ಮತ್ತು ಅರೆಟ್ 22 ಲಿಮಿಟೆಡ್ ಕಂಪನಿಗಳು ಕ್ರಮವಾಗಿ ತಲಾ ₹ 200 ಕೋಟಿಯಂತೆ ಒಟ್ಟು ₹400 ಕೋಟಿ, ಸಾಂಡರ್ ಇನ್ಫ್ರಾ ಕಂಪನಿಯು ₹180 ಕೋಟಿ, ಧಾರವಾಡದಲ್ಲಿ ಸನ್ ಸ್ಟಾರ್ ಪ್ರಿಸಿಷನ್ ಫೋರ್ಜ್ ₹193.96 ಕೋಟಿ, ದೊಡ್ಡಬಳ್ಳಾಪುರದಲ್ಲಿ ಎಲ್ಮೆಷರ್ ಇಂಡಿಯಾ ₹150 ಕೋಟಿ, ಆನ್ ಡಾಟ್ ಕಂಪನಿಯು ಬೆಂಗಳೂರು ಪೂರ್ವ ತಾ.ನಲ್ಲಿ ₹120 ಕೋಟಿ, ಗೌರಿಬಿದನೂರಿನಲ್ಲಿ ಜಿ.ಆರ್.ಬಿ. ಡೇರಿ ಫುಡ್ಸ್ ₹110 ಕೋಟಿ ಮತ್ತು ಕೊಪ್ಪಳದಲ್ಲಿ ಪಯತ್ರಿಕೊಂಡ ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್ ಕಂಪನಿಯು ಮೆದುಕಬ್ಬಿಣ ಘಟಕದ ಸ್ಥಾಪನೆಗಾಗಿ ₹98 ಕೋಟಿ ಬಂಡವಾಳ ಹೂಡಲಿವೆ ಎನ್ನುವುದು ಸಚಿವ ಎಂ.ಬಿ.ಪಾಟೀಲರ ವಿವರಣೆ,